ಚಿತ್ರದುರ್ಗ: ನಗರದ ಹೊರವಲಯದ ಜಿ.ಆರ್.ಹಳ್ಳಿ ಬಳಿಯ ಸಂಕುಚಿತ ನೈಸರ್ಗಿಕ ಗ್ಯಾಸ್ (ಸಿಎನ್‌ಜಿ) ವಿತರಣಾ ಕೇಂದ್ರದಲ್ಲಿ ಬುಧವಾರ ನಡೆದ ಸಿಲಿಂಡರ್ ಸ್ಫೋಟದಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಸಿಎನ್‌ಜಿ ಪೂರೈಸುವ ಈ ಘಟಕದಲ್ಲಿ ಸುರಕ್ಷತಾ ನಿಯಮ ಪಾಲನೆ ಮಾಡದಿರುವುದೇ ದುರಂತಕ್ಕೆ ಕಾರಣ ಎಂದು ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಆರೋಪಿಸಿದ್ದಾರೆ.
ಪೆಟ್ರೋಲ್, ಡೀಸೆಲ್, ಎಲ್‌ಪಿಜಿಗೆ ಬದಲಿ ಇಂಧನವಾಗಿ ನೈಸರ್ಗಿಕ ಅನಿಲ ಬಳಕೆ ಮಾಡಲಾಗುತ್ತಿದೆ. ಭಾರತ ಸರ್ಕಾರದ ಗೇಲ್ (ಜಿಎಐಎಲ್– ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ) ವತಿಯಿಂದ ನೈಸರ್ಗಿಕ ಇಂಧನ ಪೂರೈಸಲಾಗುತ್ತಿದೆ. ಎಲ್‌ಪಿಜಿ ಬದಲಿಗೆ ಮನೆಗಳಿಗೆ ಪೈಪ್‌ಲೈನ್ ಮೂಲಕ ನೈಸರ್ಗಿಕ ಇಂಧನ ಒದಗಿಸಲಾಗುತ್ತಿದೆ. ಜೊತೆಗೆ ಸಿಎನ್‌ಜಿ ವಾಹನಗಳಿಗೆ ಪ್ರತ್ಯೇಕವಾಗಿ ಸಿಎನ್‌ಜಿ ಬಂಕ್ ಸ್ಥಾಪನೆ ಮಾಡಿ ಇಂಧನ ತುಂಬಿಸಲಾಗುತ್ತಿದೆ.
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಸಿಎನ್‌ಜಿ ಪೂರೈಸಲು ಜಿ.ಆರ್.ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ– 150ರ ಬದಿಯಲ್ಲಿ ವಿತರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಯೂನಿಸನ್ ಎನ್ವಿರೋ ಪ್ರೈವೇಟ್ ಲಿಮಿಟೆಡ್ ಏಜೆನ್ಸಿಯು ವಿತರಣಾ ಘಟಕವನ್ನು 6 ವರ್ಷಗಳಿಂದ ನಿರ್ವಹಣೆ ಮಾಡುತ್ತಿದೆ. ಚಿತ್ರದುರ್ಗದ 1,600 ಮನೆ, ದಾವಣಗೆರೆಯ 600 ಮನೆಗಳಿಗೆ ಪೈಪ್‌ಲೈನ್ ಮೂಲಕ ಸಿಎನ್‌ಜಿ ಪೂರೈಸುತ್ತಿದೆ. ಎರಡೂ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ 21 ಸಿಎನ್‌ಜಿ ಬಂಕ್‌ಗಳಿಗೆ ಟ್ಯಾಂಕರ್ ಮೂಲಕ ನೈಸರ್ಗಿಕ ಇಂಧನ ಸರಬರಾಜು ಮಾಡುತ್ತಿದೆ.
