ಮೊಳಕಾಲ್ಮುರು: ತಾಲ್ಲೂಕಿನ ಜನರ ದಶಕಗಳ ಬೇಡಿಕೆಯಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಡಿಪೊ ನಿರ್ಮಾಣ ಕಾಮಗಾರಿ ಅನುದಾನದ ಕೊರತೆಯ ಕಾರಣದಿಂದಾಗಿ ಮತ್ತಷ್ಟು ವಿಳಂಬವಾಗುತ್ತಿದೆ.
ಪಟ್ಟಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವಿಲ್ಲ. ಸಮೀಪದ ಹೆದ್ದಾರಿಯಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಪಟ್ಟಣದ ಒಳಗಡೆ ಬರುತ್ತಿಲ್ಲ. ತಾಲ್ಲೂಕಿನ ಅನೇಕ ಗ್ರಾಮಗಳು ಈವರೆಗೂ ಬಸ್ ಮುಖ ನೋಡದ ಪರಿಣಾಮ ಜನರ ಕಷ್ಟ ಹೇಳತೀರದಾಗಿದೆ. ಈ ಸಂಬಂಧ ಹಲವು ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿವೆ.
2018ರಲ್ಲಿ ಸಾರಿಗೆ ಸಚಿವರೂ ಆಗಿದ್ದ ಇಲ್ಲಿನ ಶಾಸಕ ಬಿ.ಶ್ರೀರಾಮುಲು ಅವಧಿಯಲ್ಲಿ ಬಸ್ ನಿಲ್ದಾಣ, ಡಿಪೊ ಮಂಜೂರಾಗಿತ್ತು. ಮೊದಲು ನಿಲ್ದಾಣ ನಿರ್ಮಿಸಿ ನಂತರ ರಾಯಾಪುರ ಬಳಿ ಡಿಪೊ ನಿರ್ಮಾಣಕ್ಕಾಗಿ ₹ 12 ಕೋಟಿ ಮಂಜೂರು ಮಾಡಲಾಗಿತು. ಆದರೆ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ನಿಲ್ದಾಣ ಹಾಗೂ ಡಿಪೊ ಕನಸಾಗಿಯೇ ಉಳಿದಿವೆ.
ಡಿಪೊ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಅಗತ್ಯವಾದ ಇಂಧನ ಬಂಕ್ ಇನ್ನೂ ಮಂಜೂರಾತಿ ಹಂತದಲ್ಲಿದೆ. ಬಸ್ ನಿಲ್ದಾಣದ ಪ್ರವೇಶ ದ್ವಾರ, ಬಸ್ ನಿಲ್ಲಿಸುವ ಪ್ರಾಂಗಣ, ಹೋಟೆಲ್, ಮಳಿಗೆಗಳ ನಿರ್ಮಾಣ ಪೂರ್ಣವಾಗಿದೆ. ಆವರಣದಲ್ಲಿ ಸಿ.ಸಿ. ರಸ್ತೆ, ಕಾಂಪೌಂಡ್ ಸೇರಿದಂತೆ ಕೆಲ ಕಾಮಗಾರಿಗಳು ಬಾಕಿ ಉಳಿದಿವೆ.
ನಿಲ್ದಾಣ, ಡಿಪೊ ಕಾಮಗಾರಿ ಮುಗಿಸಲು 9 ತಿಂಗಳ ಅವಧಿ ನಿಗದಿ ಮಾಡಲಾಗಿತ್ತು. ಆದರೆ ಶಂಕುಸ್ಥಾಪನೆಯಾಗಿ ಎರಡೂವರೆ ವರ್ಷ ಮುಗಿಯುತ್ತಾ ಬಂದರೂ ಪೂರ್ಣವಾಗಿಲ್ಲ. ಹೀಗಾಗಿ ಪ್ರಯಾಣಿಕರಿಗೆ ನಿಲ್ದಾಣ ಹಾಗೂ ಸಂಚಾರಕ್ಕೆ ಸರ್ಕಾರಿ ಬಸ್‌ಗಳ ಪ್ರಯೋಜನ ಸಿಗುತ್ತಿಲ್ಲ ಎಂಬ ಕೊರಗು ಸ್ಥಳೀಯರದ್ದಾಗಿದೆ.
