ADVERTISEMENT

ಚಿತ್ರದುರ್ಗ: ಜೀವ ಹಿಂಡುತ್ತಿದೆ ಸುಣ್ಣದ ಗುಮ್ಮಿಯ ಹೊಗೆ, ದೂಳು!

ಗಾಳಿಯೊಂದಿಗೆ ಸೇರಿಕೊಳ್ಳುತ್ತಿರುವ ವಿಷಕಾರಿ ಹೊಗೆ, ಶ್ವಾಸಕೋಶಕ್ಕೂ ತೊಂದರೆ

ಎಂ.ಎನ್.ಯೋಗೇಶ್‌
Published 24 ಡಿಸೆಂಬರ್ 2024, 5:13 IST
Last Updated 24 ಡಿಸೆಂಬರ್ 2024, 5:13 IST
ಜೋಗಿಮಟ್ಟಿ ರಸ್ತೆಯ ಅಗಳು ಪ್ರದೇಶದಲ್ಲಿ ಸುಣ್ಣದ ಗುಮ್ಮಿಗಳಿಗೆ ಸುಣ್ಣಗಾರರು ಬೆಂಕಿ ಹಚ್ಚಿರುವುದು
ಜೋಗಿಮಟ್ಟಿ ರಸ್ತೆಯ ಅಗಳು ಪ್ರದೇಶದಲ್ಲಿ ಸುಣ್ಣದ ಗುಮ್ಮಿಗಳಿಗೆ ಸುಣ್ಣಗಾರರು ಬೆಂಕಿ ಹಚ್ಚಿರುವುದು   

ಚಿತ್ರದುರ್ಗ: ಸಂಜೆಯಾಗುತ್ತಿದ್ದಂತೆ ಜೋಗಿಮಟ್ಟಿ ರಸ್ತೆ ಹಾಗೂ ಅಕ್ಕಪಕ್ಕದ ಬಡಾವಣೆಗಳ ಜನರು ವಿಷಕಾರಿ ಹೊಗೆ ಹಾಗೂ ದೂಳಿನಿಂದ ಹೈರಾಣಾಗುತ್ತಿದ್ದಾರೆ. ಇಬ್ಬನಿ, ಮಂಜಿನ ಜೊತೆ ದೂಳು, ಹೊಗೆ ಸೇರಿಕೊಳ್ಳುತ್ತಿದ್ದು, ಅದನ್ನು ಸೇವಿಸುತ್ತಿರುವ ಜನರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಜೋಗಿಮಟ್ಟಿ ರಸ್ತೆಯ ಅಗಳು ಪ್ರದೇಶದಲ್ಲಿ ಸುಣ್ಣದ ಗುಮ್ಮಿಗಳಿಗೆ ಸುಣ್ಣಗಾರರು ಬೆಂಕಿ ಹಚ್ಚಿದ್ದು, ಸುತ್ತಮುತ್ತ 1 ಕಿ.ಮೀವರೆಗೂ ಹೊಗೆ, ದೂಳು ಚಾಚಿಕೊಳ್ಳುತ್ತಿದೆ. ಪ್ರತಿದಿನ ಸಂಜೆ 5ರ ಹೊತ್ತಿಗೆ ಬೆಂಕಿ ಹಚ್ಚುತ್ತಿದ್ದು, ರಾತ್ರಿಯಿಡೀ ಆವರಿಸಿಕೊಳ್ಳುತ್ತಿದೆ. ಹೀಗಾಗಿ ಜನರ ಉಸಿರಾಟಕ್ಕೆ ತೊಂದರೆಯುಂಟಾಗಿದೆ.

