ADVERTISEMENT

ಹೊಳಲ್ಕೆರೆ| ₹1 ಕೋಟಿ ವೆಚ್ಚದಲ್ಲಿ ಲೋಕದೊಳಲು ಕೆರೆ ಅಭಿವೃದ್ಧಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:55 IST
Last Updated 8 ಅಕ್ಟೋಬರ್ 2025, 5:55 IST
ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು ಗ್ರಾಮದಲ್ಲಿ ಶಾಸಕ ಎಂ.ಚಂದ್ರಪ್ಪ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು
ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು ಗ್ರಾಮದಲ್ಲಿ ಶಾಸಕ ಎಂ.ಚಂದ್ರಪ್ಪ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು   

ಹೊಳಲ್ಕೆರೆ: ‘₹1 ಕೋಟಿ ವೆಚ್ಚದಲ್ಲಿ ಲೋಕದೊಳಲು ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು. 

ತಾಲ್ಲೂಕಿನ ಲೋಕದೊಳಲು ಗ್ರಾಮದಲ್ಲಿ ಮಂಗಳವಾರ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 

‘ಲೋಕದೊಳಲು ಕೆರೆ ಭೌಗೋಳಿಕವಾಗಿ ಎತ್ತರದ ಪ್ರದೇಶದಲ್ಲಿದ್ದು, ಭದ್ರಾ ನೀರು ಹರಿಸುವುದು ಕಷ್ಟ. ಆದ್ದರಿಂದ ಮಳೆನೀರು ವ್ಯರ್ಥವಾಗದಂತೆ ಕೆರೆಗೆ ಹರಿಯುವ ವ್ಯವಸ್ಥೆ ಮಾಡಲಾಗುವುದು. ಇಲ್ಲಿನ ಬೆಟ್ಟ ಪ್ರದೇಶದಲ್ಲಿದ್ದ ಹೊನ್ನಣ್ಣನ ಕಟ್ಟೆಗೆ ದೊಡ್ಡ ತಡೆಗೋಡೆ ನಿರ್ಮಿಸಿ ಕುಡಿನೀರಕಟ್ಟೆ ಕಡೆಗೆ ಹರಿಯುತ್ತಿದ್ದ ಹಳ್ಳದ ಪಥವನ್ನು ಈ ಕಡೆಗೆ ಬದಲಾಯಿಸಿದ್ದರಿಂದ ಲೋಕದೊಳಲು ಕೆರೆಗೆ ಹೆಚ್ಚು ನೀರು ಬರುತ್ತಿದೆ. ಕೆರೆ ತೂಬಿನ ಹತ್ತಿರ ನೀರು ಬಸಿಯುತ್ತಿದ್ದು, ಅದನ್ನು ಬಲಪಡಿಸಲಾಗುವುದು. ಕೋಡಿಯನ್ನು ಸ್ವಲ್ಪ ಎತ್ತರ ಮಾಡಿದರೆ ಹೆಚ್ಚು ನೀರು ಸಂಗ್ರಹ ಆಗಲಿದೆ. ಈ ಕೆರೆ ತುಂಬಿದರೆ ಸುತ್ತಲಿನ ಎಮ್ಮೆಹಟ್ಟಿ, ಇಡೇಹಳ್ಳಿ, ವಿಶ್ವನಾಥನ ಹಳ್ಳಿ, ಗುಂಡೇರಿ ಸೇರಿದಂತೆ ನಾಲ್ಕೈದು ಹಳ್ಳಿಗಳಿಗೆ ಅನುಕೂಲ ಆಗಲಿದೆ’ ಎಂದರು. 

ADVERTISEMENT

‘ಲೋಕದೊಳಲು ಬೆಟ್ಟದಲ್ಲಿರುವ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ದೇವಾಲಯಕ್ಕೆ ಮೆಟ್ಟಿಲು ನಿರ್ಮಿಸಲು ₹1 ಕೋಟಿ ಅನುದಾನ ನೀಡಿದ್ದೆ. ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕೆ ₹1.5 ಕೋಟಿ ಅನುದಾನ ನೀಡಿದ್ದೇನೆ. ರಾಜ್ಯದ ನಾನಾ ಕಡೆ ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿಯ ಭಕ್ತರಿದ್ದು, ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ದೇವಸ್ತಾನ ಟ್ರಸ್ಟ್ ಹಾಗೂ ಭಕ್ತರು ಬೆಟ್ಟದ ಮೇಲೆ ದೊಡ್ಡ ದೇವಾಲಯ ಕಟ್ಟಲು ತೀರ್ಮಾನಿಸಿದ್ದು, ನಾನೂ ಕೈಜೋಡಿಸುತ್ತೇನೆ. ಗ್ರಾಮದ ಸಿಡಿಲೇಶ್ವರ ಸ್ವಾಮಿ ಹಾಗೂ ಮಾರಮ್ಮ ದೇವಸ್ಥಾನಗಳ ಅಭಿವೃದ್ಧಿಗೆ ಬದ್ಧ’ ಎಂದು ಭರವಸೆ ನೀಡಿದರು. 

ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮೇಶ್, ಮೀನಮ್ಮ, ಚಂದ್ರಶೇಖರ್, ಗವಿರಂಗಪ್ಪ, ಪುಟ್ಟರಂಗಯ್ಯ, ವಕೀಲರಾದ ಶಿವಕುಮಾರ್, ರಂಗಸ್ವಾಮಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.