ಚಿತ್ರದುರ್ಗ: ಜಿಲ್ಲೆಯಾದ್ಯಂತ ವಿವಿಧ ಸರ್ಕಾರಿ ಕಚೇರಿಗಳು, ಶಾಲೆ, ವಿದ್ಯಾರ್ಥಿ ನಿಲಯ, ಅಭಿವೃದ್ಧಿ ನಿಗಮಗಳ ಕಚೇರಿ, ಆಸ್ಪತ್ರೆಗಳು ನೆಪ ಮಾತ್ರಕ್ಕೆ ಸ್ವಚ್ಛತೆ ಕಾಣುತ್ತಿವೆ. ಆವರಣದಲ್ಲಿ ಬಿದ್ದಿರುವ ಕಸದ ರಾಶಿ, ಕೊಳಚೆಯಂತೆ ನಿಂತ ನೀರು, ಬೆಳೆದ ಗಿಡಗಂಟೆ ಸಾಮಾನ್ಯವಾಗಿದೆ.
ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ ಆರೋಗ್ಯ ನೀಡುವ ಜಿಲ್ಲಾ ಆರೋಗ್ಯ ಇಲಾಖೆ ಆವರಣ ಅನೈರ್ಮಲ್ಯ ತಾಣವಾಗಿದೆ. ಎರಡು ಕಡೆಯ ಪ್ರವೇಶ ದ್ವಾರದಲ್ಲಿ ರಾಶಿ..ರಾಶಿ ಕಸ ಸ್ವಾಗತಿಸುತ್ತಿದೆ. ಕಚೇರಿ ಮುಂಭಾಗದ ಕಾಂಪೌಂಡ್ ಸುತ್ತ ಕಸ ಕಣ್ಣಿಗೆ ರಾಚುತ್ತಿದೆ. ಕಳೆದ ಕೆಲದಿನಗಳಿಂದ ಆಗ್ಗಾಗೆ ಬರುತ್ತಿರುವ ಮಳೆಯ ಪರಿಣಾಮ ಕಚೇರಿಗಳ ಆವರಣದಲ್ಲಿ ಹುಲ್ಲ, ಗಿಡಗಂಟೆ ಬೆಳೆದಿವೆ. ಇದನ್ನು ನಗರದ ಜಿಲ್ಲಾ ಉದ್ಯೋಗ ಕೇಂದ್ರದ ಆವರಣ ಸಾಕ್ಷೀಕರಿಸುತ್ತಿದೆ.
ನಗರ ಸೇರಿದಂತೆ ಹಲವೆಡೆ ಸರ್ಕಾರಿ ಕಟ್ಟಡಗಳು ಖಾಲಿ ಬಿದ್ದಿರುವ ಪರಿಣಾಮ ಕಸದ ತೊಟ್ಟಿಗಳಾಗಿವೆ. ಹಲವು ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಅವುಗಳು ಉದ್ಘಾಟನೆ ಭಾಗ್ಯ ಕಂಡಿಲ್ಲ. ಸರ್ಕಾರಿ ಕಟ್ಟಡಗಳ ಲಭ್ಯತೆ ಇದ್ದರೂ ಕಚೇರಿಗಳನ್ನು ಖಾಸಗಿ ಕಟ್ಟಡದಲ್ಲೇ ಮುಂದುವರಿಸುತ್ತಿದ್ದು, ಅಲ್ಲಿ ಸಹ ಸ್ವಚ್ಛತೆ ದೂರವಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಆವರಣ, ಶಾಲಾ ಶಿಕ್ಷಣ ಇಲಾಖೆ ಆವರಣದಲ್ಲಿ ಬೆಳೆದ ಹುಲ್ಲು, ಗಿಡಗಂಟೆ ತೆರವು ಮಾಡಲಾಗಿದೆ. ಆದರೆ ಅದರ ಕಸವನ್ನು ಆವರಣ ಮೂಲೆಯಲ್ಲಿ ರಾಶಿ ಹಾಕಿದ್ದು, ನಾಯಿಗಳ ಆವಾಸ ತಾಣವಾಗಿದೆ.