ಡಿಸೆಂಬರ್‌ ಬಂತೆಂದರೆ ಜೋಗಿಮಟ್ಟಿ ರಸ್ತೆ, ವಿವೇಕಾನಂದ ನಗರ, ಪ್ರಶಾಂತ್‌ ನಗರ ಮುಂತಾದ ಬಡಾವಣೆಗಳ ಜನರು ಸುಣ್ಣದ ಗುಮ್ಮಿಗಳಿಂದ ಊರು ಬಿಡುವ ಸ್ಥಿತಿಯೇ ಬಂದಿದೆ. ಆಸ್ತಮಾದಿಂದ ಬಳಲುವ ಜನರು ಈ ಅವಧಿಯಲ್ಲಿ ಕಷ್ಟದಾಯಕ ಬದುಕು ಸಾಗಿಸುತ್ತಾರೆ. ಜನವರಿ, ಫೆಬ್ರುವರಿಯವರೆಗೂ ಈ ಸಮಸ್ಯೆ ಮುಂದುವರಿಯಲಿದ್ದು, ಮಕ್ಕಳೂ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ADVERTISEMENT

ಈ ಭಾಗದ ಜನರು ಸುಣ್ಣದ ಗುಮ್ಮಿಗಳಿಂದ ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿರುವುದು ಇಂದು, ನಿನ್ನೆಯಿಂದಲ್ಲ. ಹಲವು ವರ್ಷಗಳಿಂದಲೂ ಜನರು ಈ ಸಮಸ್ಯೆ ಅನುಭವಿಸುತ್ತಿದ್ದು, ಅದಕ್ಕೆ ಪರಿಹಾರವೇ ಇಲ್ಲದಂತಾಗಿದೆ. ಸುಣ್ಣದ ಗುಮ್ಮಿಗಳನ್ನು ತೆರವುಗೊಳಿಸಿ ಸುಣ್ಣಗಾರರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಜನರ ಕೂಗು ಇಲ್ಲಿಯವರೆಗೂ ಜಿಲ್ಲಾಡಳಿತದ ಕಿವಿಗೆ ಬಿದ್ದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ದೂಳಿನಿಂದ ಗಿಡ–ಮರಗಳ ಎಲೆಗಳು ಕೂಡ ಬಾಡಿ ಬಣ್ಣಗೆಟ್ಟಿವೆ. ಮನೆಯ ಹೆಂಚುಗಳಲ್ಲಿ, ಗುಡಿಸಲುಗಳ ಗರಿಯ ಮೇಲೆ ದೂಳು ಕುಳಿತಿರುವುದು ಕಣ್ಣಿಗೆ ಕಾಣುತ್ತದೆ. ಸಂಜೆಯಾದರೆ ಅಕ್ಕಪಕ್ಕದ ಬಡಾವಣೆಗಳ ಜನರು ತಮ್ಮ ಮನೆಗಳ ಕಿಟಕಿ, ಬಾಗಿಲುಗಳನ್ನು ಬಿಗಿಯಾಗಿ ಬಂದ್‌ ಮಾಡಿಕೊಳ್ಳುತ್ತಾರೆ. ಸಣ್ಣ ಕಿಂಡಿಯೂ ಇರದಂತೆ ಮುಚ್ಚುತ್ತಾರೆ. ವಿಷಕಾರಿ ಹೊಗೆ ಪ್ರವೇಶಿಸದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ.

ಸಂಜೆಯ ವೇಳೆ ದಾರಿ ಕಾಣಿಸದ ರೀತಿಯಲ್ಲಿ ದೂಳು, ಹೊಗೆ ಆವರಿಸಿಕೊಳ್ಳುತ್ತಿದೆ. ದಾರಿ ಕಾಣದೆ ರಾತ್ರಿಯಲ್ಲಿ ಓಡಾಡುವ ವಾಹನಗಳು ಡಿಕ್ಕಿಯಾದ ಘಟನೆಗಳೂ ಇವೆ. ರಾತ್ರಿ ಮುಗಿದು ಬೆಳಗಾಗುವವರೆಗೂ ದೂಳು, ಹೊಗೆ ಪರಿಸರದಲ್ಲೇ ಇರುತ್ತದೆ. ಬೆಳಿಗ್ಗೆ ಜನರು ಹೊರಗೆ ಬಂದರೂ ಅದರ ಪರಿಣಾಮ ಎದುರಿಸುತ್ತಾರೆ. ಶ್ವಾಸಕೋಶದ ಸಮಸ್ಯೆಗಳಿಂದ ಬಳಲುತ್ತಾರೆ.

