ADVERTISEMENT

ಮಾರುತಿಹಳ್ಳಿ ಎಂಬ ಕುಗ್ರಾಮ, ಸೌಲಭ್ಯಕ್ಕೆ ಸಂಗ್ರಾಮ

ರಸ್ತೆ, ವಿದ್ಯುತ್, ಅಂಗನವಾಡಿ, ಶಾಲೆ ಇಲ್ಲದ ಊರು

ಸಾಂತೇನಹಳ್ಳಿ ಸಂದೇಶ ಗೌಡ
Published 30 ಜುಲೈ 2025, 6:47 IST
Last Updated 30 ಜುಲೈ 2025, 6:47 IST
ಹೊಳಲ್ಕೆರೆ ತಾಲ್ಲೂಕಿನ ಮಾರುತಿ ಹಳ್ಳಿ ಗ್ರಾಮದ ಜನ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಮಾರುತಿ ಹಳ್ಳಿ ಗ್ರಾಮದ ಜನ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.   

ಹೊಳಲ್ಕೆರೆ: ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ, ತಾಲ್ಲೂಕಿನ ಕಣಿವೆ ಜೋಗಿಹಳ್ಳಿ ಸಮೀಪದ ಮಾರುತಿಹಳ್ಳಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಒದಗಿಸಲಾಗಿಲ್ಲ. ಅಂತಯೇ ಗ್ರಾಮದ ಜನರು ಕತ್ತಲಲ್ಲೇ ಜೀವನ ಸಾಗಿಸುವ ದುಃಸ್ಥಿತಿ ಇದೆ.

ಸೌಲಭ್ಯಗಳಿಗಾಗಿ ಈ ಗ್ರಾಮದ ಜನರು ಹತ್ತಾರು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಲ್ಲಿಸಿ ಬೇಸತ್ತಿದ್ದಾರೆ. ಸಂಗ್ರಾಮದ ಮಾದರಿಯಲ್ಲಿ ಕೋರಿಕೆ ಸಲ್ಲಿಸಿದರೂ ಪ್ರಯೋಜನ ಆಗದ್ದರಿಂದ ಕೈಚೆಲ್ಲಿ ಕುಳಿತಿದ್ದಾರೆ.

ಈ ಗ್ರಾಮ ತೇಕಲವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಪಂಚಾಯಿತಿಯ ಅಧ್ಯಕ್ಷೆ ಗೌರಮ್ಮ ಇದೇ ಗ್ರಾಮದವರೆಂಬುದು ಅಚ್ಚರಿಯ ಸಂಗತಿ.

ADVERTISEMENT

‘ಕಣಿವೆ ಜೋಗಿಹಳ್ಳಿಯಲ್ಲಿ ವಾಸವಿದ್ದ ನಮ್ಮನ್ನು ಅಲ್ಲಿ ಜಾಗ ಇಲ್ಲ ಎಂದು 20 ವರ್ಷಗಳ ಹಿಂದೆ ಒಕ್ಕಲೆಬ್ಬಿಸಿ ಇಲ್ಲಿಗೆ ಕಳುಹಿಸಿದರು. ನಾವು ಬಂದು ಇಲ್ಲಿನ ಗೋಮಾಳದ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಆರಂಭಿಸಿದೆವು. ಆದರೆ ನಮಗೆ ಇದುವರೆಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ತೇಕಲವಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಮಂಜ ನಾಯ್ಕ 15 ವರ್ಷಗಳಿಂದ ಇಲ್ಲಿಯೇ ಕೆಲಸದಲ್ಲಿದ್ದು, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ಮಾತನ್ನು ಯಾರೂ ಕೇಳುವುದಿಲ್ಲ’ ಎಂದು ಗೌರಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಗ್ರಾಮದಲ್ಲಿ 80 ಮನೆಗಳಿದ್ದು, ಅಂದಾಜು 300 ಜನಸಂಖ್ಯೆ ಇದೆ. ಪರಿಶಿಷ್ಟರೇ ವಾಸಿಸುತ್ತಿರುವ ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಈ ಗ್ರಾಮದ ಜನ ಬೇರೆ ಕಡೆ ಹೋಗಬೇಕೆಂದರೆ, 3 ಕಿಲೋಮೀಟರ್ ದೂರದ ಕಣಿವೆ ಜೋಗಿಹಳ್ಳಿ ಅಥವಾ ಕಸವನಹಳ್ಳಿ ಮೂಲಕ 5 ಕಿಲೋಮೀಟರ್ ದೂರದ ಹೊರಕೆರೆ ದೇವರಪುರಕ್ಕೆ ಹೋಗಬೇಕು. ಆದರೆ, ಈ ಮಾರ್ಗದಲ್ಲಿ ಸರಿಯಾದ ರಸ್ತೆ ಇಲ್ಲದೆ ಸಂಚಾರ ಕಷ್ಟವಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಣ್ಣಿನ ಕಚ್ಚಾ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗುತ್ತದೆ. ಕೆಸರಲ್ಲಿ ನಡೆದುಕೊಂಡು ಹೋಗುವುದು, ಬೈಕ್ ಓಡಿಸುವುದು ಸಾಧ್ಯವಿಲ್ಲ. ಅಂಗವಿಕಲರು, ವೃದ್ಧರು ಗ್ರಾಮದಿಂದ ಹೊರಗೆ ಹೋಗುವುದು ದುಸ್ತರ ಎಂದು ಊರವರು ಅಳಲು ತೋಡಿಕೊಳ್ಳುತ್ತಾರೆ.