ಅತಿ ಹೆಚ್ಚು ಆದಾಯ ತರುವ ಉಪ ನೋಂದಣಿ ಕಚೇರಿಯ ದೂಳು, ಕಸದಿಂದ ಆವೃತವಾಗಿದೆ. ಜನರಿಗೆ ಕೂರಲು ಸಹ ಸರಿಯಾದ ಸ್ಥಳವಿಲ್ಲವಾಗಿದೆ. ತಹಶೀಲ್ದಾರ್ ಕಚೇರಿ ಆವರಣ ಸಹ ಇದಕ್ಕೆ ಹೊರತಾಗಿಲ್ಲ. ಮೊಳಕಾಲ್ಮುರು ಪಟ್ಟಣದ ತಾಲ್ಲೂಕು ಉಪ ನೋಂದಣಿ ಅಧಿಕಾರಿಗಳ ಕಚೇರಿ ಆವರಣದಲ್ಲಿ ಬೇಕಾಬಿಟ್ಟಿಯಾಗಿ ಗಿಡಗಂಟಿಗಳು ಬೆಳೆದು ನಿಂತಿವೆ. ವಿಷಜಂತುಗಳು ಸೇರಿಕೊಂಡರೂ ಗೊತ್ತಾಗದ ಸ್ಥಿತಿಯಿದೆ. ನೋಂದಣಿಗೆ ಬರುವ ಜನರು ಸಮೀಪದ ಕಟ್ಟೆಗಳ ಮೇಲೆ ಕುಳಿತುಕೊಳ್ಳುತ್ತಾರೆ. ಇದರಿಂದ ಅಪಾಯ ಸಂಭವ ಹೆಚ್ಚಿದೆ ಎಂದು ದೂರಲಾಗಿದೆ.
ಗಿಡಗಂಟಿಗಳನ್ನು ದಾಟಿಕೊಂಡು ಆವರಣದಲ್ಲಿರುವ ಕೊಠಡಿಯೊಂದಕ್ಕೆ ಜನರು ಹೋಗಬೇಕಿದೆ. ಪ್ರಸ್ತುತ ಮಳೆಗಾಲವಾಗಿದ್ದು ಗಿಡಗಳು ಇನ್ನೂ ಹೆಚ್ಚು ಬೆಳೆಯಲಿವೆ. ಕಚೇರಿಗೆ ಬರುವವರಿಗೆ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆಗೆ ಕ್ರಮ ಕೈಗೊಳ್ಳುವ ಮೂಲಕ ನೆರವಿಗೆ ಬರಬೇಕಿದೆ.
ಚಳ್ಳಕೆರೆ, ನಾಯಕನಹಟ್ಟಿ, ಧರ್ಮಪುರ, ಪರಶುರಾಂಪುರ, ತಳಕು, ಶ್ರೀರಾಂಪುರ ಸೇರಿದಂತೆ ಜಿಲ್ಲೆಯ ಹೋಬಳಿ, ಗ್ರಾಮ ಪಂಚಾಯಿತಿ ಕೇಂದ್ರಗಳು ಸಕಾಲಕ್ಕೆ ಸ್ವಚ್ಛತೆ ಕಾಣುತ್ತಿಲ್ಲ.
