
ಚಿತ್ರದುರ್ಗ: ಏಳುಸುತ್ತಿನ ಕೋಟೆ, ಐತಿಹಾಸಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ನೆಲೆ ಬೀಡಾದ ಚಿತ್ರದುರ್ಗದ ವೀಕ್ಷಣೆಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವಿಶೇಷ ಪ್ಯಾಕೇಜ್ ಆರಂಭಿಸಿದೆ.
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಒಂದು ದಿನದ ಪ್ರವಾಸ ಪ್ಯಾಕೇಜ್ಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ವಾರ ಗುರುವಾರದಿಂದ ಭಾನುವಾರದವರೆಗೂ ನಿತ್ಯವೂ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಪ್ರವಾಸಿಗರನ್ನು ಕರೆತರಲಾಗುತ್ತದೆ. ಚಿತ್ರದುರ್ಗದ ಕೋಟೆ, ಐತಿಹಾಸಿಕ ಸ್ಥಳಗಳು ಮತ್ತು ಸ್ಥಳೀಯ ಸಂಸ್ಕೃತಿಯ ಬಗ್ಗೆ ಶ್ಲಾಘನೆ ದೊರೆಯುತ್ತಿದೆ.
ಸುಸಜ್ಜಿತ ಹಾಗೂ ಆರಾಮದಾಯಕ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಒಬ್ಬರಿಗೆ ₹ 1073 ದರ ನಿಗದಿಪಡಿಸಲಾಗಿದೆ. ಇದರಲ್ಲಿ ಸಾಗಾಣಿಕೆ ಮತ್ತು ಗೈಡ್ ಸೌಲಭ್ಯ ಇರುತ್ತದೆ. ಬೆಂಗಳೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಡುವ ಬಸ್ ಚಿತ್ರದುರ್ಗಕ್ಕೆ ಆಗಮಿಸಿ, ಐತಿಹಾಸಿಕ ಕೋಟೆ, ಚಂದ್ರವಳ್ಳಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಸ್ಮಾರಕಕ್ಕೆ ಭೇಟಿ ನೀಡಲಿದೆ. ಸಂಜೆ 5 ಗಂಟೆಯ ಬಳಿಕ ಚಿತ್ರದುರ್ಗದಿಂದ ಹೊರಟು, ರಾತ್ರಿ 10 ಗಂಟೆಗೆ ಬೆಂಗಳೂರು ತಲುಪಲಿದೆ.
‘ಪ್ರಾಯೋಗಿಕವಾಗಿ ಗುರುವಾರದಿಂದ ಭಾನುವಾರದವರೆಗೆ ನಿತ್ಯ ಸಂಚಾರ ನಡೆಸಲಾಗುತ್ತಿದೆ. ಈಗಾಗಲೇ 7 ಟ್ರಿಪ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆಎಸ್‍ಟಿಡಿಸಿಯಿಂದ ಹಾಕಿಕೊಂಡಿರುವ ನೂತನ ಪ್ರವಾಸ ಪ್ಯಾಕೇಜ್ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ’ ಎನ್ನುತ್ತಾರೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ.
‘ಪ್ರವಾಸಿಗರ ಬೇಡಿಕೆ ಬಂದಲ್ಲಿ ವಾರದ ಎಲ್ಲ ದಿನವೂ ಪ್ರವಾಸ ಏರ್ಪಡಿಸಲು ಚಿಂತನೆ ನಡೆಸಲಾಗಿದೆ. ಆನ್‍ಲೈನ್ ಮೂಲಕ ಸದ್ಯ ಬೆಂಗಳೂರಿನಿಂದ ಮಾತ್ರ ಬುಕ್ಕಿಂಗ್‍ಗೆ ಅವಕಾಶ ಕಲ್ಪಿಸಿದ್ದು, ಆಸಕ್ತರು https://kstdc.co ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 080-43344334 ದೂರವಾಣಿಯನ್ನು ಸಂಪರ್ಕಿಸಬಹುದು’ ಎನ್ನುತ್ತಾರೆ ಕೆಎಸ್‌ಟಿಡಿಸಿ ವ್ಯವಸ್ಥಾಪಕ ಚೇತನ್.
ಶಾಸಕ ಕೆ.ಸಿ. ವೀರೇಂದ್ರ ಅವರು ಕೋಟೆನಾಡು ಚಿತ್ರದುರ್ಗದ ಐತಿಹಾಸಿಕ ಮಹತ್ವವನ್ನು ಸದನದಲ್ಲಿ ಮಂಡಿಸಿ, ಚಿತ್ರದುರ್ಗಕ್ಕೆ ಚಿತ್ರದುರ್ಗಕ್ಕೆ ಒಂದು ದಿನದ ವಿಶೇಷ ಪ್ರವಾಸ ಪ್ಯಾಕೇಜ್ ಜಾರಿಗೊಳಿಸುವಂತೆ ಮನವಿ ಮಾಡಿದ್ದರು. ಇದರ ಫಲವಾಗಿ ಕೆಎಸ್‌ಟಿಡಿಸಿ ಪ್ರವಾಸ ಪ್ರಾರಂಭವಾಗಿದೆ.
ಏಳು ಸುತ್ತಿನ ಕೋಟೆ ಚಂದ್ರವಳ್ಳಿ ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧಿ ಪಡೆದಿವೆ. ನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳ ಮಹತ್ವವನ್ನು ಸಾರುವಂತಾಗಲು ಕೆಎಸ್‍ಟಿಡಿಸಿ ನಿರಂತರವಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ನಿರತವಾಗಿದೆ. ಇದು ಕೇವಲ ಪ್ರವಾಸ ಮಾತ್ರವಲ್ಲ ಇದರಿಂದ ಸ್ಥಳೀಯರಿಗೆ ಉದ್ಯೋಗ ವ್ಯಾಪಾರ ವಾಣಿಜ್ಯಕ್ಕೆ ಉತ್ತೇಜನ ದೊರಕಲಿದೆ.ಪ್ರಶಾಂತ್ ಕುಮಾರ್ ಮಿಶ್ರಾ ವ್ಯವಸ್ಥಾಪಕ ನಿರ್ದೇಶಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.