ADVERTISEMENT

ಅಡಿಕೆ ಸಸಿ ಹಚ್ಚಿದ ಎರಡೇ ವರ್ಷಕ್ಕೆ ಹೊಂಬಾಳೆ

ಹೊಸದುರ್ಗ ತಾಲ್ಲೂಕಿನ ಕೊರಟಿಕೆರೆ ಮಹೇಶ್ವರಪ್ಪ ಅಡಿಕೆ ತೋಟ

​ಪ್ರಜಾವಾಣಿ ವಾರ್ತೆ
Published 5 ಮೇ 2021, 5:52 IST
Last Updated 5 ಮೇ 2021, 5:52 IST
ಹೊಸದುರ್ಗ ತಾಲ್ಲೂಕಿನ ಕೊರಟಿಕೆರೆ ರೈತ ಕೆ.ಸಿ. ಮಹೇಶ್ವರಪ್ಪ ಅವರ ಅಡಿಕೆ ತೋಟ.
ಹೊಸದುರ್ಗ ತಾಲ್ಲೂಕಿನ ಕೊರಟಿಕೆರೆ ರೈತ ಕೆ.ಸಿ. ಮಹೇಶ್ವರಪ್ಪ ಅವರ ಅಡಿಕೆ ತೋಟ.   

ಎಸ್‌. ಸುರೇಶ್‌ ನೀರಗುಂದ

ಹೊಸದುರ್ಗ: ಅಡಿಕೆ ಸಸಿ ನಾಟಿ ಮಾಡಿದ ಸುಮಾರು 4 ವರ್ಷಕ್ಕೆ ಹೊಂಬಾಳೆ ಒಡೆಯುವುದು ಸಾಮಾನ್ಯ. ಆದರೆ, ತಾಲ್ಲೂಕಿನ ಕೊರಟಿಕೆರೆ ಗ್ರಾಮದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ. ಮಹೇಶ್ವರಪ್ಪ ಅವರು ನಾಟಿ ಮಾಡಿದ್ದ ಅಡಿಕೆ ಗಿಡ ಎರಡೇ ವರ್ಷಕ್ಕೆ ಹೊಂಬಾಳೆ ಒಡೆದಿರುವುದು ವಿಶೇಷವಾಗಿದೆ.

20 ಎಕರೆ ಜಮೀನಿನ ಪೈಕಿ 7 ಎಕರೆಯಲ್ಲಿ 300 ತೆಂಗಿನ ಗಿಡಗಳಿವೆ. ಉಳಿದ ಜಮೀನಿನಲ್ಲಿ ರಾಗಿ, ಜೋಳ, ಸಾಮೆ, ಹೆಸರುಕಾಳು, ಎಳ್ಳು, ತರಕಾರಿ, ಕಲ್ಲಂಗಡಿ ಬೆಳೆಯನ್ನು ಹಲವು ವರ್ಷಗಳಿಂದ ಬೆಳೆಯುತ್ತಿದ್ದರು. ಆದರೆ, ಈ ಯಾವ ಬೆಳೆಯಲ್ಲೂ ನಿರೀಕ್ಷಿತ ಆದಾಯ ಗಳಿಸಲಿಲ್ಲ. ಇದರಿಂದ ಬೇಸರಗೊಂಡು ಅವರು ಬಹು ವಾರ್ಷಿಕ ಬೆಳೆಯಾದ ಅಡಿಕೆಯನ್ನು 4 ಎಕರೆಯಲ್ಲಿ ಬೆಳೆಯಲು ನಿರ್ಧರಿಸಿದರು.

ADVERTISEMENT

ತರೀಕೆರೆಯ ವಿಟಲಾಪುರದಿಂದ ₹ 1,800ರಂತೆ 4 ಡಬ್ಬ ಅಡಿಕೆ ಗೋಟು ಖರೀದಿಸಿದರು. 1 ಡಬ್ಬದಲ್ಲಿ ಸುಮಾರು 600ರಿಂದ 750 ಅಡಿಕೆ ಗೋಟುಗಳಿರುತ್ತವೆ. ತಮ್ಮ ಜಮೀನಿನ ಕೊಳವೆಬಾವಿ ಹತ್ತಿರ ನೆಲವನ್ನು ಹಸನು ಮಾಡಿ ಅಡಿಕೆ ಗೋಟು ನಾಟಿ ಮಾಡಿ ಸ್ವತಃ ಸಸಿ ಮಾಡಿಕೊಂಡರು. ಇಲ್ಲಿಗೆ ಎರಡು ವರ್ಷದ ಹಿಂದೆ 9X9 ಅಡಿ ಗಾತ್ರದ ದಾಯಕ್ಕೆ ಕೆಂಪುಮಣ್ಣು ಮಿಶ್ರಿತ 1 ಎಕರೆ ಜಮೀನಿಗೆ 350 ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಮತ್ತೊಂದು ಎಕರೆಗೆ ಅಡಿಕೆ ಸಸಿ ನಾಟಿ ಮಾಡಿದ್ದಾರೆ.