ಜಿಲ್ಲಾ ಕೇಂದ್ರ ಸರ್ಕಾರಿ ಕಚೇರಿ ಆವರಣಗಳು ಸ್ಛಚ್ಛತೆಯಿಂದ ದೂರವಾಗಿವೆ. ನಿತ್ಯ ಒಂದಿಲ್ಲೊಂದು ಕೆಲಸಕ್ಕೆ ಬರುವ ಜನರು ಅನೈರ್ಮಲ್ಯ ವಾತಾವರಣ ಕಂಡು ಬೇಸರಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನಹರಿಸಿ ಸ್ವಚ್ಛತೆಗೆ ಕ್ರಮವಹಿಸಬೇಕು.ಎಚ್.ಕೆ.ಎಸ್.ಸ್ವಾಮಿ ಪರಿಸರವಾದಿ
ಗ್ರಾಮದ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ದೂರವಾಗಿದೆ. ಗ್ರಾಮ ಪಂಚಾಯಿತಿ ಆವರಣದ ಸುತ್ತಮುತ್ತಲ ಪ್ರದೇಶ ನೀರು ನಿಲ್ಲುವ ತಾಣವಾಗಿದೆ. ಕೂಡಲೇ ಸಂಬಂಧಪಟ್ಟವರು ಕ್ರಮವಹಿಸಬೇಕು.ರುದ್ರೇಶ್ ಗೂಡಂಗಡಿ ಮಾಲೀಕ
ಚಿಕ್ಕಜಾಜೂರಿನ ಕೃಷಿ ಉಪ ಮಾರುಕಟ್ಟೆ ರೈತರಿಗೆ ರೋಗ ತರುವ ತಾಣವಾಗಿ ಮಾರ್ಪಟ್ಟಿದೆ. ಕಸದ ರಾಶಿ ತ್ಯಾಜ್ಯ ಬಿದ್ದಿರುವ ಕಾರಣ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.ಎಂ.ಜಿ. ಪ್ರಭುದೇವ್ ರೈತ
ಹೊಸದುರ್ಗ: ಸರ್ಕಾರಿ ಕಚೇರಿಗೆ ಬೇಕು ಮೂಲಸೌಕರ್ಯ
ತಾಲ್ಲೂಕಿನ ಹಲವು ಸರ್ಕಾರಿ ಕಚೇರಿಗಳು ಮೂಲಸೌಕರ್ಯಗಳೇ ಇಲ್ಲದಂತಾಗಿವೆ. ಒಂದಿಲ್ಲೊಂದು ಕಾರಣಕ್ಕಾಗಿ ನಿತ್ಯ ಕಚೇರಿಗೆ ಬರುವ ಸಾರ್ವಜನಿಕರು ಪರದಾಡುವಂತಾಗಿದೆ. ತಾಲ್ಲೂಕಿನಾದ್ಯಂತ ನಿತ್ಯ ನೂರಾರು ಜನರು ಬರುವ ಸ್ಥಳ ತಾಲ್ಲೂಕು ಕಚೇರಿ. ಆದರೆ ಯಾವುದೇ ಅಗತ್ಯ ಮೂಲ ಸೌಕರ್ಯಗಳೇ ಇಲ್ಲವಾಗಿದೆ. ನೆಪ ಮಾತ್ರಕ್ಕೆ ಶೌಚಾಲಯವಿದೆ ನೀರು ಸುಸಜ್ಜಿತ ಬಾಗಿಲುಗಳ ದೂರದ ಮಾತಾಗಿದೆ. ಕುಡಿಯುವ ನೀರಿನ ಸೌಲಭ್ಯವಂತೂ ಎಲ್ಲಿಯೂ ಇಲ್ಲ. ಕಸದ ಬುಟ್ಟಿ ವ್ಯವಸ್ಥೆಯು ಇಲ್ಲ. ಇನ್ನೂ ಸಾರ್ವಜನಿಕರು ಕುಳಿತುಕೊಳ್ಳಲು ಆಸನವನ್ನು ಹುಡುಕುವಂತಾಗಿದೆ. ಬೇಡಿಕೆ ಈಡೇರಿಕೆಗೆ ತಹಶೀಲ್ದಾರ್ ಬಳಿ ಮನವಿ ಸಲ್ಲಿಸಲು ಸಾವಿರಾರು ಜನರು ತಾಲ್ಲೂಕು ಕಚೇರಿ ಬಳಿ ಆಗಮಿಸುತ್ತಾರೆ. ಅಷ್ಟು ಜನರಿಗೆ ನಿಲ್ಲಲು ಸ್ಥಳಾವಕಾಶವೇ ಇರುವುದಿಲ್ಲ. ದಣಿದವರಿಗೆ ನೀರು ಸಹ ಇಲ್ಲಿಲ್ಲ. ಮಳೆ ಬಂದರಂತೂ ಇಲ್ಲಿನ ಸಿಬ್ಬಂದಿ ಪಾಡು ಹೇಳತೀರದು. ನೂತನ ಕಟ್ಟಡ ಕಾಮಗಾರಿ ಆರಂಭವಾಗಿದೆ. ಆದರೆ ಜನರು ಉದ್ಘಾಟನೆಯನ್ನು ಎದುರು