ಏ. 9ರಂದು ಎಂದಿನಂತೆ ವಿತರಣಾ ಕೇಂದ್ರದಿಂದ ಟ್ಯಾಂಕರ್ ಬುಲೆಟ್‌ಗೆ (ಉದ್ದದ ಸಿಲಿಂಡರ್) ಸಿಎನ್‌ಜಿ ಸಂಭವಿಸುವಾಗ ಸ್ಫೋಟ ಉಂಟಾಗಿ ಶಿವಮೊಗ್ಗ ಜಿಲ್ಲೆ, ಭದ್ರಾವತಿಯ ಲಕ್ಷ್ಮಣ್ (37) ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರಲ್ಲಿ ಪಿಳ್ಳೆಕೇರನಹಳ್ಳಿಯ ಗಂಗಾಧರ್ (42) ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಮೃತಪಟ್ಟ ಇಬ್ಬರಲ್ಲಿ ಒಬ್ಬರೂ ಸಿಎನ್‌ಜಿ ವಿತರಣೆಯಲ್ಲಿ ತರಬೇತಿ ಪಡೆದು ತಂತ್ರಜ್ಞರಾಗಿರಲಿಲ್ಲ. ಲಕ್ಷ್ಮಣ್ ಟ್ಯಾಂಕರ್ ಚಾಲಕರಾಗಿದ್ದರೆ ಗಂಗಾಧರ್ ಕೇಂದ್ರದ ಮೇಲ್ವಿಚಾರಕರಾಗಿದ್ದರು. ವಿತರಣಾ ಘಟಕದಿಂದ ಟ್ಯಾಂಕರ್‌ಗಳಿಗೆ ಸಿಎನ್‌ಜಿ ತುಂಬಿಸುವಾಗ ಪರಿಣತಿಯ ಅವಶ್ಯಕತೆ ಇರುತ್ತದೆ. ಆದರೆ ಯಾವುದೇ ಪರಿಣತಿ ಇಲ್ಲದ ಸಿಬ್ಬಂದಿಯಿಂದ ಸಿಎನ್‌ಜಿ ತುಂಬಿಸುವ ಕೆಲಸ ಮಾಡಿಸಿರುವುದು ಘಟನೆಗೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಸಿಎನ್‌ಜಿಯ ಒತ್ತಡವನ್ನು ಸಂಕುಚಿತಗೊಳಿಸಿ ಬುಲೆಟ್‌ಗೆ ತುಂಬುವ ಕಾರಣ ಅದು ಸೋರಿಕೆಯಾದರೆ ಪರಿಣಾಮ ತೀವ್ರವಾಗಿರುತ್ತದೆ. ಬುಧವಾರ ಸ್ಫೋಟಗೊಂಡ ಟ್ಯಾಂಕರ್ ಬುಲೆಟ್ 1 ಕಿ.ಮೀ ದೂರಕ್ಕೆ ಹಾರಿ ಹೋಗಿ ಬಿದ್ದಿರುವುದು ಸ್ಫೋಟದ ತೀವ್ರತೆಯನ್ನು ಸಾಕ್ಷೀಕರಿಸುತ್ತದೆ. ವಿತರಣಾ ಕೇಂದ್ರದ ಪಕ್ಕದಲ್ಲೇ ಬೃಹತ್ ರೈಸ್ ಮಿಲ್ ಕೂಡ ಇದ್ದು ಅಲ್ಲಿಗೂ ಕಬ್ಬಿಣದ ತುಂಡುಗಳು ಬಡಿದಿವೆ. ಅದೃಷ್ಟವಶಾತ್ ಮಿಲ್‌ನಲ್ಲಿ ಯಾವುದೇ ತೊಂದರೆಯಾಗಿಲ್ಲ.
