
ಚಿತ್ರದುರ್ಗ: ಅಜ್ಜನನ್ನು ಕೊಲೆ ಮಾಡಿದ ಮೊಮ್ಮಗನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ ವಾಸುದೇವ್ ಅವರು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಎಸ್.ಚಿತ್ರಲಿಂಗಪ್ಪ ಶಿಕ್ಷೆಗೆ ಒಳಗಾದವನು. ಚಿತ್ರಲಿಂಗಪ್ಪ ತನ್ನ ಅಜ್ಜ ಈಶ್ವರಪ್ಪ ಬಳಿ ₹ 3 ಲಕ್ಷ ಕೈಗಡ ಸಾಲ ಪಡೆದಿದ್ದು, ಇದರಲ್ಲಿ ₹ 75,000 ಮಾತ್ರ ವಾಪಸ್ ನೀಡಿದ್ದನು.
ಚಿತ್ರಹಳ್ಳಿ ಪೆಟ್ರೋಲ್ ಬಂಕ್ ಪಕ್ಕದ ರಸ್ತೆ ಬದಿಯಲ್ಲಿದ್ದ ಒಂದೂವರೆ ಎಕರೆ ಜಮೀನನ್ನು ಈಶ್ವರಪ್ಪ ಅವರು ಕಡಿಮೆ ಬೆಲೆಗೆ ಮಾರಾಟ ಮಾಡಿಸಿದ್ದರು. ಈ ವಿಚಾರವಾಗಿ ಚಿತ್ರಲಿಂಗಪ್ಪ ಹಾಗೂ ಈಶ್ವರಪ್ಪ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ₹ 2.25 ಲಕ್ಷ ಬಾಕಿಯನ್ನು ಕೊಡುವಂತೆ ಈಶ್ವರಪ್ಪ ಚಿತ್ರಲಿಂಗಪ್ಪನನ್ನು ಪೀಡಿಸುತ್ತಿದ್ದರು. ಇದರಿಂದ ಕುಪಿತಗೊಂಡಿದ್ದ ಚಿತ್ರಲಿಂಗಪ್ಪ 2022 ಜುಲೈ 9ರಂದು ಅರಸನಘಟ್ಟ ಗ್ರಾಮದ ಸಮೀಪದ ಹನುಮಂತದೇವರ ಕಣಿವೆ ಬಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದನು. ಪ್ರಕರಣದ ಕುರಿತು ಸಿಪಿಐ ಕೆ.ಎನ್.ರವೀಶ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅಪರಾಧಿಗೆ ಜೀವಾವಧಿ ಶಿಕ್ಷೆ, ₹ 1 ಲಕ್ಷ ದಂಡ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.