ADVERTISEMENT

ಕೈಸೇರದ ಕೋವಿಡ್ ಪರೀಕ್ಷಾ ವರದಿ: ಕಾಲೇಜಿಗೆ ವಿದ್ಯಾರ್ಥಿಗಳ ಕೊರತೆ

110 ವಿದ್ಯಾರ್ಥಿಗಳಲ್ಲಿ ಕೋವಿಡ್

ಕೆ.ಎಸ್.ಪ್ರಣವಕುಮಾರ್
Published 26 ನವೆಂಬರ್ 2020, 4:58 IST
Last Updated 26 ನವೆಂಬರ್ 2020, 4:58 IST
ಡಾ.ಫಾಲಾಕ್ಷ
ಡಾ.ಫಾಲಾಕ್ಷ   

ಚಿತ್ರದುರ್ಗ: ಜಿಲ್ಲೆಯಲ್ಲಿ ಕಾಲೇಜುಗಳು ಆರಂಭವಾಗಿ ವಾರ ಆಗಿದೆ. ಆದರೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿಲ್ಲ. ಇನ್ನು ಕೋವಿಡ್ ಪರೀಕ್ಷೆಗೆ ಮುಂದಾದವರ ಪೈಕಿ 110 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ. ಇದು ವಿದ್ಯಾರ್ಥಿ ಸಮೂಹದಲ್ಲಿ ಆತಂಕ ಉಂಟು ಮಾಡಿದೆ. ಪರೀಕ್ಷೆ ಮಾಡಿಸಿಕೊಳ್ಳಲಿಕ್ಕೂ ಕೆಲವರು ಹಿಂದೇಟು ಹಾಕುತ್ತಿದ್ದಾರೆ.

ನ. 17ರಂದು ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ತೆರೆಯಲುಸರ್ಕಾರ ಅನುಮತಿ ನೀಡಿತು. ಹತ್ತು ತಿಂಗಳ ನಂತರ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಕಾಲೇಜುಗಳು ಸಜ್ಜಾಗಿವೆ. ಮಾರ್ಗಸೂಚಿಯಂತೆ ಕೋವಿಡ್ (ಆರ್‌ಟಿಪಿಸಿಆರ್) ನೆಗೆಟಿವ್ ವರದಿಯೊಂದಿಗೆ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಬೇಕಿದೆ. ಆದರೆ, ವರದಿ ಕೈಸೇರುವುದು ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೂ ಹಿನ್ನೆಡೆ ಉಂಟಾಗುತ್ತಿದೆ.

ಈಗಾಗಲೇ ಕೋವಿಡ್ ನೆಗೆಟಿವ್ ವರದಿ ಪಡೆದ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಹಾಜರಾಗುತ್ತಿದ್ದಾರೆ. ಕಡಿಮೆ ಸಂಖ್ಯೆ ಕಾರಣಕ್ಕೆ ಎಂದಿನಂತೆ ಆಫ್‌ಲೈನ್ ತರಗತಿ ನಡೆಸಲು ಕಾಲೇಜುಗಳಲ್ಲಿ ಸಾಧ್ಯವಾಗುತ್ತಿಲ್ಲ.

ADVERTISEMENT

ತರಗತಿಗೆ ಹಾಜರಾಗಲು ಹಂಬಲಿಸುತ್ತಿರುವ ವಿದ್ಯಾರ್ಥಿಗಳು ಕೋವಿಡ್ ನೆಗೆಟಿವ್ ವರದಿಯೊಂದಿಗೆ ಬರಲು ಉತ್ಸುಕರೂ ಆಗಿದ್ದಾರೆ. ಅದಕ್ಕಾಗಿ ಜಿಲ್ಲಾ ಆಸ್ಪತ್ರೆ ಆವರಣದ ಕೋವಿಡ್ ಪರೀಕ್ಷಾ ಕೇಂದ್ರ ಸೇರಿ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿನ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹ ಕೇಂದ್ರದ ಮುಂದೆ ನಿತ್ಯ ಸಾಲಾಗಿ ನಿಲ್ಲುತ್ತಿದ್ದಾರೆ. ಪರೀಕ್ಷೆಗಾಗಿ ಕಾದು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳ ಜತೆ ಸಾರ್ವಜನಿಕರು ಪರೀಕ್ಷೆಗೆ ಮುಂದಾಗುತ್ತಿರುವ ಕಾರಣ ಅನಿವಾರ್ಯವಾಗಿ ವರದಿ ವಿಳಂಬವಾಗುತ್ತಿದೆ.

