ADVERTISEMENT

ಎಡಪಕ್ಷಗಳಲ್ಲಿ ಚುನಾವಣಾ ಪೂರ್ವ ಹೊಂದಾಣಿಕೆ

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 4:57 IST
Last Updated 25 ನವೆಂಬರ್ 2022, 4:57 IST
ಸಾತಿ ಸುಂದರೇಶ್‌
ಸಾತಿ ಸುಂದರೇಶ್‌   

ಚಿತ್ರದುರ್ಗ: ಬಿಜೆಪಿಯನ್ನು ಎದುರಿಸಲು ಜಾತ್ಯತೀತ, ಪ್ರಗತಿಪರ ಮತ್ತು ಎಡ ಪಕ್ಷಗಳು ಒಗ್ಗೂಡುವ ಅಗತ್ಯವಿದೆ. ಸಿಪಿಐ ಹಾಗೂ ಸಿಪಿಎಂ ಚುನಾವಣೆ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ತಿಳಿಸಿದರು.

‘ಕೋಮುವಾದಿ ರಾಜಕೀಯವನ್ನು ಮುನ್ನೆಲೆಗೆ ತಂದಿರುವ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಒಗ್ಗೂಡಬೇಕಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಇದಕ್ಕೆ ನಾಂದಿ ಹಾಡಬೇಕಿದೆ. ಜಾತ್ಯತೀತ ಶಕ್ತಿಗಳು ಸಮರ್ಥವಾಗಿ ಕಣಕ್ಕೆ ಇಳಿದರೆ ಬಿಜೆಪಿ ಎದುರಿಸಲು ಸಾಧ್ಯವಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಜಾತಾಂತ್ರಿಕ ವ್ಯವಸ್ಥೆಗೆ ವಿರುದ್ಧವಾಗಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ದಿನಕ್ಕೊಂದು ನೀತಿಗಳು ಸರ್ಕಾರದಿಂದ ಹೊರ ಬೀಳುತ್ತಿವೆ. ಜನರ ವಿರೋಧ ವ್ಯಕ್ತವಾಗುತ್ತಿದ್ದಂತೆ ನೀತಿಗಳು ಬದಲಾಗುತ್ತಿವೆ. ಭ್ರಷ್ಟಾಚಾರ ಮಿತಿ ಮೀರಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಎಸ್ಟೇಟ್‌ ಮಾಲೀಕರು ಒತ್ತುವರಿ ಮಾಡಿಕೊಂಡ ಅರಣ್ಯ ಭೂಮಿಯನ್ನು ಸಕ್ರಮ ಮಾಡುವ ಹುನ್ನಾರ ನಡೆಯುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿಪಿಐ ನಿರ್ಧರಿಸಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಮೂಡಿಗೆರೆ ಹಾಗೂ ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆ. ಎಡಪಕ್ಷಗಳು ಒಗ್ಗೂಡಿ ಚುನಾವಣೆಯಲ್ಲಿ ಶಕ್ತಿಪ್ರದರ್ಶನ ಮಾಡಲಿವೆ’ ಎಂದು ಹೇಳಿದರು.

‘ಬಿಹಾರದಲ್ಲಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. 1958ರಿಂದಲೂ ರಾಜ್ಯದ ಚುನಾವಣಾ ರಾಜಕೀಯದಲ್ಲಿ ಎಡಪಕ್ಷಗಳು ಸಕ್ರಿಯವಾಗಿವೆ. ಕಾರ್ಮಿಕ ಶಕ್ತಿಯನ್ನು ಮತವಾಗಿ ಪರಿವರ್ತನೆ ಮಾಡುವ ಪ್ರಯತ್ನ ನಡೆಯುತ್ತಿದೆ. ಕಾರ್ಯಕರ್ತರಲ್ಲಿ ಶಕ್ತಿ ತುಂಬಿ ಚುನಾವಣೆಗೆ ಸಜ್ಜುಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ಹತ್ತು ವರ್ಷಗಳಲ್ಲಿ ಚುನಾವಣೆಯಲ್ಲಿ ಯಶಸ್ಸು ಪಡೆಯುವ ವಿಶ್ವಾಸವಿದೆ’ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್‌ ಬಾಬು, ಮುಖಂಡರಾದ ಸತ್ಯಕೀರ್ತಿ, ಟಿ.ಆರ್‌.ಉಮಾಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.