‘ರಸ್ತೆ ಇಲ್ಲ ಎಂಬ ಕಾರಣಕ್ಕೆ ಗ್ರಾಮಕ್ಕೆ ಆಂಬುಲೆನ್ಸ್ ಬರುವುದಿಲ್ಲ. ಇದರಿಂದ ಬಾಣಂತಿಯರು, ಕಾಯಿಲೆಗೆ ತುತ್ತಾದವರು ಪರಿತಪಿಸುವಂತೆ ಆಗಿದೆ. ವಿದ್ಯುತ್ ಸಂಪರ್ಕ ಇಲ್ಲದೆ ಕುಡಿಯುವ ನೀರಿಗೂ ತೊಂದರೆ ಇದೆ ಎಂದು ಸ್ಥಳೀಯರಾದ ಈರಮ್ಮ, ತಿಮ್ಮಕ್ಕ, ಶಾರದಮ್ಮ ಅಲವತ್ತುಕೊಂಡರು.

‘ಇಲ್ಲಿ 15ರಿಂದ 20 ಚಿಕ್ಕ ಮಕ್ಕಳಿದ್ದು, ಅಂಗನವಾಡಿ ಇಲ್ಲ. ಅವರಿಗೆ ಪೂರ್ವಪ್ರಾಥಮಿಕ ಶಿಕ್ಷಣ ಮರೀಚಿಕೆಯಾಗಿದೆ. ಗ್ರಾಮದಲ್ಲಿ ಸರ್ಕಾರಿ ಶಾಲೆಯೂ ಇಲ್ಲ. ಪ್ರಾಥಮಿಕ ಶಾಲೆಗೆ ಕಣಿವೆ ಜೋಗಿಹಳ್ಳಿಗೆ ಹೋಗಬೇಕಾಗಿದ್ದು, ರಸ್ತೆ ಸಂಪರ್ಕ ಇಲ್ಲದ್ದರಿಂದ ಮಳೆಗಾಲ ಮುಗಿಯುವವರೆಗೂ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮೂರಿನ ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಶಿಕ್ಷಣ ಪಡೆದಿದ್ದಾರೆ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

‘2015ರಲ್ಲಿ ಹೆಚ್ಚು ಮಳೆ ಸುರಿದು ಗ್ರಾಮದಲ್ಲಿದ್ದ ಗುಡಿಸಲುಗಳೆಲ್ಲ ನೆಲಸಮವಾಗಿದ್ದವು. ಆಗ ಸಚಿವರಾಗಿದ್ದ ಎಚ್.ಆಂಜನೇಯ ಪರಿಹಾರ ಕೊಡಿಸಿದ್ದರು. ಮನೆ ಕಳೆದುಕೊಂಡವರಿಗೆ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ನಮಗೆ ಹಕ್ಕುಪತ್ರ ಸಿಕ್ಕಿಲ್ಲ’ ಎಂದು ಅವರು ವಿವರಿಸುತ್ತಾರೆ.

