ADVERTISEMENT

ಚಿತ್ರದುರ್ಗ | ನಾವು ಲಿಂಗಾಯತರು ಎಂದು ತಲೆ ಎತ್ತಿ ಹೇಳಿ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:09 IST
Last Updated 29 ಸೆಪ್ಟೆಂಬರ್ 2025, 6:09 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಭಾನುವಾರ ವಚನ ಝೇಂಕಾರ ಸಂಭ್ರಮ
ಚಿತ್ರದುರ್ಗದ ಮುರುಘಾ ಮಠದಲ್ಲಿ ಭಾನುವಾರ ವಚನ ಝೇಂಕಾರ ಸಂಭ್ರಮ   

ಚಿತ್ರದುರ್ಗ: ‘ಜೈನ, ಬೌದ್ಧ, ಕ್ರೈಸ್ತ ಸೇರಿದಂತೆ ಮೊದಲಾದ ಧರ್ಮಗಳ ಇದ್ದ ಹಾಗೇ ಬಸವ ಧರ್ಮವೂ ಇದೆ. ಆದರೆ ನಾವು ಪ್ರಾದೇಶಿಕವಾಗಿ ಹಿಂದೂಗಳಾಗಿದ್ದೇವೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಚನ ಝೇಂಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಬ್ಬ ವ್ಯಕ್ತಿ ಧರ್ಮದ ಮಾರ್ಗದಲ್ಲಿ ನಡೆಯಬೇಕಾದರೆ ಅವನು ದಯಾವಂತನಾಗಿರಬೇಕು. ಪ್ರೀತಿ, ಕರುಣೆ, ಅನುಕಂಪ ಇದ್ದರೆ ಮಾತ್ರ ಧೈರ್ಯವಂತ ಮನುಷ್ಯನಾಗಲು ಸಾಧ್ಯ’ ಎಂದರು.

‘ಬಸವನ್ಣನವರು ನಮಗೆ ಲಿಂಗಾಯತ ಧರ್ಮವನ್ನು ಕೊಟ್ಟವರು. ನಮ್ಮ ಕಲುಷಿತ ಭಾವನೆಗಳನ್ನು ದೂರ ತಳ್ಳಿ ತಲೆ ಎತ್ತಿ ನಾವು ಲಿಂಗವಂತರು, ಲಿಂಗಾಯತರು ಎಂದು ಹೇಳಬೇಕು. ಆದರೆ ಅದರ ಆಚರಣೆಯಲ್ಲಿ ನಾವು ಹಿಂದೆ ಇದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಈ ಹಿಂದೆ ಅನೇಕ ಮಠಾಧೀಶರು, ಬಸವಭಕ್ತರು, ಮುಖ್ಯಮಂತ್ರಿಗಳು ಎಲ್ಲರೂ ಒಟ್ಟಿಗೆ ಚರ್ಚಿಸಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷ ಕಳೆಯಿತು. ಅದರ ನೆನಪಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.1ರಂದು ಬಸವ ಸಂಸ್ಕೃತಿ ಅಭಿಯಾನ ಪ್ರಾರಂಭಿಸಲಾಯಿತು’ ಎಂದರು.

‘ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಜನಮನದಲ್ಲಿ ತುಂಬುವ ಕಾರ್ಯ ಮಾಡುವ ದೃಷ್ಟಿಯಿಂದ ಅಭಿಯಾನ ನಡೆಸಲಾಗುತ್ತಿದೆ. ನಾಡಿನ ಪ್ರಗತಿ ಮುಂತಾದ ವಿಚಾರಗಳಲ್ಲಿ ಮುಕ್ತವಾದ ಪ್ರಶ್ನೆಗಳನ್ನು ಕೇಳಿ ಅವುಗಳಿಗೆ ಉತ್ತರವನ್ನು ಪಡೆಯಬಹುದಾಗಿದೆ. ನಮ್ಮ ಪಟ್ಟಾಭಿಷೇಕದ ಸಂದರ್ಭದಲ್ಲಿ ಸಿರಿಗೆರೆಯ ಶಿವಕುಮಾರ ಸ್ವಾಮೀಜಿ ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿ ಒಂದಾದರು’ ಎಂದು ಸ್ಮರಿಸಿದರು.

