
ಹಿರಿಯೂರು: ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕ (ಡಿಪೊ) ಉದ್ಘಾಟನೆಗೊಂಡು ನಾಲ್ಕು ತಿಂಗಳು ಕಳೆದಿವೆ. ಆದರೆ, ಈವರೆಗೆ ನಿಗಮದಿಂದ ಒಂದೂ ಹೊಸ ಬಸ್ಸನ್ನು ಒದಗಿಸಲಾಗಿಲ್ಲ. ಕಾರ್ಯಾಚರಣೆಯಲ್ಲಿರುವ ಹಳೆಯ ಬಸ್‌ಗಳು ಯಾವಾಗ ಕೆಟ್ಟು ನಿಲ್ಲುತ್ತವೆಯೋ ಹೇಳಲಾಗದು ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘10 ದಿನಗಳ ಹಿಂದೆ ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿಗೆ ಹೊರಟಿದ್ದ ಬಸ್, 10 ಕಿ.ಮೀ. ಕ್ರಮಿಸಿ ಕೆಟ್ಟು ನಿಂತಿತ್ತು. ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಕಳುಹಿಸಲಾಯಿತು. ಕೆಲವು ಪ್ರಯಾಣಿಕರು ಬೆಂಗಳೂರಿನವರೆಗೆ ನಿಂತೇ ಪ್ರಯಾಣಿಸಿದರು. ಈಗೀಗ ಹಿರಿಯೂರಿನಿಂದ ಹೊರಡುವ ಬಸ್‌ಗಳನ್ನು ಹತ್ತಲು ಭಯವಾಗುತ್ತದೆ’ ಎಂದು ನಿವೃತ್ತ ಎಂಜಿನಿಯರ್ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಹಿರಿಯೂರಿನಿಂದ ಶಿರಾ–ತುಮಕೂರಿಗೆ ಪ್ರಯಾಣಿಸುವುದು ದೊಡ್ಡ ಸಾಹಸ ಎನಿಸಿದೆ. ಚಿತ್ರದುರ್ಗ– ದಾವಣಗೆರೆಯಿಂದ ಬೆಂಗಳೂರಿಗೆ ಹೋಗುವ ಎಲ್ಲಾ ಬಸ್‌ಗಳು ತಡೆರಹಿತ ಫಲಕ ಹಾಕಿರುತ್ತವೆ. ಜವನಗೊಂಡನಹಳ್ಳಿಗೆ ಹೋಗಲು ಗಂಟೆಗಟ್ಟಲೆ ನಿಲ್ದಾಣದಲ್ಲಿ ಕಾಯುವ ಸ್ಥಿತಿ ಇದೆ. ಇಲ್ಲಿನ ನಿಲ್ದಾಣದ ಸಮಸ್ಯೆಗಳ ಬಗ್ಗೆ ಯಾವ ಅಧಿಕಾರಿಯೂ ಪರಿಶೀಲಿಸಿಲ್ಲ. ಪ್ರಯಾಣಿಕರ ಕುಂದು–ಕೊರತೆ ಸಭೆ ನಡೆಸಲು ಆಗುವುದಿಲ್ಲವೇ?’ ಎಂದು ಶಿಕ್ಷಕಿ ರೇಣುಕಮ್ಮ ಪ್ರಶ್ನಿಸುತ್ತಾರೆ.
ಸುರಕ್ಷತೆ ಮರೀಚಿಕೆ:
ಹಿರಿಯೂರು ನಿಲ್ದಾಣಕ್ಕೆ ನಿತ್ಯ 800ರಿಂದ 1,000 ವಾಹನಗಳು ಬಂದು ಹೋಗುತ್ತವೆ. 30 ವರ್ಷ ಕಳೆದರೂ ನಿಲ್ದಾಣದ ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸಿಲ್ಲ. ಕುಡುಕರ ಹಾವಳಿಯಿದ್ದು, ನಿಲ್ದಾಣದ ಎಲ್ಲೆಡೆ ದ್ವಿಚಕ್ರ ವಾಹನ, ಆಟೊಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ನಿಲ್ದಾಣದಲ್ಲಿನ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿ ನೇಮಿಸದ ಕಾರಣಕ್ಕೆ ಕಳ್ಳರಿಗೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಹಿರಿಯೂರು ಡಿಪೊದಿಂದ 33 ಮಾರ್ಗಗಳಲ್ಲಿ ಬಸ್ ಓಡಿಸಲಾಗುತ್ತಿದೆ. ನಿಗಮವು ಹೊಸ ಬಸ್ ಒದಗಿಸಿಲ್ಲ. ಎಲ್ಲ ಬಸ್‌ಗಳು ತಾಂತ್ರಿಕವಾಗಿ ಉತ್ತಮವಾಗಿವೆ. ಸ್ವಚ್ಛತೆ ಸೇರಿ ಉಳಿದ ಸಮಸ್ಯೆಗಳನ್ನು ವಾರದಲ್ಲಿ ಸರಿಪಡಿಸುತ್ತೇವೆ.ವೆಂಕಟೇಶ್ ಸಾರಿಗೆ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಚಿತ್ರದುರ್ಗ
ನಾಲ್ಕೈದು ಮಾರ್ಗಕ್ಕೆ ಒಂದೇ ಬಸ್!
ಹಿರಿಯೂರು–ಚಿತ್ರದುರ್ಗ ಹಿರಿಯೂರು–ವಾಣಿವಿಲಾಸಪುರ ಹಿರಿಯೂರು–ದಸೂಡಿಗೆ ಒಂದೇ ಬಸ್ ಮೂರ್ನಾಲ್ಕು ಟ್ರಿಪ್ ಮಾಡುತ್ತದೆ. ಬಸ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದರೆ ಅದನ್ನೇ ನಂಬಿರುವ ಪ್ರಯಾಣಿಕರಿಗೆ ಬೇರೆ ದಾರಿ ಇಲ್ಲ. ಹೊಸದುರ್ಗಕ್ಕೆ ಸಂಜೆ 4.30ರ ನಂತರ ಬಸ್ ವ್ಯವಸ್ಥೆಯೇ ಇಲ್ಲ. ಧರ್ಮಸ್ಥಳಕ್ಕೆ ಮಧ್ಯಾಹ್ನ 1.30ಕ್ಕೆ ಹೊರಡುವ ಬಸ್ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ. ಎಷ್ಟೋ ಬಾರಿ ಮಂಜುನಾಥನ ಭಕ್ತರು ಚಿತ್ರದುರ್ಗಕ್ಕೆ ಹೋಗಿ ಬಸ್ ಹಿಡಿದಿರುವ ನಿದರ್ಶನಗಳಿವೆ ಎನ್ನುತ್ತಾರೆ ಪ್ರಯಾಣಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.