‘15 ದಿನಗಳಿಂದ ಗುಮ್ಮಿಗಳಿಗೆ ಬೆಂಕಿ ಹಚ್ಚುತ್ತಿದ್ದು, ಈಗಾಗಲೇ ವೃದ್ಧರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಒಂದು ನಿಮಿಷ ಹೊರಗೆ ನಿಂತರೂ ಕಣ್ಣು, ಮೂಗಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಈ ಗುಮ್ಮಿಗಳಿಂದ ಮುಕ್ತ ಕೊಡಿಸಿ ಎಂದು ಕೇಳುತ್ತಿದ್ದರೂ ನಮ್ಮ ಸಂಕಷ್ಟ ಆಲಿಸುವವರು ಯಾರೂ ಇಲ್ಲವಾಗಿದ್ದಾರೆ’ ಎಂದು ಜೋಗಿಮಟ್ಟಿ ರಸ್ತೆಯ ನಿವಾಸಿ ಶಂಕರಪ್ಪ ಬೇಸರ ವ್ಯಕ್ತಪಡಿಸಿದರು.

ಸುಣ್ಣ ಮಾರಾಟವೇ ಇವರ ಕಾಯಕ:

ನಗರದಲ್ಲಿ 35ಕ್ಕೂ ಹೆಚ್ಚು ಸುಣ್ಣದ ಗುಮ್ಮಿಗಳಿವೆ. ಇದನ್ನೇ ನಂಬಿ 60 ವರ್ಷಗಳಿಂದ ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಡಿಸೆಂಬರ್ ಆರಂಭವಾದ ಕೂಡಲೇ ಸ್ಥಳೀಯರ ವಿರೋಧದ ನಡುವೆಯೂ ಇವರು ಸುಣ್ಣ ಸುಡುವ ಕೆಲಸ ಮಾಡುತ್ತಾರೆ. 

‘ಹೊಸದಾಗಿ ನೋಡುವವರಿಗೆ ಇದು ಇಬ್ಬನಿ, ಮಂಜು ಇರಬೇಕು ಇರಬೇಕು ಎಂದು ಭಾಸವಾಗುತ್ತದೆ. ಆದರೆ ಕಣ್ಣು, ಮೂಗಿನಲ್ಲಿ ಉರಿ ಕಿತ್ತುಕೊಳ್ಳುತ್ತಿದ್ದಂತೆ ಇದು ಯಾವುದೋ ವಿಷಕಾರಿ ಹೊಗೆ ಇರಬೇಕು ಎಂಬ ಅನುಮಾನ ಬರುತ್ತದೆ. ಸುಣ್ಣದ ಹೊಗೆಯಲ್ಲಿ ಯಾವುದೇ ವಾಸನೆ ಇಲ್ಲ. ಹೀಗಾಗಿ ಆರಂಭದಲ್ಲಿ ಗೊತ್ತಾಗುವುದಿಲ್ಲ. ಈ ಹೊಗೆಯಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದೇ ಒಂದು ಸವಾಲಾಗಿದೆ’ ಎಂದು ಅಲ್ಲಿಯ ನಿವಾಸಿಯೊಬ್ಬರು ತಿಳಿಸಿದರು.

‘ನಮಗೆ ಪರ್ಯಾಯ ಜಾಗ ಕೊಟ್ಟರೆ ಈಗಲೂ ನಾವು ಗುಮ್ಮಿಗಳನ್ನು ಸ್ಥಳಾಂತರ ಮಾಡುತ್ತೇವೆ. ನಮಗೆ ಬೇರೆ ಉದ್ಯೋಗ ಗೊತ್ತಿಲ್ಲ, ಹೀಗಾಗಿ  ಸುಣ್ಣ ಮಾರಾಟ ಮಾಡಿಯೇ ಬದುಕಬೇಕು’ ಎಂದು ಸುಣ್ಣಗಾರರು ಹೇಳಿದರು.

