ADVERTISEMENT

ಕೆಎಂಇಆರ್‌ಸಿ ನಿಧಿ | ಬಳ್ಳಾರಿಯಲ್ಲಿ ಸಮಾವೇಶ 16ಕ್ಕೆ: ಎಸ್‌.ಆರ್‌.ಹಿರೇಮಠ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:44 IST
Last Updated 3 ಆಗಸ್ಟ್ 2025, 6:44 IST
ಎಸ್‌.ಆರ್‌.ಹಿರೇಮಠ
ಎಸ್‌.ಆರ್‌.ಹಿರೇಮಠ   

ಚಿತ್ರದುರ್ಗ: ‘ಗಣಿ ಬಾಧಿತ ಪ್ರದೇಶ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ನಿಧಿಯಲ್ಲಿರುವ ಸಾವಿರಾರು ಕೋಟಿ ಹಣದ ಮೇಲೆ ರಾಜಕಾರಣಿಗಳ ಕೆಟ್ಟ ದೃಷ್ಟಿ ಬಿದ್ದಿದೆ. ಈ ಹಣ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಅನ್ವಯ ಗಣಿ ಬಾಧಿತ ಜಿಲ್ಲೆಗಳಿಗೆ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿ ಬಳ್ಳಾರಿಯಲ್ಲಿ ಆ. 16ರಂದು ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಹೇಳಿದರು.

‘ರಾಜಕಾರಣಿ, ಅಧಿಕಾರಿಗಳ ಉದ್ದಟತನದಿಂದಾಗಿ ಗಣಿ ಮಾಫಿಯಾ ರಾಜ್ಯದಲ್ಲಿ ನಿರಂತರ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ. ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ತುಮಕೂರು ಜಿಲ್ಲಾ ವ್ಯಾಪ್ತಿಯ ಸಂತ್ರಸ್ತರ ಪುನಶ್ಚೇತನಕ್ಕಾಗಿ ನಿಧಿ ಸ್ಥಾಪಿಸಲಾಗಿದೆ. ₹ 30 ಸಾವಿರ ಕೋಟಿ ಹಣ ಈ ನಿಧಿಯಲ್ಲಿದ್ದು ರಾಜಕಾರಣಿಗಳು ಅನ್ಯ ಉದ್ದೇಶಗಳಿಗೆ ಬಳಸಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಗಣಿಗಾರಿಕೆಯಿಂದ ಹಾನಿ ಅನುಭವಿಸುತ್ತಿರುವ ಹಳ್ಳಿಗಳ ಪುನಶ್ಚೇತನಕ್ಕೆ ಈ ನಿಧಿಯ ಹಣ ಬಳಕೆಯಾಗಬೇಕಾಗಿದೆ. ಜನಾಂದೋಲನಗಳ ಮಹಾಮೈತ್ರಿ, ಜನ ಸಂಗ್ರಾಮ ಪರಿಷತ್ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಗಣಿಗಾರಿಕೆ ನಿಲ್ಲಿಸಿ ಪರಿಸರ ಉಳಿಸಿ’ ಸಮಾವೇಶ ಆಯೋಜಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಸಮಾವೇಶ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ’ ಎಂದರು.

‘ಅಕ್ರಮ ಗಣಿಗಾರಿಕೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ವರದಿ ಪರಿಗಣಿಸಿ ಸುಪ್ರೀಂಕೋರ್ಟ್ ಕೇಂದ್ರ ಸಬಲೀಕರಣ ಸಮಿತಿ (ಸಿಇಸಿ)  ರಚಿಸಿತ್ತು. ಗಣಿಬಾಧಿತ ಪ್ರದೇಶದ ಪರಿಸರ ಪುನಶ್ಚೇತನ ಯೋಜನೆ ಅನ್ವಯ ವಿಶೇಷ ಆದ್ಯತಾ ನಿಧಿ ಸ್ಥಾಪಿಸುವಂತೆ ಸಿಇಸಿ ಶಿಫಾರಸು ಮಾಡಿತ್ತು. ಇದನ್ನು ಪರಿಗಣಿಸಿ 2013ರಲ್ಲಿ ಸುಪ್ರೀಂಕೋರ್ಟ್ ಕಾರ್ಯಸೂಚಿ ರೂಪಿಸಿ ಅದರಂತೆ ಹಣ ಖರ್ಚು ಮಾಡಬೇಕು ಎಂದು ಆದೇಶ ನೀಡಿತ್ತು’ ಎಂದರು.

ADVERTISEMENT

‘ಆದ್ಯತಾ ನಿಧಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಶಾಸಕರು, ಅಧಿಕಾರಿಗಳು ದುರುಪಯೋಗ ಮಾಡದಂತೆ ತಡೆಯಬೇಕಾಗಿದೆ. ಗಣಿಭಾದಿತ ಜಿಲ್ಲೆಗಳ ಅಭಿವೃದ್ಧಿ ಹಾಗೂ ಜನ ಬದುಕಿನ ಪುನಶ್ಚೇತನಕ್ಕೆ ಈ ಹಣ ಬಳಕೆಯಾಗಬೇಕು. ಸ್ಥಳೀಯ ಗ್ರಾಮ ಸಭೆಗಳಲ್ಲಿ ಜನರ ಅಹವಾಲು ಆಲಿಸಿ ಅವರಿಗೆ ಮೂಲ ಸೌಲಭ್ಯ ಒದಗಿಸಿಕೊಡಬೇಕು’ ಎಂದರು.

‘ ಚುನಾವಣಾ ಬಾಂಡ್‌ನಿಂದ ಬಿಜೆಪಿಗೆ ₹ 6 ಸಾವಿರ ಕೋಟಿ ಹಣ ಬಂದಿದೆ. ಅಕ್ರಮ ಗಣಿಗಾರಿಕೆಯಿಂದ ಹಲವರು ಅಧಿಕಾರ ಕಳೆದುಕೊಂಡಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರೂ ಅಕ್ರಮ ಗಣಿಗಾರಿಕೆಯಿಂದಲೇ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಕೆ.ಬಿ.ಭಟ್, ಜೆ.ಯಾದವರೆಡ್ಡಿ,ಅಭಿರುಚಿ ಗಣೇಶ್,ಕೆ.ಪಿ.ಭೂತಯ್ಯ, ಬಸ್ತಿಹಳ್ಳಿ ಜಿ.ಸುರೇಶ್ ಬಾಬು, ಹಂಪಯ್ಯ ಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಅರುಣ್‌ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.