ADVERTISEMENT

ಚಿತ್ರದುರ್ಗ: ಕಾಶಿ ಭಾಗೀರಥಿ ದೇವಿಯ ದೇವಾಲಯ ಪ್ರಾರಂಭೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:09 IST
Last Updated 31 ಜನವರಿ 2026, 7:09 IST
ಹೊಸದುರ್ಗದ ನೀರಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಶಿ ಭಾಗೀರಥಿ ದೇವಿಯ ದೇವಾಲಯಕ್ಕೆ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹಾಗೂ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಕಳಶಾರೋಹಣ ನೇರವೇರಿಸಿದರು 
ಹೊಸದುರ್ಗದ ನೀರಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಶಿ ಭಾಗೀರಥಿ ದೇವಿಯ ದೇವಾಲಯಕ್ಕೆ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹಾಗೂ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಕಳಶಾರೋಹಣ ನೇರವೇರಿಸಿದರು    

ಹೊಸದುರ್ಗ: ತಾಲ್ಲೂಕಿನ ಐತಿಹಾಸಿಕ ನೀರಗುಂದ (ನೀಲಾವತಿ ಪಟ್ಟಣ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಶಿಭಾಗೀರಥಿ ದೇವಿಯ  ದೇವಾಲಯ ಪ್ರಾರಂಭೋತ್ಸವ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಶಾರೋಹಣ ಕಾರ್ಯಕ್ರಮ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಮುಗಳಿ ಮತ್ತು ನೀರಗುಂದ ಅಣ್ಣ ತಮ್ಮಂದಿರುಗಳಿಂದ ಮೀಸಲು ಸೇವೆ, ದೇವರ ಆಗಮನ, ಗಂಗಾಪೂಜೆ, ಕುಂಭಮೇಳ, ಯಾಗಕಾಲ ಪ್ರವೇಶ, ಅಮ್ಮನವರ ವಿಗ್ರಹ ಪ್ರತಿಷ್ಠಾಪನೆ, ಚಕ್ರ ಸ್ಥಾಪನೆ, ನವಗ್ರಹ ಪೂಜಾ ಅಭಿಷೇಕ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿ ಇನ್ನಿತರ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಬೆಳಿಗ್ಗೆ ದೇವರು ಹಾಗೂ ಭಕ್ತರ ಸಮ್ಮುಖದಲ್ಲಿ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹಾಗೂ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಅವರು ನೂತನ ದೇವಾಲಯಕ್ಕೆ ಕಳಶಾರೋಹಣ ನೇರವೇರಿಸಿದರು.

ADVERTISEMENT

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ನೀರಗುಂದ ಐತಿಹಾಸಿಕ ಗ್ರಾಮ. ಹಿಂದಿನ ಕಾಲದಲ್ಲಿ ರಾಜರು ಇಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಈಗ ಕಾಶಿ ಭಾಗೀರಥಿದೇವಿ ದೇವಾಲಯ ಜೀರ್ಣೋದ್ಧಾರ ಆಗಿದೆ. ಈ ಧಾರ್ಮಿಕ ಶ್ರೇಷ್ಠತೆ ಜೊತೆಗೆ ಕಾಯಕ ನಿಷ್ಠೆಯ ಶ್ರೇಷ್ಠತೆಯನ್ನು ಜನರು ಮೈಗೂಡಿಸಿಕೊಳ್ಳಬೇಕು. ದುಶ್ಚಟ, ದುರಭ್ಯಾಸಗಳಿಗೆ ಬಲಿ ಆಗಬೇಡಿ. ದೇವಸ್ಥಾನ ಸ್ವಚ್ಛತೆ ಕಾಪಾಡುವ ಮೂಲಕ ದೈವ ಭಕ್ತಿ ಮೆರೆಯಬೇಕು’ ಎಂದು ಭಕ್ತರಿಗೆ ಕಿವಿಮಾತು ಹೇಳಿದರು.

ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ‘ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಭಾರಿಸಿದಲ್ಲಿ ಅಭಿವೃದ್ಧಿ ಕಾರ್ಯ ಹೆಚ್ಚಾಗುತ್ತದೆ ಎಂಬುದು ಸಂವಿಧಾನದ ಆಶಯ. ಆದರೆ, ಇಂದು ದೇವಸ್ಥಾನದ ಗಂಟೆ ಹೆಚ್ಚು ಭಾರಿಸುತ್ತಿದೆಯೇ ಹೊರತು, ಶಾಲೆಯ ಗಂಟೆ ಭಾರಿಸುವುದು ಕಡಿಮೆಯಾಗುತ್ತಿದೆ. ಪ್ರತಿಷ್ಠೆಗಾಗಿ ಕೋಮುವಾರು ದೇವಸ್ಥಾನ ನಿರ್ಮಿಸುತ್ತ ಹೋದರೆ ಹೇಗೆ ಒಗ್ಗಟ್ಟು ಬರುತ್ತದೆ’ ಎಂದು ಪ್ರಶ್ನಿಸಿದರು.

‘ಇಲ್ಲಿ ಹೊಸ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಆದರೆ, ಈ ಗ್ರಾಮದಲ್ಲಿರುವ ಐತಿಹಾಸಿಕ ದೇವಾಲಯ ಹಾಳಾಗಿ ನಾಯಿ, ನರಿ ಹೋಗುತ್ತಿದ್ದರೂ ಅದರ  ಜೀರ್ಣೋದ್ಧಾರಕ್ಕೆ ಮುಂದಾಗುತ್ತಿಲ್ಲ. ಪರಿಸ್ಥಿತಿ ಹೀಗಾದರೆ ಈ ಗ್ರಾಮದ ಐತಿಹ್ಯ ಉಳಿಯುವುದಾದರೂ ಹೇಗೆ? ಹಾಗಾಗಿ ಈ ಬಗ್ಗೆ ಪುರಾತತ್ವ ಇಲಾಖೆಯವರನ್ನು ಎಚ್ಚರಿಸುವ ಕೆಲಸ ಗ್ರಾಮಸ್ಥರಿಂದ ತುರ್ತು ಆಗಬೇಕಿದೆ’ ಎಂದು ಹೇಳಿದರು.

ಮುಖಂಡ ಕಾವಲ್ದಾರ್ ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ನಂದಿಪುರ ಮಠದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹೈಕೋರ್ಟ್ ವಕೀಲರಾದ ಎನ್.ಡಿ.ಮಂಜುನಾಥ್, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಚಂದ್ರಶೇಖರ್, ಮುಖಂಡರಾದ ಅರುಣ್ ಗೋವಿಂದಪ್ಪ, ಸುರೇಶ್, ಕೊಂಡಾಪುರ ಮಂಜುನಾಥ್, ಪಿ.ಕೆ. ತಿಪ್ಪೇಶ್, ಕುರ್ಕಿ ತಿಪ್ಪೇಶಪ್ಪ, ಡಿ.ಮಂಜಣ್ಣ, ಕರಿಬಸಪ್ಪ ಡಿ, ಆರ್.ಹನುಮಂತಪ್ಪ, ಶೆಟ್ಟಿಹಳ್ಳಿ ಸಿದ್ರಾಮಣ್ಣ, ನಾಗಭೂಷಣ್, ಪರಮೇಶ್ವರಪ್ಪ, ತಿಪ್ಪೇಶಪ್ಪ, ಓಂಕಾರಪ್ಪ, ರಾಜಪ್ಪ, ಹನುಮಂತಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.