ತೋಟಕ್ಕೆ ಸಮೀಪದಲ್ಲಿಯೇ ವೇದಾವತಿ ನದಿ ಹಾಗೂ ಬ್ಯಾರೇಜ್‌ಗಳಿವೆ. ಕಳೆದ ಎರಡು ವರ್ಷದಿಂದ ಮಳೆಯೂ ಉತ್ತಮವಾಗಿ ಬಂದಿದೆ. ಇದರಿಂದಾಗಿ ಈ ಭಾಗದಲ್ಲಿ ಅಂತರ್ಜಲ ಕೊಂಚ ವೃದ್ಧಿಯಾಗಿದ್ದು ಕೊಳವೆಬಾವಿಯಲ್ಲಿ ನೀರು ಚೆನ್ನಾಗಿ ಬರುತ್ತಿದೆ. ಪ್ರತಿ ಅಡಿಕೆ ಗಿಡಕ್ಕೂ ಹನಿ ನೀರಾವರಿ ವ್ಯವಸ್ಥೆಯ ಡ್ರಿಪ್‌ ಮೂಲಕ ನೀರನ್ನು ಸಮೃದ್ಧವಾಗಿ ಕೊಡುತ್ತಿದ್ದಾರೆ. ಗಿಡಗಳಿಗೆ ಯಾವುದೇ ರಾಸಾಯನಿಕ ಗೊಬ್ಬರವನ್ನು ಹಾಕಿಲ್ಲ. ಔಷಧ ಸಿಂಪಡಿಸಿಲ್ಲ. 6 ತಿಂಗಳಿಗೊಮ್ಮೆ ಪ್ರತಿಗಿಡಕ್ಕೆ ತಲಾ ಒಂದು ಬುಟ್ಟಿ ಸಗಣಿಗೊಬ್ಬರ, ಒಂದು ಬುಟ್ಟಿ ಹೊಸಮಣ್ಣು ಹಾಕಿದ್ದಾರೆ. ವಿವಿಧ ತಳಿಯ 15 ರಾಸು ಜಾನುವಾರು ಹೊಂದಿರುವ ಇವರು ವಾರಕ್ಕೊಮ್ಮೆ 1 ಲೀಟರ್‌ನಷ್ಟು ಗಂಜಲವನ್ನು ಪ್ರತಿಗಿಡಕ್ಕೆ ಹಾಕುತ್ತಿದ್ದಾರೆ.

ಸಾವಯವ ಕೃಷಿ ಪದ್ಧತಿ ಮೂಲಕ ಅಡಿಕೆ ಸಸಿಗಳನ್ನು ಚೆನ್ನಾಗಿ ಆರೈಕೆ ಮಾಡಿದ್ದರಿಂದಾಗಿ ಸಮೃದ್ಧವಾಗಿ ಬೆಳೆದಿವೆ. ಯಾವುದೇ ರೋಗದ ಲಕ್ಷಣಗಳಿಲ್ಲ. ಸಸಿ ನಾಟಿ ಮಾಡಿದ ಎರಡೇ ವರ್ಷಕ್ಕೆ ಹೊಂಬಾಳೆ ಹೊರಬರುವಂತೆ ಆಗಿರುವುದು ಅಚ್ಚರಿಯನ್ನುಂಟು ಮಾಡಿದೆ. ಇದರಿಂದ ಸಂತಸಗೊಂಡಿರುವ ಅವರು ಮತ್ತೆ ಎರಡು ಎಕರೆಗೆ ಅಡಿಕೆ ಸಸಿ ನಾಟಿ ಮಾಡಲು ಜಮೀನು ಸಿದ್ಧಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.