ADVERTISEMENT

ಹಿರಿಯೂರು: ಕೋಡಿ ಭಾಗದಲ್ಲಿ ಮತ್ತೆ ದೂಳೆಬ್ಬಿಸುವ ರಸ್ತೆ!

ಸುವರ್ಣಾ ಬಸವರಾಜ್
Published 14 ಜನವರಿ 2026, 7:25 IST
Last Updated 14 ಜನವರಿ 2026, 7:25 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿ ಭಾಗದಲ್ಲಿ ಸೋಮವಾರ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆಯ ಮೇಲೆ ಖಾಸಗಿ ಬಸ್ಸೊಂದು ಸಾಗುತ್ತಿರುವುದು 
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿ ಭಾಗದಲ್ಲಿ ಸೋಮವಾರ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆಯ ಮೇಲೆ ಖಾಸಗಿ ಬಸ್ಸೊಂದು ಸಾಗುತ್ತಿರುವುದು    

ಹಿರಿಯೂರು: ತಾಲ್ಲೂಕಿನಲ್ಲಿರುವ ವಾಣಿವಿಲಾಸ ಜಲಾಶಯದ ಕೋಡಿ ಭಾಗದಲ್ಲಿ ಖಾಸಗಿ ಬಸ್ ಮಾಲೀಕರಿಬ್ಬರು ಎರಡು ದಿನಗಳ ಹಿಂದೆ ಮಣ್ಣುತುಂಬಿ ತಾತ್ಕಾಲಿಕ ರಸ್ತೆ ನಿರ್ಮಿಸಿಕೊಂಡು ಹೊಸದುರ್ಗ– ಹಿರಿಯೂರು ನಡುವೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ.

ಅ. 19ರಂದು ಬೆಳಿಗ್ಗೆ 4ನೇ ಬಾರಿ ಕೋಡಿ ಬಿದ್ದ ಸುದ್ದಿ ಹೊರಬಿದ್ದ ತಕ್ಷಣ ಸಂತಸ ಪಡದವರೇ ಇರಲಿಲ್ಲ. 2022ರಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದಾಗಿನಿಂದ ಕೋಡಿಯ ಸ್ಥಳದಲ್ಲಿ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು, ಬಸ್ ಮಾಲೀಕರ ಒತ್ತಾಯದ ಕೂಗು ಆಳುವವರ ಕಿವಿಗೆ ಇನ್ನೂ ಬಿದ್ದಿಲ್ಲ.

2022 ಸೆ. 2ರಂದು ವಾಣಿವಿಲಾಸ ಜಲಾಶಯ ಇತಿಹಾಸದಲ್ಲೇ 2ನೇ ಬಾರಿಗೆ ಕೋಡಿ ಬಿದ್ದ ಸಂದರ್ಭದಲ್ಲಿ ಹೊಸದುರ್ಗ– ಹಿರಿಯೂರು   ಸಂಪರ್ಕಿಸುವ ರಸ್ತೆ ಕೋಡಿಯ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈ ಎರಡು ಊರುಗಳ ನಡುವೆ ಸಂಚರಿಸುತ್ತಿದ್ದ ಬಸ್‌ಗಳು, ವಾಣಿವಿಲಾಸಪುರಕ್ಕೆ ಬಂದು, ಮರಳಿ ಅತ್ಯಂತ ಕಿರಿದಾದ ಕಕ್ಕಯ್ಯನಹಟ್ಟಿ ರಸ್ತೆ ಮಾರ್ಗವಾಗಿ ಎಂಟ್ಹತ್ತು ಕಿ.ಮೀ. ಸುತ್ತಿಕೊಂಡು ಹೊಸದುರ್ಗ ಬೈಪಾಸ್ ರಸ್ತೆಗೆ ಹೋಗಿ ಬರುತ್ತಿದ್ದವು.

