ADVERTISEMENT

ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದರೆ ಮೀಸಲಾತಿ ಹೆಚ್ಚಿಸಿ

ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:21 IST
Last Updated 20 ಸೆಪ್ಟೆಂಬರ್ 2025, 5:21 IST
ಚಿತ್ರದುರ್ಗದ ಕುರುಬ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮುದಾಯದ ಸಭೆಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿದರು
ಚಿತ್ರದುರ್ಗದ ಕುರುಬ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮುದಾಯದ ಸಭೆಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿದರು   

ಚಿತ್ರದುರ್ಗ: ‘ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ವಿಚಾರ ಕೇಂದ್ರ ಸರ್ಕಾರದ ಮುಂದಿದೆ. ಒಂದು ವೇಳೆ ಸೇರ್ಪಡೆಗೊಳಿಸಿದರೆ ಎಸ್‌ಟಿ ಮೀಸಲಾತಿ ಹೆಚ್ಚಿಸಬೇಕೆಂಬುದು ನಮ್ಮ ಮೊದಲ ಬೇಡಿಕೆ ಆಗುತ್ತದೆ’ ಎಂದು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸ್ಪಷ್ಟಪಡಿಸಿದರು.

ನಗರದ ಕುರುಬ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಗುಂಪಿಗೆ ಬರಿಗೈಯಲ್ಲಿ ಬರುವಷ್ಟು ನಾವು ಅಮಾನವೀಯರು ಅಲ್ಲ. ಮೀಸಲಾತಿ ಹೆಚ್ಚಿಸಬೇಕೆಂಬುದು ನಮ್ಮ ಮೊದಲ ಬೇಡಿಕೆ. ಈ ವಿಷಯದಲ್ಲಿ ನಾಯಕರು-ಕುರುಬರ ಮಧ್ಯೆ ಸಂಘರ್ಷ ಹುಟ್ಟುಹಾಕುವ ಮಾತುಗಳು ಬೇಡ’ ಎಂದು ತಿಳಿಸಿದರು.

‘ಎಸ್‌ಟಿ ಮೀಸಲು ಪಡೆಯಲು ಸಮುದಾಯ ಅರ್ಹವಾಗಿದೆ. ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಮಾಡಿದ್ದ ಶಿಫಾರಸಿನ ಕೆಲ ಅಂಶಗಳ ಮಾಹಿತಿಗಾಗಿ ರಾಜ್ಯಕ್ಕೆ ವಾಪಸ್ ಬಂದಿದ್ದು, ಆ ಕೆಲಸ ಮಾಡಲು ಮುಂದಾಗುತ್ತಿದ್ದಂತೆ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಒಗ್ಗಟ್ಟು ಅಗತ್ಯ’ ಎಂದರು.

ADVERTISEMENT

‘ಕಾಗಿನೆಲೆ ಮಠ ಸ್ಥಾಪನೆಯಲ್ಲಿ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರ ಶ್ರಮ ಅಪಾರ. ಆದರೆ, ಸಿದ್ದರಾಮಯ್ಯ ಪರ ಹೇಳಿಕೆ ನೀಡಿದರೆ ಕಾಗಿನೆಲೆ ಶ್ರೀಗಳ ತಲೆದಂಡ ಎಂಬ ಮಾತು ಸಮಾಜದಲ್ಲಿ ಒಡಕು ಮೂಡಿಸುವ ನಡೆಯಾಗಿದೆ. ರಾಜಕೀಯ ಕಾರಣಕ್ಕಾಗಿ ಮಠದ ವಿರುದ್ಧ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದರು. 

‘ಕಾಗಿನೆಲೆ ಮಠ ಕುರುಬರದ್ದಾಗಿದ್ದು, ಸಮುದಾಯದ ನಾಯಕರು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗುವ ಸಂದರ್ಭದಲ್ಲಿ ಮಠಾಧೀಶರಾಗಿ ನಾವು ಮೌನ ವಹಿಸುವುದು ಸಮಾಜಕ್ಕೆ ಮಾಡುವ ಅಪಮಾನ. ಯಾವುದೇ ಪಕ್ಷದಲ್ಲಿ ನಮ್ಮ ಜಾತಿಯ ಮುಖಂಡರ ವಿರುದ್ಧ ಕುತಂತ್ರ ನಡೆದು, ಅವರ ಪ್ರಾಬಲ್ಯ ಕುಗ್ಗಿಸುವ ಪ್ರಯತ್ನ ನಡೆದರೆ ನಾವು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.

‘ಲಿಂಗಾಯತ ಸಮಾಜದಲ್ಲಿ ಏಕತೆ ಮೂಡಬೇಕಾಗಿದೆ. ಆದರೆ, ಅವರಲ್ಲಿನ ಅನೇಕ ಉಪಜಾತಿಗಳು ಮೀಸಲಾತಿ ಸೌಲಭ್ಯಕ್ಕಾಗಿ ಲಿಂಗಾಯತ ಪದದಿಂದ ಗುರುತಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಜನಸಂಖ್ಯೆ ಕಡಿಮೆ ಆಗುತ್ತಿದೆ. ಈ ಸಮಸ್ಯೆಯನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟುವ ಪ್ರಯತ್ನ ಸರಿಯಲ್ಲ. ಯಾರ ಜನಸಂಖ್ಯೆ ಕುಗ್ಗಿಸಲು-ಹಿಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲವೆಂಬ ಸತ್ಯ ಅರಿತುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ಮಠದಿಂದ ಕಾಗಿನೆಲೆ ಗ್ರಾಮೀಣಾಭಿವೃದ್ಧಿ ಕೋ-ಆಪರೇಟಿವ್‌ ಸೊಸೈಟಿ ಆರಂಭಿಸುತ್ತಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ 150 ಷೇರು ಸಂಗ್ರಹಿಸುವ ಗುರಿಯಿದೆ. ಮಹಿಳೆಯರಿಗೆ ಸಾಲ ನೀಡಿ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಉದ್ದೇಶವಿದೆ. ಇದಕ್ಕೆ ಕುರುಬ ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕು’ ಎಂದರು.

‘ಸಂಘದ ಕಟ್ಟಡವನ್ನು ವ್ಯವಸ್ಥಿತವಾಗಿಟ್ಟಿದ್ದು, ಬಾಡಿಗೆ ರೂಪದಲ್ಲಿ ಬರುವ ಆದಾಯ ಎಲ್ಲಿಯೂ ಪೋಲಾಗಿಲ್ಲ. ಮಾಳಪ್ಪನಹಟ್ಟಿ ಸಮೀಪ ಒಂದು ಎಕರೆ ಜಾಗವಿದ್ದು, ಅಲ್ಲಿ ಹೈಟೆಕ್ ಸಮುದಾಯ ಭವನ ನಿರ್ಮಿಸುವ ಉದ್ದೇಶವಿದೆ’ ಎಂದು ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮ್‌ ತಿಳಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್‌, ಮುಖಂಡರಾದ ಎಚ್‌.ಮಂಜಪ್ಪ, ಡಿ.ಉಮೇಶ್‌, ಲೋಕೇಶ್‌, ರಾಜಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.