‘ಹಿಮಾಲಯ ಪರ್ವತ ಇಲ್ಲದ ಭಾರತ ಕಲ್ಪನೆ ಮಾಡಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ, ಹಾಗೆ ಬಸವ ಸಂಸ್ಕೃತಿ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಇಂದು ನೂರಾರು ಸ್ವಾಮೀಜಿಗಳು ಇಲ್ಲಿ ಭಾಗವಹಿಸಿದ್ದಾರೆ. ಚಿತ್ರದುರ್ಗದಲ್ಲಿ ಬಸವಣ್ಣನವರಿಗೆ ಸಿಕ್ಕ ಗೌರವ ಅತ್ಯಂತ ದೊಡ್ಡದು’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

‘ಜಗತ್ತಿನಲ್ಲಿ ಬಹಳಷ್ಟು ಜನ ಸಂಶೋಧಕರು, ದಾರ್ಶನಿಕರು ಇದ್ದಾರೆ. ಕೆಲವೊಂದು ಆವಿಷ್ಕಾರಗಳು ಆಯಾ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಬಸವಣ್ಣನವರ ತತ್ವ ಸಿದ್ಧಾಂತ ಎಂದೆಂದಿಗೂ ಪ್ರಸ್ತುತ. ಬಸವ ಧರ್ಮ ಮತ್ತೊಮ್ಮೆ ಮೇಲೆದ್ದು ಬರುತ್ತಿದೆ. ಕೇವಲ ಅದರ ವಿಜೃಂಭಣೆ ಮಾಡಿದರೆ ಸಾಲದು, ಬಸವಣ್ಣನವರ ತತ್ವ ಸಿದ್ಧಾಂತಗಳು ಎಲ್ಲರ ಮನೆ-ಮನಗಳಲ್ಲಿ ಬೆಳೆಸಬೇಕು’ ಎಂದರು.

‘ಮುಂದಿನ ದಿನಗಳಲ್ಲಿ ಬಸವಣ್ಣನ ಅನುಯಾಯಿಗಳು ಏನು ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ. ಕರ್ನಾಟಕದಲ್ಲಿ ಶೂನ್ಯ ಪೀಠದ ಪರಂಪರೆ ಮುರುಘಾ ಮಠಕ್ಕೆ ಮಾತ್ರ ಇದೆ. ಈ ಪೀಠದಲ್ಲಿ ಬಂದ ಅನೇಕ ಸ್ವಾಮೀಜಿಗಳು ವಿದ್ಯೆ, ಅನ್ನ, ವಸತಿ ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದವರಾಗಿದ್ದಾರೆ. ಸಾವಿರಾರು ನಾಯಕರನ್ನು ಉದ್ಧಾರ ಮಾಡಿದ್ದು ಮುರುಘಾಮಠ’ ಎಂದು ನುಡಿದರು.

ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಎರೆಹೊಸಹಳ್ಳಿ ಯೋಗಿ ವೇಮನ ಗುರುಪೀಠದ ವೇಮನಾನಂದ ಸ್ವಾಮೀಜಿ, ತಲಸಂಗದ ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವ ಪ್ರಭುಸ್ವಾಮೀಜಿ, ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಅಂಬಿಗರ ಚೌಡಯ್ಯ ಸ್ವಾಮೀಜಿ, ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಕಬೀರನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಇದ್ದರು.

