
ಚಿತ್ರದುರ್ಗ: ನಗರದ ಚಂದ್ರವಳ್ಳಿಯಲ್ಲಿ ಹುಲೆಗೊಂದಿ ಸಿದ್ದೇಶ್ವರಸ್ವಾಮಿ, ಪಂಚ ಲಿಂಗೇಶ್ವರಸ್ವಾಮಿ ಮತ್ತು ಧವಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಡೇ ಕಾರ್ತಿಕ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಕಾರ್ತಿಕ ಮಹೋತ್ಸವದ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳಿಗೆ ಅಭಿಷೇಕ ಸೇರಿದಂತೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಸಂಜೆ ನಡೆದ ಅದ್ದೂರಿ ದೀಪೋತ್ಸವದಲ್ಲಿ ಭಕ್ತರು ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು.
ಪೂಜಾ ಕಾರ್ಯದ ಬಳಿಕ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಚಂದ್ರವಳ್ಳಿ ವಾಯುವಿಹಾರ ಬಳಗ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಧವಳಗಿರಿ ಬಡಾವಣೆ, ಬಿವಿಕೆಎಸ್ ಲೇಔಟ್, ನೆಹರೂ ನಗರ, ತಾಲ್ಲೂಕಿನ ನಂದಿಪುರ, ಉಪ್ಪನಾಯಕಹಳ್ಳಿ, ಸೊಂಡೇಕೊಳ, ಗೊಡಬನಾಳ್, ಸಿದ್ದಾಪುರ, ಅನ್ನೇಹಾಳ್, ಕಾಟೇಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸವಿದರು.
ವಾಯು ವಿಹಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ನೀಡುವ ದೇಣಿಗೆಯಿಂದ ಕಾರ್ತಿಕ ಮಹೋತ್ಸವ, ವಿಶೇಷ ಪೂಜೆ ಹಾಗೂ ದಾಸೋಹ ನಡೆಸುವುದು ವಿಶೇಷ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ಹೆಚ್ಚು ಮೆರುಗು ಪಡೆದುಕೊಳ್ಳುತ್ತಿದೆ.
29ನೇ ವರ್ಷದ ಕಾರ್ತಿಕೋತ್ಸವ
ಚಿತ್ರದುರ್ಗದ ಹೊರವಲಯದ ಕಣಿವೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಶನಿವಾರ ಭಕ್ತರ ಸಮ್ಮುಖದಲ್ಲಿ ಆಂಜನೇಯ ಸುಬ್ರಹ್ಮಣ್ಯ ಸ್ವಾಮಿಯ 29ನೇ ವರ್ಷದ ಕಾರ್ತಿಕೋತ್ಸವ ನೆರವೇರಿತು. ಆಂಜನೇಯಸ್ವಾಮಿಗೆ ವಿವಿಧ ಪುಷ್ಪ ಹಣ್ಣು ವೀಳ್ಯದೆಲೆ ಆಕರ್ಷಕ ವಸ್ತು ಹೂವಿನ ಹಾರಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅರ್ಚಕರು ಅಲಂಕರಿಸಿದ್ದರು. ಸಾವಿರಾರು ಭಕ್ತರು ಬೆಳಿಗ್ಗೆಯಿಂದ ರಾತ್ರಿ 9ರವರೆಗೂ ಸರದಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಸೀತಾರಾಮರ ಪಲ್ಲಕ್ಕಿ ಮಾರ್ಗದುದ್ದಕ್ಕೂ ಸಾವಿರಾರು ದೀಪಗಳನ್ನು ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು. ನೆರೆದಿದ್ದವರು ಮಹಾಮಂಗಳಾರತಿ ಪಡೆದು ತೀರ್ಥ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.