ADVERTISEMENT

ಸಾಹಿತ್ಯ ರಚನೆಗೆ ಎದುರಾಗಿದೆ ಸವಾಲು: ಜಿಲ್ಲಾಧಿಕಾರಿ ಕುಮಾರಸ್ವಾಮಿ ಆತಂಕ

ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:51 IST
Last Updated 28 ಜುಲೈ 2025, 6:51 IST
ಚಿತ್ರದುರ್ಗದ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟಿಸಿದರು
ಚಿತ್ರದುರ್ಗದ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟಿಸಿದರು   

ಚಿತ್ರದುರ್ಗ: ‘ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಬರಹಗಳ ಅಗತ್ಯತೆ ಹೆಚ್ಚಾಗಿದೆ. ಇದರಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು. 

ನಗರದ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮೊಬೈಲ್ ಯುಗದಲ್ಲಿ ಸಾಹಿತ್ಯವೆಂದರೆ ಮೂಗು ಮುರಿಯುವಂತಾಗಿದೆ. ಇಂತಹ ಕಾಲಘಟ್ಟದಲ್ಲಿ ಸಾಹಿತ್ಯ ರಚನೆಯು ಸವಾಲಾಗಿದೆ. ಬರೆಯುವವರು ತುಂಬಾ ಇದ್ದಾರೆ. ಆದರೆ ಓದುವವರು ವಿರಳವಾಗಿರುವುದರಿಂದ ಅಧ್ಯಯನ, ಸೃಜನಶೀಲತೆಯ ಕೊರತೆ ಕಾಣುತ್ತಿದೆ. ಸಾಹಿತ್ಯವು ಬದುಕು ಕಟ್ಟಿಕೊಡಬೇಕು. ಪ್ರತಿಯೊಬ್ಬರಲ್ಲಿಯೂ ಕವಿ ಹೃದಯವಿರುತ್ತದೆ. ಕವನಗಳು ಸಮಾಜಕ್ಕೆ ಸಂದೇಶ ಕೊಡುವಂತಿರಬೇಕು’ ಎಂದರು. 

ADVERTISEMENT

‘ಕವಿಗಳಿಗೆ ಸಮಕಾಲೀನ ಪ್ರಜ್ಞೆ ಅಗತ್ಯ. ಸಮಸ್ಯೆ ಬಗ್ಗೆ ಅರಿತು ಪರಿಣಾಮಕಾರಿಯಾಗಿ ಕಾವ್ಯ ಕಟ್ಟಬೇಕು. ಸಂವಿಧಾನದ ಆಶಯಗಳ ನೆಲೆಯಲ್ಲಿ ಕಾವ್ಯ ಕಟ್ಟಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಿದೆ’ ಎಂದು ಪ್ರಾಂಶುಪಾಲ ಕರಿಯಪ್ಪ ಮಾಳಿಗೆ ತಿಳಿಸಿದರು. 

‘ಸಹಬಾಳ್ವೆ, ಸೌಹಾರ್ಧತೆ, ಸಾಮರಸ್ಯ, ಮಾನವೀಯ ಮೌಲ್ಯಗಳ ಮೂಲಕ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಾಹಿತ್ಯ ರೂಪಿಸುವುದು ಬರಹಗಾರರ ಮೇಲಿರುವ ಬಹು ದೊಡ್ಡ ಜವಾಬ್ದಾರಿ. ಭಾಷೆ, ಪರಿಸರ, ಸಂಸ್ಕೃತಿ, ಬದುಕಿನ ಸ್ಥಿತ್ಯಂತರ ಆಧುನಿಕತೆ ಮೊದಲಾದ ವಿಷಯಗಳ ಜೊತೆ ವೈಚಾರಿಕ ಚಿಂತನೆ ಅತಿ ಮುಖ್ಯ’ ಎಂದು ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್‌, ಶರಣ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಂ.ವೀರೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.