ADVERTISEMENT

2023ರ ಜನವರಿಯಲ್ಲಿ ಕೋಡಿಯಲ್ಲಿ ನೀರು ಹರಿಯುವುದು ನಿಂತ ನಂತರ ವಾಣಿವಿಲಾಸಪುರದ ಗ್ರಾಮಸ್ಥರು, ಖಾಸಗಿ ಬಸ್ ಮಾಲೀಕರ ಸಂಘದವರು ಸುಮಾರು ₹ 70,000ದಿಂದ ₹80,000 ಖರ್ಚು ಮಾಡಿ, 8 ಬೃಹತ್ ಗಾತ್ರದ ಸಿಮೆಂಟ್ ಪೈಪ್‌ಗಳನ್ನು ಒಂದಕ್ಕೊಂದು ಹೊಂದಿಸಿ ಕಿತ್ತು ಹೋಗಿದ್ದ ಕೋಡಿಯ ಜಾಗದಲ್ಲಿ ಜೋಡಿಸಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದರು. ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ರಸ್ತೆಯ ಎರಡೂ ಕಡೆ ಕೋಡಿಯ ನೀರಿನಲ್ಲಿ ಕೊಚ್ಚಿ ಹೋಗಿ ಗುಂಡಿ ಬಿದ್ದಿದ್ದ ಜಾಗಕ್ಕೆ ಮಣ್ಣುತುಂಬಿ ವಾಹನಗಳು ಓಡಾಡಲು ಅನುವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದರು.

ಪ್ರಸ್ತುತ ಜಲಾಶಯ ನಾಲ್ಕನೇ ಬಾರಿ ಭರ್ತಿಯಾಗಿ ಮೂರು ತಿಂಗಳಿಂದ ಕೋಡಿಯಲ್ಲಿ ನೀರು ಹರಿಯುತ್ತಿದ್ದ ಕಾರಣ ಎರಡೂ ನಗರಗಳ ನಡುವಿನ ವಾಹನ ಸಂಚಾರಕ್ಕೆ ತೊಂದರೆ ಆಗಿತ್ತು. ಎರಡು ದಿನಗಳ ಹಿಂದೆ ಕೋಡಿಯ ಜಾಗದಲ್ಲಿ ಕಿತ್ತು ಹೋಗಿರುವ ರಸ್ತೆಗೆ ವಿಜಯಲಕ್ಷ್ಮಿ ಬಸ್ ಮಾಲೀಕ ಹಿರಿಯೂರಿನ ಜಬೀವುಲ್ಲಾ, ಎಸ್ಎಲ್‌ಎನ್‌ಎಸ್ ಬಸ್ ಮಾಲೀಕ ಹೊಸದುರ್ಗದ ತಿಪ್ಪೇಸ್ವಾಮಿ ₹ 50,000 ವ್ಯಯಿಸಿ ಮಣ್ಣು ತುಂಬಿ ತಾತ್ಕಾಲಿಕವಾಗಿ ರಸ್ತೆ ವ್ಯವಸ್ಥೆ ಮಾಡಿದ್ದು, ನಿತ್ಯ ನೂರಾರು ವಾಹನಗಳು ಮಣ್ಣಿನ ರಸ್ತೆಯಲ್ಲಿ ದೂಳೆಬ್ಬಿಸುತ್ತ ಸಂಚರಿಸುತ್ತಿವೆ.

‘ಕೋಡಿ ಭಾಗದಲ್ಲಿ ಸೇತುವೆ ನಿರ್ಮಿಸಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅರ್ಥವಾಗದ ಸಂಗತಿಯಲ್ಲ. ಹೊಸ ಸೇತುವೆ ನಿರ್ಮಿಸದಿದ್ದರೆ, ಹೊಸದುರ್ಗ– ಹಿರಿಯೂರು ನಡುವಿನ ಬಸ್ ಸಂಚಾರದ ಅವಧಿ ಅರ್ಧ ಗಂಟೆ ಹೆಚ್ಚಾಗುತ್ತದೆ. ರಸ್ತೆ ಎಡವಟ್ಟಿನಿಂದ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗುತ್ತದೆ. ಹೀಗಾಗಿ ಅಣೆಕಟ್ಟೆಯ ಕೋಡಿಗೆ ಸಂಬಂಧಿಸಿರುವ ಎರಡೂ ಕ್ಷೇತ್ರಗಳ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ನೂತನ ಸೇತುವೆ ನಿರ್ಮಿಸಬೇಕು’ ಎಂದು ತಾಲ್ಲೂಕು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಬೀವುಲ್ಲಾ ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.