ADVERTISEMENT

ಮಠ ಜೋಪಾನಕ್ಕೆ ಸಚಿವರ ಸಲಹೆ

ಸಚಿವ ನಿಯೋಗ ಅಭಿನಂದಿಸಿದ ಮಠಾಧೀಶರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 14:45 IST
Last Updated 11 ಸೆಪ್ಟೆಂಬರ್ 2019, 14:45 IST
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ದಲಿತ ಮತ್ತು ಹಿಂದುಳಿದ ಮಠಾಧೀಶರು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿದರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ದಲಿತ ಮತ್ತು ಹಿಂದುಳಿದ ಮಠಾಧೀಶರು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿದರು.   

ಚಿತ್ರದುರ್ಗ: ಮನೆ ಕಳೆದುಕೊಂಡಾಗ ಮಠ ಆಶ್ರಯ ನೀಡುತ್ತದೆ. ಹೀಗಾಗಿ, ಮಠಗಳನ್ನು ಜೋಪಾನ ಮಾಡುವ ಅಗತ್ಯವಿದೆ ಎಂದು ಸಂಸಧೀಯ ವ್ಯವಹಾರ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದರು.

ದಲಿತ ಮತ್ತು ಹಿಂದುಳಿದ ಮಠಾಧೀಶರ ಒಕ್ಕೂಟ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ರಾಜ್ಯದ ಅಭಿವೃದ್ಧಿಯಲ್ಲಿ ಮಠಗಳ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ. ಕಲಬುರ್ಗಿಯಿಂದ ಹರಿಹರದವರೆಗೆ ಹಬ್ಬಿದ ಶರಣ ಸಂಸ್ಕೃತಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಶಾಲೆ, ಕಾಲೇಜುಗಳನ್ನು ಸ್ಥಾಪಿಸಿದ ಮಠಗಳು, ಜನರಿಗೆ ಶಿಕ್ಷಣ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಸರ್ಕಾರ ಮಾಡದೇ ಇರುವ ಕೆಲಸವನ್ನು ಮಠಗಳು ಮಾಡಿವೆ. ಬಿಜೆಪಿ ಸರ್ಕಾರ ಮಠ ಪರಂಪರೆಯನ್ನು ಬೆಂಬಲಿಸುತ್ತದೆ. ಮಠಕ್ಕೆ ನೀಡುವ ಅನುದಾನ ಸದ್ಬಳಕೆಯಾಗಿ ಸಮಾಜಕ್ಕೆ ವಿನಿಯೋಗವಾಗುತ್ತದೆ. ಸಮಾಜಕ್ಕೆ ಒಳಿತು ಮಾಡುವ ಮಠಾಧೀಶರೊಂದಿಗೆ ಬಿಜೆಪಿ ಸದಾ ಬೆಂಬಲವಾಗಿ ನಿಲ್ಲುತ್ತದೆ’ ಎಂದು ಹೇಳಿದರು.

ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ‘ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರ (ಅಹಿಂದ) ಉದ್ದಾರದ ಮಾತುಗಳನ್ನು ಕೇಳಿ ಸಾಕಾಗಿದೆ. ಎಲ್ಲ ಸಮುದಾಯ ಅಭಿವೃದ್ಧಿ ಹೊಂದಬೇಕು ಎಂಬುದು ಬಿಜೆಪಿ ಆಶಯ. ಸಮಾಜದ ಏಳಿಗೆಗೆ ಒಗ್ಗೂಡಿ ಶ್ರಮಿಸೋಣ’ ಎಂದು ಕರೆ ನೀಡಿದರು.

‘ಮಠಗಳಿಗೆ ನೀಡುವ ಅನುದಾನವನ್ನು ಮಠಾಧೀಶರು ವೈಯಕ್ತಿವಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ದೇಗುಲ ನಿರ್ಮಾಣ ಮಾಡುವುದಿರಂದ ಅಧ್ಯಾತ್ಮದತ್ತ ಜನರು ಆಕರ್ಷಿತರಾಗುತ್ತಾರೆ. ಹಾಸ್ಟೆಲ್‌ ನಿರ್ಮಾಣ, ಶಿಕ್ಷಣ ಸಂಸ್ಥೆಗೆ ಅನುದಾನ ಬಳಕೆಯಾಗುತ್ತಿದೆ. ಮಠಗಳು ಮಾಡುವ ಜನೋಪಯೋಗಿ ಕಾರ್ಯಕ್ಕೆ ಸರ್ಕಾರದ ಸಹಕಾರವಿದೆ’ ಎಂದರು.

‘ಬಿಜೆಪಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ದಲಿತ ಮತ್ತು ಹಿಂದುಳಿದ ಮಠಾಧೀಶರಿಗೆ ಮಾತ್ರ ಅನುದಾನ ಕೊಡಿ ಎಂದು ಒಕ್ಕೂಟ ಕೇಳಿರಲಿಲ್ಲ. ಒಕ್ಕೂಟ ಮಾಡಿದ ಪಟ್ಟಿಯಲ್ಲಿ ಮೇಲ್ಜಾತಿಯ ಮಠಗಳು ಸೇರಿದ್ದವು. ಸ್ವಾಮೀಜಿಗಳು ದೇವರ ರೂಪದಲ್ಲಿ ಇದ್ದಾರೆ. ಮಠಾಧೀಶರು ಒಗ್ಗೂಡಿದರೆ ಹಿಂದೂ ಸಮಾಜವೂ ಒಂದಾಗುತ್ತದೆ’ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ‘ಅಸ್ಪೃಶ್ಯರಿಗೆ ದೇಗುಲ ಹಾಗೂ ಮಠಗಳಿಗೆ ಪ್ರವೇಶ ಇರಲಿಲ್ಲ. ಇದನ್ನು ತೊಡೆದು ಹಾಕುವ ಉದ್ದೇಶದಿಂದ ಬಸವಣ್ಣ 12ನೇ ಶತಮಾನದಲ್ಲಿ ಚಳವಳಿ ರೂಪಿಸಿದರು. ಆದರೂ, ಮನಸ್ಥಿತಿಗಳು ಬದಲಾಗಿಲ್ಲ. ಸಮಾಜದಲ್ಲಿ ಈಗಲೂ ತಾರತಮ್ಯವಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ತಿಂಗಳಷ್ಟೇ ಕಳೆದಿದೆ. ಸರ್ವರ ಅಭಿವೃದ್ಧಿಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲಾಗುತ್ತದೆ. ರಾಜ್ಯದ ಅಭಿವೃದ್ಧಿಗೆ ಸರ್ಕಾರ ಮುನ್ನುಡಿ ಬರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ’ ಎಂದು ಹೇಳಿದರು.

ಸಂಸದರಾದ ಜಿ.ಎಂ.ಸಿದ್ದೇಶ್ವರ, ಎ.ನಾರಾಯಣಸ್ವಾಮಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ಮಾಯಕೊಂಡ ಶಾಸಕ ಲಿಂಗಣ್ಣ, ಜಗಳೂರು ಶಾಸಕ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.