ವಚನ ಝೇಂಕಾರ ಸಂಭ್ರಮದಲ್ಲಿ ಭಾಗವಹಿಸಿದ್ದ ಭಕ್ತರು

ಚಿತ್ರದುರ್ಗದಲ್ಲಿ ಭಾನುವಾರ ಸಾಗಿದ ಬಸವ ಸಂಸ್ಕೃತಿ ಅಭಿಯಾನದ ಪಾದಯಾತ್ರೆ

ಮುರುಘಾ ಮಠದಲ್ಲಿ ನಡೆದ ಸಹಜ ಶಿವಯೋಗದಲ್ಲಿ ವಚನಾನಂದ ಸ್ವಾಮೀಜಿ ಶಿವಯೋಗದ ಪ್ರಾತ್ಯಕ್ಷಿಕೆ ತೋರಿದರು
ಮನಸ್ಸು ಶುದ್ದವಾಗುವ ಜತೆಗೆ ಇಷ್ಟಲಿಂಗ ಪ್ರಾಣಲಿಂಗವಾಗಬೇಕಾದರೆ ಲಿಂಗಪೂಜೆ ಮಾಡಬೇಕು. ನಾಡಿಮಿಡಿತ ಮನಸ್ಸು ಸದಾ ಶುದ್ದವಾಗಿರಬೇಕು. ನಾಡಿ ಜಾಗೃತವಾಗಬೇಕಾದರೆ ಶ್ವಾಸ ಶುದ್ಧವಾಗಿರಬೇಕು.
ವಚನಾನಂದ ಸ್ವಾಮೀಜಿ ಹರಿಹರ ಪಂಚಮಸಾಲಿ ಗುರುಪೀಠ
ವಚನ ಗಾನಸುಧೆ
ಮುರುಘಾ ಮಠದ ಅನುಭವ ಮಂಟಪದ ವೇದಿಕೆಯಲ್ಲಿ ಏಕಕಾಲಕ್ಕೆ ಬಸವಭಕ್ತರಿಂದ ವಚನ ಗಾನಸುಧೆ ಹರಿಯಿತು. ತೋಟಪ್ಪ ಉತ್ತಂಗಿ ಸುಜಿತ್ ಕುಲಕರ್ಣಿ ಹಾಗೂ ಉಮೇಶ್ ಪತ್ತಾರ್‌ ಸಂಗೀತ ಸಂಯೋಜನೆಯಲ್ಲಿ ಸಾಲು ಸಾಲು ವಚನಗಳನ್ನು ಭಕ್ತರು ಹಾಡಿದರು. 12ನೇ ಶತಮಾನದ ವಚನಕಾರರ ವಚನಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸಾವಿರಾರು ಮಹಿಳೆಯರು ಸಾಹಿತಿಗಳು ವಾಣಿಜ್ಯೋದ್ಯಮಿಗಳು ವಿದ್ಯಾರ್ಥಿಗಳು ವಿವಿಧ ಶಾಲಾ ಕಾಲೇಜುಗಳ ಸಿಬ್ಬಂದಿ ಧ್ವನಿಯಾದರು.
‘ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸಿ’
ನಮ್ಮದು ಲಿಂಗಾಯತ ಧರ್ಮ. ಆದ್ದರಿಂದ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಜಾತಿ ಕಾಲಂನಲ್ಲಿ ನಿಮ್ಮ ಜಾತಿ ಬರೆಸಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು. ಮಠದಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್‌ ಅವರ ‘ನಾವು ಹಿಂದೂ ಎಂದು ಏಕೆ ಬರೆಯಿಸಬಾರದು ಒಕ್ಕಲಿಗರು ಕುರುಬರು ಹಿಂದೂ ಎಂದು ಬರೆಸುತ್ತಾರೆ. ಇದೊಂದು ಜಾತಿ ಒಡೆಯುವ ಹುನ್ನಾರವೇ?’ ಎಂಬ ಪ್ರಶ್ನೆಗೆ ಉತ್ತರಿಸಿ ಈ ವಿಚಾರದಲ್ಲಿ ಗೊಂದಲ ಬೇಡ. ನಮ್ಮ ಧರ್ಮ ಲಿಂಗಾಯತ’ ಎಂದರು. ‘ಪಂಚಮಸಾಲಿಗಳು ಧಾರ್ಮಿಕವಾಗಿ ಹಿಂದೂಗಳೇ ಅಥವಾ ಲಿಂಗಾಯತರೇ?’ ಎಂಬ ಪ್ರಶ್ನೆಗೆ ‘ಲಿಂಗವುಳ್ಳವರು ಲಿಂಗಾಯತರು’ ಎಂದು ಉತ್ತರಿಸಿದರು. ‘ಬಸವ ಸಂಸ್ಕೃತಿ ಅಭಿಯಾನ ಹಾಗೂ ಉಳಿದ ಸಂಸ್ಕೃತಿಗೆ ವ್ಯತ್ಯಾಸವೇನು?’ ಎಂಬ ರಕ್ಷಿತಾ ವೀರಭದ್ರಪ್ಪರವರ ಪ್ರಶ್ನೆಗೆ ಬಸವಲಿಂಗ ಪಟ್ಟದ್ದೇವರು ಉತ್ತರಿಸಿ ‘ಬಸವ ಸಂಸ್ಕೃತಿ ಅಭಿಯಾನ ಇರುವುದು ಎಲ್ಲರನ್ನೂ ಒಗ್ಗೂಡಿಸುವುದು ಬಸವ ನಿಷ್ಠೆಯನ್ನು ಹುಟ್ಟಿಸುವುದು ದುರ್ನಡತೆ ದುರಹಂಕಾರವನ್ನು ಕಿತ್ತು ಹಾಕುವುದಕ್ಕೆ. ನಮ್ಮ ಆಚಾರವೇ ಬಸವ ಮಯವಾಗಬೇಕು’ ಎಂದರು. ‘ಲಿಂಗಾಯತ ಧರ್ಮ ಜಾತಿಗೆ ಸೀಮಿತವೇ? ಬಸವಧರ್ಮ ಎನ್ನಬಹುದೇ?’ ಎಂಬ ಗಂಗಾಧರ್‌ ಅವರ ಪ್ರಶ್ನೆಗೆ ಉತ್ತರಿಸಿ ‘ಬೌದ್ಧ ಕ್ರೈಸ್ತ ಧರ್ಮ ಹೇಗೋ ಹಾಗೆ ನಮ್ಮದು ಬಸವ ಧರ್ಮ. ಆದರೆ ಹೆಚ್ಚು ಪ್ರಚಲಿತ ಇರುವುದರಿಂದ ಲಿಂಗಾಯತ ಧರ್ಮ ಎಂದು ಹೇಳಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.