ADVERTISEMENT

ಕೊಟ್ಟೂರಿನಲ್ಲಿ ಕೆರೆ ತುಂಬಿಸುವ ಕಾರ್ಯವಾಗಲಿ

ಕೊಟ್ಟೂರಿನಲ್ಲಿ ಜ. 28ರಿಂದ ತರಳಬಾಳು ಹುಣ್ಣಿಮೆ ಮಹೋತ್ಸವ: ಸಿರಿಗೆರೆಶ್ರೀ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:53 IST
Last Updated 5 ಡಿಸೆಂಬರ್ 2022, 4:53 IST
ಸಿರಿಗೆರೆಯಲ್ಲಿ ಭಾನುವಾರ ನಡೆದ ತರಳಬಾಳು ಹುಣ್ಣಿಮೆ ಪೂರ್ವ ಸಿದ್ಧತಾ ಸಭೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಸಿರಿಗೆರೆಯಲ್ಲಿ ಭಾನುವಾರ ನಡೆದ ತರಳಬಾಳು ಹುಣ್ಣಿಮೆ ಪೂರ್ವ ಸಿದ್ಧತಾ ಸಭೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.   

ಸಿರಿಗೆರೆ: ‘ತರಳಬಾಳು ಹುಣ್ಣಿಮೆಗೆ ತನ್ನದೇ ಆದ ಪರಂಪರೆ ಇದೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಸರ್ವಜನಾಂಗದವರ ವೇದಿಕೆ ಈ ಮಹೋತ್ಸವ. ಈ ಬಾರಿಯ ಹುಣ್ಣಿಮೆ ನಡೆಯುವ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಕೆರೆ ತುಂಬಿಸುವುದು ಮತ್ತು ಅಲ್ಲಿಯ ಭಾಗದ ಜನರ ಮನಸ್ಸನ್ನು ತುಂಬಿಸುವ ಕಾರ್ಯವು ಹುಣ್ಣಿಮೆಯಿಂದ ಆಗಬೇಕಾಗಿದೆ’ ಎಂದು ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಭಾನುವಾರ ನಡೆದ ತರಳಬಾಳು ಹುಣ್ಣಿಮೆ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜನವರಿ 28ರಿಂದ ಫೆಬ್ರುವರಿ 5ರವರೆಗೆ ಹುಣ್ಣಿಮೆ ಮಹೋತ್ಸವ ನಡೆಯಲಿದ್ದು,ಧರ್ಮದ ತಳಹದಿಯ ಮೇಲೆ ಮಹೋತ್ಸವವು ಯಶಸ್ವಿಗೊಳಿಸಬೇಕು. ರಾಜಕೀಯ ವ್ಯಕ್ತಿಗಳನ್ನು ಗೌರವಿಸೋಣ. ಆದರೆ ಯಾವುದೇ ಒಂದು ಪಕ್ಷದ ಮೇಲಾಟವಾಗಬಾರದು.ಸರ್ಕಾರದ ನಿಯಮಾನುಸಾರ ಫ್ಲೆಕ್ಸ್ ನಿಷೇಧಿಸಲಾಗಿದೆ. ಹುಣ್ಣಿಮೆ ಪರಂಪರೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಕೊಟ್ಟೂರು ಹೊಸ ತಾಲ್ಲೂಕು ಆಗಿದ್ದು, ಈ ಭಾಗದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಕೂಡ ಹೊಸ ಭಾಷ್ಯ ಬರೆಯಬೇಕು ಎಂಬುದು ಹಲವರ ಹಂಬಲ. ಅಲ್ಲಿನ ರಸ್ತೆ, ಕುಡಿಯುವ ನೀರು, ಕೆರೆ ತುಂಬಿಸುವುದು, ಕೊಟ್ಟೂರು– ಚಿತ್ರದುರ್ಗ ರೈಲು ಮಾರ್ಗ ಸೇರಿದಂತೆ ಅನೇಕ ಮೂಲಸೌಲಭ್ಯಗಳು ಆಗಬೇಕಾಗಿದೆ. ಇತರ ಹುಣ್ಣಿಮೆ ಮಹೋತ್ಸವದಂತೆ ಅಭಿವೃದ್ಧಿ ಕಾರ್ಯಗಳಿಗೆ ಈ ಬಾರಿಯೂ ಚಾಲನೆ ದೊರೆಯಬೇಕು ಎಂದು ಸಭೆಯಲ್ಲಿದ್ದ ಮುಖಂಡರು ಹೇಳಿದರು.

ಸಾಧು ಸದ್ಧರ್ಮ ವೀರಶೈವ ಸಂಘದ ಉಪಾಧ್ಯಕ್ಷ ಡಾ. ಎಂ.ಸಿ.ಮೂಗಣ್ಣ ಅವರನ್ನು ಹುಣ್ಣಿಮೆ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಿರಿಗೆರೆಶ್ರೀ ಆಯ್ಕೆ ಮಾಡಿದರು. ತಾಲ್ಲೂಕಿನ ಎಲ್ಲಾ ಸಮಾಜದ ಅಧ್ಯಕ್ಷರನ್ನು ಸ್ವಾಗತ ಸಮಿತಿ ಉಪಾಧ್ಯಕ್ಷರನ್ನಾಗಿ ಮಾಡುವಂತೆ ಸೂಚಿಸಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಸಮಾರೋಪ ಸಮಾರಂಭಕ್ಕೆ ಬರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದರು.

ಕಾದಂಬರಿಕಾರ ಕುಂ. ವೀರಭದ್ರಪ್ಪ, ಚಾಪೆ ಚಂದ್ರಪ್ಪ, ನಾಗರಕಟ್ಟೆ ರಾಜೇಂದ್ರ ಪ್ರಸಾದ್, ಮರಿಸ್ವಾಮಿ, ಉಜ್ಜಿನಿ ರುದ್ರಪ್ಪ, ಅಂಚೆ ಕೊಟ್ರೇಶ್, ಇಮಾಂ ಸಾಹೇಬ್, ಶೆಟ್ರು ತಿಂದಪ್ಪ, ಹಿರೇಮೇಗಳಗೆರೆ ಮಹಾಬಲೇಶ್ವರ ಗೌಡ, ಮೂಗೇಶ್, ಶ್ರೀಧರ ಶೆಟ್ರು, ತೋಟದಮನೆ ಶಿವಪ್ಪ, ಶಿವನಗುತ್ತಿ,ಸಂಘದ ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ ಗೌಡ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ, ಕೊಟ್ಟೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವರಮನಿ ಕೊಟ್ರೇಶ್,ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ಧಯ್ಯ ಇದ್ದರು.

ಕೊಟ್ಟೂರು, ಅಂಬಳಿ, ಚಿರಬಿ, ಕೆ.ಅಯ್ಯನಹಳ್ಳಿ, ಸಿರಿಗೆರೆ ಸೇರಿದಂತೆ ವಿವಿಧೆಡೆಯ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.