‘ಕಂಪನಿಯವರು ಖಾಸಗಿ ಟ್ರಾನ್ಸ್‌ಪೋರ್ಟ್ ಕಂಪನಿಗೆ ಸಿಎನ್‌ಜಿ ಟ್ಯಾಂಕರ್ ಸಾಗಿಸುವ ಗುತ್ತಿಗೆ ನೀಡಿದ್ದಾರೆ. ಟ್ಯಾಂಕರ್ ಓಡಿಸುವ ಚಾಲಕರಿಗೆ, ಸಿಬ್ಬಂದಿಗೆ ಯಾವುದೇ ಸುರಕ್ಷತೆಯ ಪರಿಕರ ನೀಡಿಲ್ಲ. ಸುರಕ್ಷತೆಯ ಎಚ್ಚರಿಕೆಯನ್ನೂ ನೀಡಿಲ್ಲ. ಸಿಎನ್‌ಜಿ ಸೋರಿಕೆಯಾದರೆ ಏನು ಮಾಡಬೇಕು ಎಂಬ ಕನಿಷ್ಠ ಎಚ್ಚರಿಕೆಯನ್ನೂ ನೀಡಿಲ್ಲ. ನಮ್ಮಿಂದಲೇ ಗ್ಯಾಸ್ ತುಂಬಿಸುವ ಕೆಲಸ ಮಾಡಿಸುತ್ತಾರೆ’ ಎಂದು ಟ್ಯಾಂಕರ್ ಚಾಲಕರೊಬ್ಬರು ಆರೋಪಿಸಿದರು.
ಬುಧವಾರ ಸ್ಫೋಟ ನಡೆದ ನಂತರ ಜಿ.ಆರ್.ಹಳ್ಳಿ ಸೇರಿದಂತೆ ಅಕ್ಕಪಕ್ಕದ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಿಎನ್‌ಜಿ ವಿತರಣಾ ಕೇಂದ್ರದ ಸಮೀಪದಲ್ಲೇ ಮನೆಗಳು, ಹೋಟೆಲ್, ಕಾರ್ಖಾನೆಗಳಿದ್ದು ಸಿಎನ್‌ಜಿ ಸ್ಫೋಟದ ತೀವ್ರತೆ ಕಂಡು ಭಯಪೀಡಿತರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವಿತರಣಾ ಕೇಂದ್ರ ಸ್ಥಾಪನೆಗೆ ಅವಕಾಶ ನೀಡಿರುವುದನ್ನು ಅವರು ಪ್ರಶ್ನಿಸಿದ್ದಾರೆ.
‘ಪೊಲೀಸ್ ಇಲಾಖೆ, ಪರಿಸರ ನಿಯಂತ್ರಣ ಮಂಡಳಿ, ಆಹಾರ ಇಲಾಖೆ ಸೇರಿದಂತೆ 11 ಇಲಾಖೆಗಳು ಸಿಎನ್‌ಜಿ ವಿತರಣಾ ಕೇಂದ್ರ ಸ್ಥಾಪನೆಗೆ ಎನ್‌ಒಸಿ ನೀಡಿರುವುದೇ ತಪ್ಪು. ಕೂಡಲೇ ಈ ಕೇಂದ್ರವನ್ನು ಸ್ಥಳಾಂತರ ಮಾಡಿ ಅಪಾಯ ತಪ್ಪಿಸಬೇಕು’ ಎಂದು ಜಿ.ಆರ್.ಹಳ್ಳಿ ನಿವಾಸಿಗಳು ಒತ್ತಾಯಿಸಿದರು.
‘ಟ್ಯಾಂಕರ್ ಬುಲೆಟ್‌ನಲ್ಲಿದ್ದ ದೋಷದಿಂದ ಸ್ಫೋಟ ನಡೆದಿದೆ ಎಂದು ಕಂಪನಿಯವರು ತಿಳಿಸಿದ್ದಾರೆ. ನಿಖರ ಕಾರಣಕ್ಕಾಗಿ ತನಿಖೆ ನಡೆಸಲಾಗುತ್ತಿದೆ’ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.
ಸತ್ತ ಇಬ್ಬರಲ್ಲಿ ಒಬ್ಬರೂ ತಂತ್ರಜ್ಞ ಆಗಿರಲಿಲ್ಲ ರಾಷ್ಟ್ರೀಯ ಹೆದ್ದಾರಿ ಬದಿ ಘಟಕ ಸ್ಥಾಪಿಸಿದ್ದೇಕೆ ಜಿ.ಆರ್.ಹಳ್ಳಿ ಸಮೀದಪ ನಿವಾಸಿಗಳಲ್ಲಿ ಆತಂಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.