ADVERTISEMENT

ಚಿತ್ರದುರ್ಗ: ಮನೆಗೆ ನುಗ್ಗಿ ಸೆರೆಯಾದ ಚಿರತೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 4:05 IST
Last Updated 8 ಮೇ 2021, 4:05 IST
ಚಿರತೆ ಸೆರೆಯಾಗಿರುವ ದೃಶ್ಯ
ಚಿರತೆ ಸೆರೆಯಾಗಿರುವ ದೃಶ್ಯ   

ಚಿತ್ರದುರ್ಗ: ತಾಲ್ಲೂಕಿನ ಮುದ್ದಾಪುರ ಗ್ರಾಮದಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಅತಂಕ ಸೃಷ್ಟಿಸಿದೆ.

ಗ್ರಾಮದ ಚಿದಾನಂದ ಎಂಬುವರ ಮನೆಗೆ ನುಗ್ಗಿದ್ದು, ಗ್ರಾಮಸ್ಥರು ಚಿರತೆಯನ್ನು ಕೂಡಿ ಹಾಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಚಿದಾನಂದ ಅವರ ಪತ್ನಿ ಅಂಗಳದಲ್ಲಿ ಕಸ ಗುಡಿಸುತ್ತಿದ್ದರು. ಈ ಸಮಯದಲ್ಲಿ ಚಿರತೆ ಮುಂಬಾಗಿಲು ಮೂಲಕ ‌ಮನೆ ಪ್ರವೇಶಿಸಿದೆ. ಇದರಿಂದ ಗಾಬರಿಗೊಂಡ ಅವರು ಚೀರಿಕೊಂಡು ಬಾಗಿಲು ಹಾಕಿದ್ದಾರೆ. ಇನ್ನೂ ಹಾಸಿಗೆಯಿಂದ ಏಳದೇ ಇದ್ದ ಚಿದಾನಂದ ಮನೆ ಒಳಗೆ ಸಿಲುಕಿದ್ದಾರೆ.

ADVERTISEMENT

ಮನೆಯ ಹಾಲ್ ನಿಂದ ಚಿರತೆ ಅಡುಗೆ ಮನೆಗೆ ತೆರಳುತ್ತಿದ್ದಂತೆ ಚಿದಾನಂದ ಅವರು ಹೊರಗೆ ಬಂದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮದ ಮಧ್ಯ ಭಾಗದಲ್ಲಿರುವ ಮನೆಗೆ ಚಿರತೆ ನುಗ್ಗಿದ್ದು ಸೋಜಿಗ ಮೂಡಿಸಿದೆ. ಗ್ರಾಮದ ಸುತ್ತ ಅಡಿಕೆ ತೋಟವಿದ್ದು, ಎರಡು ಚಿರತೆಗಳು ಈಚೆಗೆ ಕಾಣಿಸಿಕೊಂಡಿದ್ದವು ಎಂದು ಗ್ರಾಮದ ಕುಮಾರ್ ಎಂಬುವರು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ನೇತೃತ್ವದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ಶುರು ಆಗಿದೆ. ಮನೆ ಸಮೀಪ ಜನಜಂಗುಳಿ ನಿರ್ಮಾಣವಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಜನರನ್ನು ಚದುರಿಸುತ್ತಿದ್ದಾರೆ. ಕೈಯಲ್ಲಿ ಬಡಿಗೆ ಹಿಡಿದ ಗ್ರಾಮಸ್ಥರು ಚಿರತೆಗೆ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.