ಸಂಜೆಯಾಗುತ್ತಿದ್ದಂತೆ ಜೋಗಿಮಟ್ಟಿ ರಸ್ತೆಯಲ್ಲಿ ದೂಳು ಹೊಗೆ ಆವರಿಸಿಕೊಂಡಿರುವುದು
ಸುಣ್ಣದಲ್ಲಿ ಅಲ್ಯು‌ಮಿನಿಯಂ ಆಕ್ಸೈಡ್‌ ಹೆಚ್ಚಾಗಿದೆ. ಹೀಗಾಗಿ ಶ್ವಾಸನಾಳಕ್ಕೆ ತೊಂದರೆಯಾಗುತ್ತದೆ. ಇದು ಕಿಡ್ನಿಯ ಕಾರ್ಯಕ್ಷಮತೆಯನ್ನೂ ಹಾಳುಗೆಡವುತ್ತದೆ. ದೃಷ್ಟಿದೋಷವೂ ಕಾಡುತ್ತದೆ
ಡಾ.ಸುರೇಶ್‌ ಶ್ವಾಸಕೋಶ ತಜ್ಞ
ಸುಣ್ಣದ ಗುಮ್ಮಿಗಳಿಂದ ಆಗುತ್ತಿರುವ ತೊಂದರೆಯನ್ನು ಪರಿಶೀಲಿಸುತ್ತೇನೆ. ಗುಮ್ಮಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ
ಸ್ಮಾರಕಗಳ ರಕ್ಷಣೆಗೆ ಬೇಕು ಸುಣ್ಣ
ಎಲೆ–ಅಡಿಕೆ ತಾಂಬೂಲ ಮೆಲ್ಲುವವರು ಹಳೆಯ ಮನೆಗಳ ಗೋಡೆಗಳಿಗೆ ಕೋಟೆ ದೇವಸ್ಥಾನಗಳ ಗೋಡೆಗಳಿಗೆ ಹಬ್ಬ– ಹರಿದಿನಗಳಲ್ಲಿ ಸುಣ್ಣ ಬಳಿಯುವುದು ವಾಡಿಕೆ. ಹೀಗಾಗಿ ಸುಣ್ಣಕ್ಕೆ ಬೇಡಿಕೆ ಇದೆ. ನಗರದ ಸುಣ್ಣಗಾರರು ಇಲ್ಲಿನ ಗುಮ್ಮಿಗಳಿಂದ ಕೋಲಾರ ಬಳ್ಳಾರಿ ಹಂಪಿ ತುಮಕೂರು ದಾವಣಗೆರೆ ಮತ್ತಿತರ ಜಿಲ್ಲೆಗಳಿಗೆ ಸುಣ್ಣ ಕಳುಹಿಸುತ್ತಾರೆ. ಗೋವಾದ ಪುರಾತನ ಚರ್ಚ್‌ಗಳಿಗೂ ಇಲ್ಲಿಂದ ಸುಣ್ಣ ರವಾನೆಯಾಗುತ್ತದೆ. ‘ಕ್ಯಾದಿಗೆರೆ ಬುರುಜನರೊಪ್ಪ ಪಾಲವ್ವನಹಳ್ಳಿ ಗೌಡಗೆರೆ ನೆಲಗೇತನಹಟ್ಟಿ ಕಡೆಗಳಿಂದ ಸುಣ್ಣದ ಕಲ್ಲು ತರಿಸುತ್ತೇವೆ. 4 ಟನ್‌ನ ಒಂದು ಲೋಡು ಸುಣ್ಣದ ಕಲ್ಲು ತಂದರೆ 2 ಟನ್‌ ಸುಣ್ಣ ಬರುತ್ತದೆ’ ಎಂದು ಸಣ್ಣಗಾರರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.