ನೋಡುತ್ತಿದ್ದಾರೆ. ಇನ್ನೂ ಪುರಸಭೆಯಲ್ಲೂ ಸಮರ್ಪಕ ಶೌಚಾಲಯವಿಲ್ಲ. ವಾಹನ ನಿಲುಗಡೆ ಕ್ರಮಬದ್ಧವಾಗಿಲ್ಲ. ಪ್ರತಿಭಟನಾಕಾರರಿಗೂ ನಿಲ್ಲಲು ಜಾಗವಿಲ್ಲದಂತಾಗಿದೆ. ಸಹಾಯಕ ಕೃಷಿ ನಿರ್ದೇಶಕ ಕಚೇರಿಯಲ್ಲಿ ಗೊಬ್ಬರ ಬೀಜ ಖರೀದಿಸುವ ಸ್ಥಳದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಂತೂ ಮೊದಲೇ ಇಲ್ಲ. ರೈತರು ಬೀಜ ಗೊಬ್ಬರ ಖರೀದಿಗೆ ಹೋದಾಗ ಸರದಿ ಸಾಲಿನಲ್ಲಿ ನಿಂತಿರುತ್ತಾರೆ ಅವರಿಗೆ ನೆರಳಿನ ವ್ಯವಸ್ಥೆಯಿಲ್ಲ. ಕೆಲವೊಂದು ಸರ್ಕಾರಿ ಕಚೇರಿಗಳಲ್ಲೇ ಸ್ವಚ್ಛತೆ ಮರಿಚೀಕೆಯಾಗಿದೆ. ಕಚೇರಿಗಳ ಸುತ್ತಲೂ ಗಿಡಗಂಟೆ ಬೆಳೆದಿವೆ. ಕಚೇರಿ ಒಳಗೂ ಸ್ವಚ್ಛತೆಯಿಲ್ಲ. ಅಧಿಕಾರಿಗಳು ಈ ಬಗ್ಗೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಆದರೆ ಸಾರ್ವಜನಿಕರು ಮಾತ್ರ ಪರಿತಪಿಸುತ್ತಿದ್ದಾರೆ.
ಹಿರಿಯೂರು: ಅವ್ಯವಸ್ಥೆಯ ಆಗರ; ತಾಲ್ಲೂಕು ಕಚೇರಿ ಆವರಣ
ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ನಾಲ್ಕು ವರ್ಷ ಕಳೆದಿದೆ. ಆದರೆ ಅದರಿಂದ ನೀರು ಬಂದಿದ್ದು ನಾಲ್ಕೈದು ವಾರ ಮಾತ್ರ. ಇನ್ನೂ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದು ಮಾಮೂಲಿ ಎಂಬಂತಾಗಿದೆ. ಕೋಟಿ ಲೆಕ್ಕದಲ್ಲಿ ಸರ್ಕಾರಕ್ಕೆ ಆದಾಯ ತಂದುಕೊಡುವ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಗೆ ಬರುವವರಿಗೆ ಆರೇಳು ಕುರ್ಚಿ ಒಂದು ಕ್ಯಾನ್‌ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಮಂಗಳವಾರ ಶನಿವಾರ ಹೊರತುಪಡಿಸಿದ ದಿನಗಳಲ್ಲಿ ಕಚೇರಿಗೆ ಬರುವವರು ತಮ್ಮ ಸರದಿಗೆ ಚಿಕ್ಕ ಪಡಸಾಲೆಯಂತಹ ಜಾಗದಲ್ಲಿ ಅತ್ತಿಂದಿತ್ತ ನಡೆದಾಡುತ್ತ ಕಾಯಬೇಕಿದೆ. ಶೌಚಾಲಯಕ್ಕೆ ತಾಲ್ಲೂಕು ಕಚೇರಿಯ ಮತ್ತೊಂದು ಮಗ್ಗುಲಿಗೆ ಹೋಗಬೇಕು. ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿದ್ದರೆ ಕಾಂಪೌಂಡ್ ಪಕ್ಕದಲ್ಲಿನ ಪೊದೆಗಳ ಮರೆಯೇ ಗತಿ. ತಾಲ್ಲೂಕು ಕಚೇರಿಗೆ ಪಹಣಿ ಇತ್ಯಾದಿ ಕೆಲಸಗಳಿಗೆ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಮುಖ್ಯ ರಸ್ತೆಯಿಂದ ಕಚೇರಿ ದ್ವಾರದವರೆಗೆ ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿರುವ ಕಾರಣ ವಿಶೇಷವಾಗಿ ಮಹಿಳೆಯರಿಗೆ ತುಂಬ ಕಿರಿ ಕಿರಿಯಾಗುತ್ತದೆ. ಪಾವತಿಸಿ–ಬಳಸಿ ಪದ್ಧತಿಯ ಶೌಚಾಲಯವಿದ್ದು ಮೂತ್ರಕ್ಕೆ ₹ 2 ಚಿಲ್ಲರೆ ಇಲ್ಲದವರು ಶೌಚಾಲಯದ ಹಿಂದಿನ ಗೋಡೆಯನ್ನು ಆಶ್ರಯಿಸುವ ಕಾರಣ ಸುತ್ತಮುತ್ತಲ ವಾತಾವರಣ ದುರ್ವಾಸನೆಯಿಂದ ಕೂಡಿದೆ. ಕಚೇರಿ ಆವರಣದಲ್ಲಿ ಕಾವಲುಗಾರರನ್ನು ನೇಮಿಸಿ ದ್ವಿಚಕ್ರ ವಾಹನಗಳನ್ನು ಸಾಲಾಗಿ ನಿಲ್ಲಿಸುವ ವ್ಯವಸ್ಥೆ ಮಾಡಬೇಕು. ನಿರ್ವಹಣಾ ವೆಚ್ಚವನ್ನು ಉಪ ನೋಂದಣಿ ಕಚೇರಿಗೆ ವಹಿಸಿ ಶೌಚಾಲಯವನ್ನು ಉಚಿತವಾಗಿ ಬಳಸುವಂತಾಗಬೇಕು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸುವಂತಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಚಿಕ್ಕಜಾಜೂರು: ಕಚೇರಿಗಳಲ್ಲಿ ಸ್ವಚ್ಛತೆ ಮರೀಚಿಕೆ
ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ರೈತರು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರಿ ಆಡಳಿತ ಘಟಕಗಳಾದ ಗ್ರಾಮ ಪಂಚಾಯಿತಿ ಮಾರುಕಟ್ಟೆ ಬೆಸ್ಕಾಂ ಪೊಲೀಸ್ ಕಂದಾಯ ಶಿಕ್ಷಣ ಆರೋಗ್ಯ ಪಶುವೈದ್ಯ ಆಸ್ಪತ್ರೆ ನೀರು ಸರಬರಾಜು ಕೃಷಿ ತೋಟಗಾರಿಕೆ ಗ್ರಂಥಾಲಯ ಅರಣ್ಯ ಇಲಾಖೆಗಳು ಹಾಗೂ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಗಳಲ್ಲಿ ಸ್ವಚ್ಛತೆ ಎಂಬುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಚಿಕ್ಕಜಾಜೂರು ಸೇರಿದಂತೆ ಆಡನೂರು ಶಿವಪುರ ಚಿಕ್ಕಎಮ್ಮಿಗನೂರು ಹಿರೇಎಮ್ಮಿಗನೂರು ಬಿ. ದುರ್ಗ ಗುಂಜಿಗನೂರು ಅಂದನೂರು ಮುತ್ತುಗದೂರು ಗ್ರಾಮ ಪಂಚಾಯಿತಿಗಳಿವೆ. ಇವುಗಳ ವ್ಯಾಪ್ತಿಯಲ್ಲಿ ಒಳಚರಂಡಿ ರಸ್ತೆ ಕುಡಿಯುವ ನೀರು ಪೂರೈಕೆ ಬೀದಿ ದೀಪಗಳ ಸಮಸ್ಯೆ ಮಾರುಕಟ್ಟೆ ಮೊದಲಾದ ಕಡೆಗಳಲ್ಲಿ ಸಮಸ್ಯೆಗಳೇ ಕಾಣಿಸುತ್ತಿವೆ. ಆದರೆ ಸಾರ್ವಜನಿಕರು ಸ್ಥಳೀಯರ ಪ್ರಭಾವದಿಂದಲೋ ಯಾರಿಗೂ ಬೇಕಿಲ್ಲದ್ದು ನಮಗೇಕೆ ಅದರ ಗೊಡವೆ ಎಂಬಂತೆ ಕೈಕಟ್ಟಿ ಮೂಕ ಪ್ರೇಕ್ಷಕರಂತಾಗಿದ್ದಾರೆ. ಚಿಕ್ಕಜಾಜೂರಿನ ಕೃಷಿ ಉಪ ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಡಿಸೆಂಬರ್‌ನಿಂದ ಜೂನ್‌ವರೆಗೆ ರೈತರಿಂದ ಸರ್ಕಾರದ ಬೆಂಬಲ ಬೆಲೆಯಲ್ಲಿ ತೆರೆಯುವ ರಾಗಿ ಖರೀದಿ ಕೇಂದ್ರಕ್ಕೆ ರೈತರು ಬಂದಾಗ ಅವರಿಗೆ ಕುಡಿಯುವ ನೀರು ಸಿಗುವುದಿಲ್ಲ. ಅಲ್ಲದೆ ಇದೇ ಆವರಣದಲ್ಲಿ ರೈತರು ಕಣ ಸುಗ್ಗಿಯನ್ನು ಮಾಡಿ ಬಿಟ್ಟು ಹೋದ ತ್ಯಾಜ್ಯವನ್ನು ಮಾರುಕಟ್ಟೆಯವರು ಇದುವರೆಗೂ ಸ್ವಚ್ಛತೆ ಮಾಡಿಸಿಲ್ಲ ಎಂದು ರೈತರು ದೂರಿದ್ದಾರೆ. ಗ್ರಾಮದ ಗ್ರಾಮ ಪಂಚಾಯಿತಿ ಆವರಣದ ಮುಂಭಾಗದ ಅಂಗಡಿಗಳ ಸಮೀಪದಲ್ಲಿ ಮಳೆ ನೀರು ನಿಂತು ಇಲ್ಲಿಗೆ ಬರುವ ಗ್ರಾಹಕರಿಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹೇಳಿದರೆ ಕೆಲವೇ ದಿನಗಳಲ್ಲಿ ವಾಣಿಜ್ಯ ಸಂಕೀರ್ಣ ಆರಂಭವಾಗುತ್ತದೆ ಆಗ ಎಲ್ಲರಿಗೂ ಅಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು’ ಎನ್ನುತ್ತಾರೆ ಗೂಡಂಗಡಿಗಳ ಮಾಲೀಕ ಕೃಷ್ಣಪ್ಪ. ಹೋಬಳಿ ಕೇಂದ್ರವಾದ ಬಿ.ದುರ್ಗದ ಕಂದಾಯ ಇಲಾಖೆಯ ನಾಡ ಕಚೇರಿಯಲ್ಲಿ ಸರಿಯಾದ ವಿದ್ಯುತ್ ಇಲ್ಲದೆ ವಿವಿಧ ಪ್ರಮಾಣ ಪತ್ರ ಪಡೆಯಲು ಬರುವ ಹೋಬಳಿಯ ಜನರಿಗೆ ಸರ್ವರ್ ಸಮಸ್ಯೆಯಿಂದ ಪ್ರಮಾಣ ಪತ್ರ ಪಡೆಯಲು ವಾರಗಟ್ಟಲೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಜಗದೀಶ್. ಜಿಲ್ಲೆಯ ಏಕೈಕ ರೈಲ್ವೆ ಜಂಕ್ಷನ್ ಆಗಿರುವ ಚಿಕ್ಕಜಾಜೂರಿನಲ್ಲಿ ರಸ್ತೆಯದ್ದೇ ಸಮಸ್ಯೆಯಾಗಿದೆ. ಮುಖ್ಯ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಸರಿಯಾದ ಡಾಂಬರ್ ರಸ್ತೆ ಇಲ್ಲ. ವಿವಿಧ ಕಡೆಗಳಿಗೆ ಪ್ರಯಾಣಿಸಲು ಬರುವ ಪ್ರಯಾಣಿಕರು ಮಳೆಗಾಲದಲ್ಲಿ ಕೆಸರಿನಲ್ಲಿಯೇ ಹೋಗುವ ಸ್ಥಿತಿ ಇದೆ. ಇನ್ನಾದರೂ ಸರ್ಕಾರ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ನೊಂದ ಜನರಿಗೆ ಉತ್ತಮ ಸೌಲಭ್ಯ ಒದಗಿಸಬೇಕೆಂಬುದು ಜನರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.