ADVERTISEMENT

ಲವ್ ಜಿಹಾದ್‌ಗೆ ಪ್ರತ್ಯೇಕ ಕಾನೂನು ಅಗತ್ಯ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 4:14 IST
Last Updated 14 ಡಿಸೆಂಬರ್ 2022, 4:14 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ    

ಚಿತ್ರದುರ್ಗ: ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ರೂಪಿಸುವ ಹಾಗೂ ವಿಶೇಷ ಕಾರ್ಯಪಡೆ ರಚಿಸುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾನೂನು ರೂಪಿಸಲು ಸಂಘಪರಿವಾರದ ಸಂಘಟನೆಗಳು ಮನವಿ ಮಾಡಿವೆ. ರಾಜ್ಯದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯಲ್ಲಿ ಈ ಅಂಶ ಅಡಕವಾಗಿದೆ. ಹೀಗಾಗಿ, ಪ್ರತ್ಯೇಕ ಕಾನೂನು ರೂಪಿಸುವ ಅನಿವಾರ್ಯತೆ ಸದ್ಯ ಇಲ್ಲ. ಆದರೂ ಪರಿಶೀಲನೆ ಮಾಡಲಾಗುವುದು' ಎಂದರು.

'ಇಷ್ಟವಾದ ಧರ್ಮ ಅನುಸರಿಸಲು ಸಂವಿಧಾನದಲ್ಲಿ ಅವಾಕಶವಿದೆ. ಮತ್ತೊಂದು ಧರ್ಮ ಅನುಸರಿಸುವ ಮುನ್ನ ಅರ್ಜಿ ಸಲ್ಲಿಸಬೇಕು. ಆಮಿಷವೇ ಅಥವಾ ಬಲವಂತದ ಮತಾಂತರವೇ ಎಂಬುದನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು. ಆದರೆ, ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆ ಆಮಿಷದ ಮತಾಂತರ ಅವ್ಯಾಹತವಾಗಿ ನಡೆಯುತ್ತಿದೆ. ಮಠಾಧೀಶರ ಕೋರಿಕೆ ಮೇರೆಗೆ ಕಾನೂನು ರೂಪಿಸಲಾಗಿದೆ. ಮತಾಂತರಕ್ಕೆ ಸಂಬಂಧಿಸಿದಂತೆ ರಕ್ತ ಸಂಬಂಧಿಗಳು ದೂರು ನೀಡಬೇಕು' ಎಂದು ಹೇಳಿದರು.

ADVERTISEMENT

ಗಡಿ ವಿವಾದ: ದೆಹಲಿಯಲ್ಲಿ ಸಭೆ

ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿಚಾರವಾಗಿ ಚರ್ಚಿಸಲು ಬುಧವಾರ ದೆಹಲಿಗೆ ತೆರಳುತ್ತಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

'ಗಡಿ ಹಾಗೂ ಗೃಹ ಇಲಾಖೆಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ಚರ್ಚೆ ಮಾಡಲು ಆಹ್ವಾನ ಬಂದಿದೆ. ದೆಹಲಿ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ರಾಜಕೀಯ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ನ 60 ವರ್ಷದ ಆಡಳಿತ ಸಾಕು ಎಂಬುದು ಜನರ ಅಭಿಪ್ರಾಯ. ಹೀಗಾಗಿ, ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಅಥವಾ ತಿರುಪತಿ ಯಾತ್ರೆ ಮಾಡಲಿ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಕಾಂಗ್ರೆಸ್ ಸೋಲಿಸಲು ಜನ ನಿಶ್ಚಯಿಸಿದ್ದಾರೆ.
ಆರಗ ಜ್ಞಾನೇಂದ್ರ,ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.