‘ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 150 ‘ಎ’ ಹಾದು ಹೋಗಿದೆ. ಹೆದ್ದಾರಿ ನವೀಕರಣದ ನಂತರ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಬರದೇ ನೇರವಾಗಿ ಓಡಾಡುತ್ತಿವೆ. ರಾತ್ರಿ ವೇಳೆ ಈ ಸಮಸ್ಯೆ ಇನ್ನೂ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತು ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ರಾಂಪುರ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶ್ ಹೇಳಿದರು.
ತಾಲ್ಲೂಕು ಆಂಧ್ರಗಡಿಯಲ್ಲಿರುವ ಕಾರಣ ಬಸ್ ಬಂದಲ್ಲಿ ಎರಡೂ ರಾಜ್ಯಗಳ ಜನರಿಗೆ ಅನುಕೂಲವಾಗಲಿದೆ. ಆರ್ಥಿಕ ವಹಿವಾಟು ಹೆಚ್ಚಲಿದೆ. ಜಿಲ್ಲಾಡಳಿತ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನೆರವಿಗೆ ಬರಬೇಕುಜಾಫರ್ ಷರೀಷ್ ಸಿಪಿಐ ಮುಖಂಡ
‘ತಿಂಗಳೊಳಗಾಗಿ ಬಂಕ್ ಸ್ಥಾಪನೆ’
‘ಬಸ್‌ನಿಲ್ದಾಣದ ಆವರಣದಲ್ಲಿ ಬಾಕಿ ಉಳಿದಿರುವ ನಿರ್ಮಾಣ ಕಾಮಗಾರಿಗಳನ್ನು ಮಾಡಲು ಈಚೆಗೆ ₹ 40 ಲಕ್ಷ ಬಿಡುಗಡೆಯಾಗಿದೆ. ಆವರಣ ನಿರ್ಮಾಣ ಮತ್ತು ಕಿಟಕಿಗಳ ಅಳವಡಿಕೆ ಕಾರ್ಯವನ್ನು 20 ದಿನದೊಳಗೆ ಪೂರ್ಣಗೊಳಿಸಲಾಗುವುದು. ಡಿಪೊದಲ್ಲಿ ಬಂಕ್ ಆರಂಭಿಸಲು ಜಿಲ್ಲಾಧಿಕಾರಿಯಿಂದ ಅನುಮತಿ ಸಿಕ್ಕಿದೆ. ಬಿಪಿಸಿ ಕಂಪನಿ ಒಂದು ತಿಂಗಳೊಳಗಾಗಿ ಬಂಕ್ ಸ್ಥಾಪಿಸುವುದಾಗಿ ತಿಳಿಸಿದೆ’ ಎಂದು ಸಾರಿಗೆ ಇಲಾಖೆ ಎಂಜಿನಿಯರ್ ನಾಗರಾಜ್ ಹೇಳಿದರು. ‘ಈಚೆಗೆ ಆರಂಭವಾಗಿರುವ ಹಿರಿಯೂರು ಡಿಪೊಗೆ ಚಿತ್ರದುರ್ಗ ಹೊಸದುರ್ಗ ಭಾಗದಲ್ಲಿ ಸಂಚರಿಸುತ್ತಿದ್ದ 25 ಬಸ್ ನೀಡಲಾಗಿದೆ. ಮೊಳಕಾಲ್ಮುರಿನಲ್ಲಿ ಡಿಪೊ ಕಾರ್ಯಾರಂಭಗೊಂಡ ನಂತರ ಚಳ್ಳಕೆರೆ ಚಿತ್ರದುರ್ಗ ಡಿಪೊದಿಂದ ಆ ಭಾಗದಲ್ಲಿ ಸಂಚರಿಸುತ್ತಿರುವ ಬಸ್‌ಗಳನ್ನು ನೀಡಲಾಗುವುದು. ಹೊಸ ಬಸ್ ಕೊಡುವುದು ಕೇಂದ್ರ ಕಚೇರಿ ಕೆಲಸವಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.