‘ಜನಪ್ರತಿನಿಧಿಗಳು ಚುನಾವಣೆ ವೇಳೆ ಮತ ಕೇಳಲು ಇಲ್ಲಿಗೆ ಬರುತ್ತಾರೆ. ಮತ್ತೆ 5 ವರ್ಷ ತಿರುಗಿಯೂ ನೋಡುವುದಿಲ್ಲ. ಶಾಸಕ ಎಂ.ಚಂದ್ರಪ್ಪ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಗ್ರಾಮಕ್ಕೆ ಅಂಗನವಾಡಿ, ಶಾಲೆ ಮಂಜೂರು ಮಾಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಮಾರುತಿ ಹಳ್ಳಿ ಗ್ರಾಮದಲ್ಲಿ ನೆಟ್ಟಿರುವ ಕಂಬಕ್ಕೆ ವಿದ್ಯುತ್ ಸಂಪರ್ಕ ನೀಡದೆ ಖಾಲಿ ಇರುವ ದೃಶ್ಯ.
ಮಾರುತಿಹಳ್ಳಿಗೆ ಹೋಗುವ ರಸ್ತೆಯಲ್ಲಿ ಕೆಸರು ತುಂಬಿರುವ ದೃಶ್ಯ.
ವಿದ್ಯುತ್ ಅಂಗನವಾಡಿ ಶಾಲೆ ರಸ್ತೆ ಇಲ್ಲದೆ ನಾವೆಲ್ಲ ಅರಣ್ಯ ವಾಸಿಗಳಂತೆ ಜೀವಿಸುತ್ತಿದ್ದೇವೆ. ಜನಪ್ರತಿನಿಧಿಗಳು ಗ್ರಾಮಕ್ಕೆ ಬಂದು ಪರಿಶೀಲಿಸಬೇಕು
-ಪರಮೇಶ್ವರಪ್ಪ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಾರುತಿಹಳ್ಳಿ
ಮಾರುತಿಹಳ್ಳಿಯ ಜನ ನಮಗೆ ವಿದ್ಯುತ್ ಸಂಪರ್ಕ ಬೇಕು ಎಂದು ಅರ್ಜಿ ಕೊಟ್ಟರೆ ಪ್ರತೀ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಸಲಾಗುವುದು
-ಮನೋಹರ್ ಬೆಸ್ಕಾಂ ಸೆಕ್ಷನ್ ಆಫೀಸರ್ ಶಿವಗಂಗಾ

ಕಂಬ ನೆಟ್ಟರೂ ಕರೆಂಟ್‌ ಬರಲಿಲ್ಲ..! ‘ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು 15 ವರ್ಷಗಳ ಹಿಂದೆ ಕಂಬಗಳನ್ನು ನೆಟ್ಟಿದ್ದು ಈವರೆಗೆ ವಿದ್ಯುತ್ ಸಂಪರ್ಕ ನೀಡಿಲಾಗಿಲ್ಲ. ಕಂಬ ನೆಟ್ಟಾಗ ಊರ ಜನ ಕತ್ತಲೆಯ ಕೂಪದಿಂದ ಮುಕ್ತಿ ಸಿಗಲಿದೆ ಎಂದು ಸಂಭ್ರಮಿಸಿದ್ದೆವು. ಯಾಕೋ ಗೊತ್ತಿಲ್ಲ. ನಮ್ಮೂರಿಗೆ ಕರೆಂಟ್‌ ಭಾಗ್ಯ ಸಿಕ್ಕಿಲ್ಲ. ಇಡೀ ರಾಜ್ಯದ ಜನ ‘ಗೃಹಜ್ಯೋತಿ’ ಯೋಜನೆಯ ಲಾಭ ಪಡೆಯುತ್ತಿದ್ದರೆ ನಮ್ಮ ಊರಲ್ಲಿ ಕರೆಂಟ್‌ ಜ್ಯೋತಿಯೇ ಬೆಳಗಿಲ್ಲ’ ಎಂದು ಗ್ರಾಮದ ನಿವಾಸಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಹಿಂದೆ ಸೀಮೆಎಣ್ಣೆ ಬುಡ್ಡಿಯ ದೀಪದ ಬೆಳಕಿನಲ್ಲೇ ಜೀವನ ನಡೆಸುತ್ತಿದ್ದೆವು. ಈಗ ಸೀಮೆಎಣ್ಣೆಯೂ ಸಿಗದೆ ಮನೆಯಲ್ಲಿ ಬೆಂಕಿ ಹಾಕಿಕೊಂಡು ಅದರ ಬೆಳಕಿನಲ್ಲಿ ಜೀವನ ನಡೆಸುವ ಸ್ಥಿತಿ ಇದೆ. ವಿದ್ಯಾರ್ಥಿಗಳು ಬ್ಯಾಟರಿ ದೀಪದ ಬೆಳಕಿನಲ್ಲಿ ಓದುತ್ತಾರೆ. ಕೆಲವು ಮನೆಗಳಿಗೆ ಮಾತ್ರ ದೂರದ ತೋಟಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ. ಇದು ಮೂರು ಫೇಸ್ ವಿದ್ಯುತ್ ಲೈನ್ ಆಗಿದ್ದು ದಿನಕ್ಕೆ ಮೂರ್ನಾಲ್ಕು ಗಂಟೆ ಮಾತ್ರ ಕರೆಂಟ್ ಇರುತ್ತದೆ. ನಮಗೆ ವಿದ್ಯುತ್‌ ಸಂಪರ್ಕ ಬೇಕಾಗಿದೆ’ ಎಂದು ಅವರು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.