ADVERTISEMENT

ಚಳಮಡು ಅರಣ್ಯ ಪ್ರದೇಶದಲ್ಲಿ ಚಿರತೆ ಹಾವಳಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 13:17 IST
Last Updated 4 ಫೆಬ್ರುವರಿ 2021, 13:17 IST

ಹಿರಿಯೂರು: ತಾಲ್ಲೂಕಿನ ಚಳಮಡು ಅರಣ್ಯ ಪ್ರದೇಶದ ಸುತ್ತಲಿನ ಹಳ್ಳಿಗಳಲ್ಲಿ ಒಂದು ವಾರದಿಂದ ಚಿರತೆ ಹಾವಳಿ ಹೆಚ್ಚಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಚಳಮಡು ಗ್ರಾಮದಿಂದ ಎರಡು ಕಿ.ಮೀ. ದೂರದಲ್ಲಿ ಅರಣ್ಯ ಪ್ರದೇಶ ಇದೆ. ಗ್ರಾಮದ ರೈತ ಪರಶಿವಮೂರ್ತಿ ಅವರ ಮೂರು ನಾಯಿಗಳನ್ನು, ಮುಸ್ಲಿಂ ಕಾಲೊನಿಯ ಮುಸ್ತಫಾ ಎಂಬುವವರಿಗೆ ಸೇರಿದ್ದ ಮೂರು ಮೇಕೆ ಮರಿ ಹಾಗೂ ಐದು ನಾಯಿಗಳನ್ನು ಈಚೆಗೆ ಚಿರತೆ ತಿಂದು ಹಾಕಿದೆ. ಬುಧವಾರ ರಾತ್ರಿ ಕುರಿ ಮರಿಯೊಂದನ್ನು ತಿಂದಿದೆ.

ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

‘ಚಿರತೆ ಹಾವಳಿ ಬಗ್ಗೆಅರಣ್ಯ ಇಲಾಖೆಗೆ ದೂರು ಕೊಟ್ಟಿದ್ದೇವೆ’ ಎಂದು ರೈತ ಪರಶಿವಮೂರ್ತಿ ಹೇಳಿದರು.

‘ಚಳಮಡು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಚಿರತೆ ಹಿಡಿಯಲು ಬೋನು ಇಟ್ಟಿದ್ದೇವೆ. ನಿತ್ಯ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಚಳಿಗಾಲದಲ್ಲಿ ಚಿರತೆಗಳು ಆಹಾರ ಹುಡುಕಿ ಬರುವುದು ಎಲ್ಲ ಕಡೆ ಸಾಮಾನ್ಯ. ಅರಣ್ಯದ ಅಂಚಿನಲ್ಲಿ ಇರುವ ಹಳ್ಳಿಗಳಿಗೆ ನುಗ್ಗಿ ಕಟ್ಟಿ ನಾಯಿ, ಕುರಿ, ಮೇಕೆಗಳ ಮೇಲೆ ಅವು ದಾಳಿ ಮಾಡುತ್ತವೆ. ಚಳಿ ಕಡಿಮೆಯಾದ ಮೇಲೆ ಸಹಜವಾಗಿ ಚಿರತೆಗಳು ದಟ್ಟ ಅರಣ್ಯದತ್ತ ಹೋಗುತ್ತವೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದು ವಲಯ ಅರಣ್ಯಾಧಿಕಾರಿ ಶ್ರೀಹರ್ಷ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.