ಸರತಿ ಸಾಲು, ಹೆಚ್ಚು ಜನರನ್ನು ಕಂಡು ಕೆಲ ವಿದ್ಯಾರ್ಥಿಗಳು ನಿರಾಸೆಯಿಂದ ವಾಪಸ್‌ ಹೋಗುತ್ತಿರುವುದು ಕೆಲವೆಡೆ ಕಂಡು ಬಂದಿದೆ. ಕೋವಿಡ್ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲಿಸುತ್ತಾರೆ ಎಂಬ ಭಯವೂ ಕೆಲ ವಿದ್ಯಾರ್ಥಿಗಳಲ್ಲಿ ಇರುವ ಕಾರಣ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದಲೂ ಕಾಲೇಜು ಪ್ರವೇಶಕ್ಕೆ ಅಡಚಣೆ ಉಂಟಾಗಿದೆ.

ಜಿಲ್ಲೆಯಲ್ಲಿ ನಿತ್ಯ ಸಾವಿರಾರು ಜನರಿಗೆ ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆ ಮಾಡಬೇಕಿದೆ. ಹೆಚ್ಚಿನ ವಿದ್ಯಾರ್ಥಿಗಳು ಇರುವ ಕಾಲೇಜುಗಳ ಬಳಿಯೇ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸಿದ್ಧವಿದೆ. ಆದರೆ, ಈ ರೀತಿ ಮನವಿ ಮಾಡಿಕೊಂಡ ಕಾಲೇಜುಗಳ ಸಂಖ್ಯೆಯೂ ಕಡಿಮೆ ಇದೆ.

ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಗೊಳಿಸಿರುವ ಕಾರಣ ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಸ್ವಲ್ಪ ದಿನ ಕಾದು ಕಾಲೇಜಿನ ವಾತಾವರಣ ನೋಡಿಕೊಂಡು ಮಕ್ಕಳನ್ನು ಕಳುಹಿಸಲು ನಿರ್ಧರಿಸಿದ್ದಾರೆ.ನಗರದ ಬಹುತೇಕ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿಲ್ಲ. ಕೋವಿಡ್ ವರದಿ ಕೈಸೇರುವುದು ತಡವಾದ ಕಾರಣ, ಮುಂದಿನ ಡಿಸೆಂಬರ್ ಮೊದಲ ಅಥವಾ 2ನೇ ವಾರದ ಬಳಿಕ ವಿದ್ಯಾರ್ಥಿ ಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪ್ರಾಧ್ಯಾಪಕರು ಅಭಿಪ್ರಾಯಪಟ್ಟಿದ್ದಾರೆ.

5,283 ವಿದ್ಯಾರ್ಥಿಗಳಿಗೆ ಪರೀಕ್ಷೆ

‘ಕಾಲೇಜು ಆರಂಭದಿಂದ ಈವರೆಗೂ ಜಿಲ್ಲೆಯಲ್ಲಿ 5,283 ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅವರಲ್ಲಿ 110 ಮಂದಿಗೆ ಕೋವಿಡ್ ದೃಢಪಟ್ಟಿದೆ. ತೀವ್ರ ಸ್ವರೂಪದ ಲಕ್ಷಣ ಇಲ್ಲದ ಕಾರಣ ಮನೆಯಲ್ಲೇ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ತಿಳಿಸಿದ್ದಾರೆ.

‘ದಿನಕ್ಕೆ 1,900 ಕೋವಿಡ್‌ ಪರೀಕ್ಷೆ ಕಡ್ಡಾಯ. ಜತೆಗೆ ನಿತ್ಯ ಪರಿಕರಗಳನ್ನು ತರಿಸಿಕೊಳ್ಳಬೇಕಿರುವ ಕಾರಣ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿನ ಮುಖ್ಯಸ್ಥರು ಮನವಿ ಮಾಡಿದರೆ ತಂಡವನ್ನು ಪರೀಕ್ಷೆ ಮಾಡಲು ಅಲ್ಲಿಗೆ ಕಳುಹಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.