ಧರ್ಮಪುರ: ‘ರಾಜ್ಯದಲ್ಲಿ ಕುಮಾರಣ್ಣ ಎರಡು ಸಲ ಕಡಿಮೆ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರೂ ಅವರ ಸಾಧನೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಅವರು ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಸಮೀಪದ ಹರಿಯಬ್ಬೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾಗ ಹರಿಯಬ್ಬೆಯಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಸದಸ್ಯತ್ವ ನೋಂದಣಿ ಅಭಿಯಾನ ಇಲ್ಲಿಯೇ ಶುರು ಮಾಡಲಾಗಿದೆ’ ಎಂದರು.
‘ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಮತ್ತು ಅನುದಾನ ನೀಡಿಕೆ ಇವತ್ತು ನೀರಾವರಿ ಸೌಕರ್ಯ ಕಾಣಲು ಸಾಧ್ಯವಾಗಿದೆ. ಆದರೆ, ನಂತರದಲ್ಲಿ ಬಂದ ಸರ್ಕಾರ ಪೂರ್ಣ ಪ್ರಮಾಣದ ಅನುಷ್ಠಾನ ಕಾರ್ಯ ಮುಂದುವರಿಸದಿರುವುದು ದುರಾದೃಷ್ಟ’ ಎಂದು ಹೇಳಿದರು.
‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನರ ಸಂಕಷ್ಟಗಳನ್ನು ಅರಿಯದೇ ಅವರನ್ಕು ನಷ್ಟದ ಕೂಪಕ್ಕೆ ನೂಕಿದೆ. ಜೆಡಿಎಸ್ ಬರೀ ದೇವೇಗೌಡರ ಪಕ್ಷವಲ್ಲ. ಅದು ರೈತರ ಮತ್ತು ಸಾಮಾನ್ಯ ಜನರ ಪಕ್ಷವಾಗಿದೆ. ಪಕ್ಷದ ಕಾರ್ಯಕರ್ತರು ಒಳ ಬೇಗುದಿ ಬಿಟ್ಟು ಸೈನಿಕರಂತೆ ಸಂಘಟಿತರಾಗಬೇಕು’ ಎಂದು ಮನವಿ ಮಾಡಿದರು.
‘ದೇವೇಗೌಡರು ಮತ್ತು ಕುಮಾರಣ್ಣ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರ ಬದುಕಿಗೆ ಆಸರೆಯಾಗಿದ್ದಾರೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆದರೆ ನಮ್ಮ ಪಕ್ಷಕ್ಕೆ ಹಾನಿಯಾಗಲಿದೆ ಎಂಬುದನ್ನು ಮನಗಂಡಿರುವ ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂದೂಡುತ್ತಿದೆ. ಇದಕ್ಕಾಗಿ ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಜನವರಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿವೆ. ಅದಕ್ಕಾಗಿ ತಳಮಟ್ಟದಿಂದ ಪಕ್ಷ ಬಲವರ್ಧನೆಗೊಳಿಸಿ’ ಎಂದು ಸಲಹೆ ನೀಡಿದರು.
‘ಹಿರಿಯೂರು ಕ್ಷೇತ್ರ ಜೆಡಿಎಸ್‌ನ ಭದ್ರ ಕೋಟೆಯಾಗಿದೆ. ಆದರೂ ಕಳೆದ 20ವರ್ಷಗಳಿಂದ ಜೆಡಿಎಸ್ ಅಭ್ಯರ್ಥಿಗಳು ಸೋಲುಂಡಿದ್ದಾರೆ. ಈಗಲೂ ನಮ್ಮ ಪಕ್ಷದ ಕಾರ್ಯಕರ್ತರು ವಿಚಲಿತರಾಗಿಲ್ಲ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಮೈತ್ರಿ ಇರುವುದರಿಂದ ನಮಗೆ ಆನೆ ಬಲ ಬಂದಿದೆ. ಜನಪರ ಯೋಜನೆಗಳನ್ನು ರೂಪಿಸಿದ ನಮ್ಮ ನಾಯಕರ ಆಶೋತ್ತರಗಳನ್ನು ರೈತರಿಗೆ ತಲುಪಿಸಬೇಕು’ ಎಂದು ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ಹೇಳಿದರು.
ಮಾಜಿ ಶಾಸಕರಾದ ಕೆ.ಟಿ.ತಿಮ್ಮರಾಯಪ್ಪ, ಎಂ.ತಿಪ್ಪೇಸ್ವಾಮಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ, ಮಾಜಿ ಅಧ್ಯಕ್ಷ ಡಿ.ಯಶೋಧರ, ವಕೀಲ ಶಿವಶಂಕರ್ ಮಾತನಾಡಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತರಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಕಾರ್ಯದರ್ಶಿ ಕನ್ಯಾಕುಮಾರಿ, ಲತಾ ರವೀಂದ್ರಪ್ಪ, ಶಿರಾ ರುದ್ರೇಶ್, ಎಸ್.ಆರ್.ಗೌಡ, ಕಲ್ಲೆ ರುದ್ರೇಶ್, ಡಿ.ಎಸ್.ಪ್ರಕಾಶ್, ಮಂಜುನಾಥ್, ಗಿರಿಜಾಪತಿ, ಸಿ.ನಾಗರಾಜ, ಜಲ್ದೀರಪ್ಪ, ರಾಧಮ್ಮ, ಮಹಾಂತೇಶ್, ಶಂಕರಮೂರ್ತಿ, ಪಿ.ಎಲ್.ಶಿವಣ್ಣ, ಕೆಎಸ್‌ಸಿಎಂಎಫ್ ನಿರ್ದೇಶಕ ಹನುಮಂತರಾಯ, ಜಯಪ್ರಕಾಶ್, ಚೇತು ಉಪಸ್ಥಿತರಿದ್ದರು.
ಕಾಡುಗೊಲ್ಲರಿಗೆ ನ್ಯಾಯ: ನಿಖಿಲ್
‘ಚಿತ್ರದುರ್ಗ ತುಮಕೂರು ಕೋಲಾರ ಭಾಗಗಳಲ್ಲಿ ಹೆಚ್ಚಾಗಿರುವ ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಮಾನ್ಯ ದೇವೇಗೌಡರು ಮತ್ತು ಕುಮಾರಣ್ಣ ಈಗಾಗಲೇ ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದಿದ್ದಾರೆ. ಇದು ನೂರಕ್ಕೆ ನೂರು ಈಡೇರುತ್ತದೆ. ಇದರಿಂದ ಹಿಂದುಳಿದ ಸಮುದಾಯವಾಗಿರುವ ಕಾಡುಗೊಲ್ಲರಿಗೆ ಸಾಮಾಜಿಕ ನ್ಯಾಯ ಸಿಗಲಿದೆ’ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಸಕ್ಕರೆ ಕಾರ್ಖಾನೆ ಆರಂಭಿಸಲು ಯತ್ನ: ತಾಲ್ಲೂಕಿನ ಜೀವನಾಡಿಯಾಗಿದ್ದ ಸಕ್ಕರೆ ಕಾರ್ಖಾನೆ ಮುಚ್ಚಿ ಹೋಗಿ ನೌಕರರ ಮತ್ತು ರೈತರ ಬದುಕು ಅತಂತ್ರವಾಗಿದೆ. ಕುಮಾರಣ್ಣನವರ ಗಮನಕ್ಕೆ ತಂದು ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.