ಹೊಳಲ್ಕೆರೆ: ತಾಲ್ಲೂಕಿನಾದ್ಯಂತ 800 ಎಕರೆ ಪ್ರದೇಶದಲ್ಲಿ ಮಾವಿನ ಬೆಳೆ ಇದ್ದು, ಈ ಬಾರಿ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ.
ಎಲ್ಲೆಡೆ ಮಾವಿನ ಮರಗಳ ತುಂಬಾ ಹೂ ಬಿಟ್ಟಿದ್ದು, ಗೋಲಿ ಗಾತ್ರದ ಮಿಡಿಗಾಯಿಗಳಾಗಿವೆ. ಕಳೆದ ಎರಡು ಮೂರು ವರ್ಷಗಳಿಂದ ಉತ್ತಮ ಇಳುವರಿ ಇಲ್ಲದೆ ಪರಿತಪಿಸಿದ್ದ ಮಾವು ಬೆಳೆಗಾರರಲ್ಲಿ ಈ ವರ್ಷ ಮಂದಹಾಸ ಮೂಡಿದೆ.
‘ಜನವರಿ ತಿಂಗಳಲ್ಲೇ ಹೂ ಬಿಡಲು ಆರಂಭವಾಗಿದ್ದು, ಈಗ ಕಾಯಿ ಕಟ್ಟುತ್ತಿರುವುದರಿಂದ ಮಾವು ಬೇಗ ಕಟಾವಿಗೆ ಬರುವ ನಿರೀಕ್ಷೆ ಇದೆ. ಮಾರ್ಚ್‌ನಲ್ಲಿ ಮಾವು ಕಟಾವಿಗೆ ಬಂದರೆ ರೈತರಿಗೆ ಹೆಚ್ಚು ಬೆಲೆ ಸಿಗುತ್ತದೆ. ಮಹಾರಾಷ್ಟ್ರದ ರತ್ನಗಿರಿ ಮಾವು ಬೇಗ ಮಾರುಕಟ್ಟೆಗೆ ಬರಲಿದ್ದು, ಅದೇ ಸಮಯಕ್ಕೆ ನಮ್ಮಲ್ಲಿ ಮಾವು ಕೈಗೆಟುಕಿದರೆ ಉತ್ತಮ ಬೆಲೆ ಸಿಗುತ್ತದೆ’ ಎಂಬುದು ರೈತರ ನಿರೀಕ್ಷೆಯಾಗಿದೆ.
‘ಮಾವಿನ ಮರಗಳಲ್ಲಿ ಬೇಗ ಹೂ, ಕಾಯಿ ಆಗಿರುವುದರಿಂದ ಮಾರ್ಚ್, ಏಪ್ರಿಲ್‌ನಲ್ಲಿ ಬೀಸುವ ಬಿರುಗಾಳಿ, ಅಡ್ಡ ಮಳೆ, ಆಲಿಕಲ್ಲು ಮಳೆಯಿಂದ ಯಾವುದೇ ತೊಂದರೆ ಇರುವುದಿಲ್ಲ. ತಾಲ್ಲೂಕಿನಲ್ಲಿ ಆಲ್ಫೋನ್ಸೋ (ಬಾದಾಮಿ) ತಳಿಯ ಮಾವು ಬೆಳೆಯಲಾಗಿದೆ. ಇದು ಮಾವಿನ ತಳಿಗಳಲ್ಲೇ ಶ್ರೇಷ್ಠವಾದುದಾಗಿದೆ. ಈ ತಳಿಯ ಮಾವು ಹೆಚ್ಚು ದಿನ ಬಾಳಿಕೆ ಬರುವುದಲ್ಲದೇ, ತುಂಬಾ ರುಚಿಕರವಾಗಿರುತ್ತದೆ. ಅಲ್ಲಲ್ಲಿ ತೋತಾಪುರಿ, ರಸಪುರಿ ತಳಿಯ ಒಂದಷ್ಟು ಮರಗಳಿವೆ’ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕುಮಾರ ನಾಯ್ಕ ಮಾಹಿತಿ ನಿಡಿದರು.
‘10 ಎಕರೆಯಲ್ಲಿ ಬಾದಾಮಿ ತಳಿಯ ಮಾವು ಬೆಳೆದಿದ್ದೇನೆ. ಸುಮಾರು 400 ಮಾವಿನ ಮರಗಳಿವೆ. ಈ ವರ್ಷ ಉತ್ತಮ ರೀತಿಯಲ್ಲಿ ಹೂ ಕಟ್ಟಿದೆ. ಪ್ರತಿ ಮರದಲ್ಲಿ ಕನಿಷ್ಠ 60 ಕೆ.ಜಿ.ಯಿಂದ 1 ಕ್ವಿಂಟಲ್‌ವರೆಗೆ ಇಳುವರಿ ಸಿಗುವ ನಿರೀಕ್ಷೆ ಇದೆ. ಮೂರು, ನಾಲ್ಕು ವರ್ಷಗಳಿಂದ ಬೆಳೆ ಕೈ ಸೇರಿರಲಿಲ್ಲ. ಈ ವರ್ಷ ಉತ್ತಮ ಬೆಳೆ ಬರಬಹುದು’ ಎನ್ನುತ್ತಾರೆ ಸಮೀಪದ ಹಿರೇ ಎಮ್ಮಿಗನೂರು ಗ್ರಾಮದ ಮಾವು ಬೆಳೆಗಾರ ಕಲ್ಲಪ್ಪ.
ಮಾವು ಬೆಳೆಯುವುದು ಅಷ್ಟೇನೂ ಕಷ್ಟವಲ್ಲ. ಮಳೆಯಾಶ್ರಯದಲ್ಲೇ ಮಾವು ಬೆಳೆದಿದ್ದೇವೆ. ಮಳೆಗಾಲದಲ್ಲಿ ಒಂದು ಬಾರಿ ಜಿಪ್ಸಂ ಹಾಗೂ ಡಿಎಪಿ ಗೊಬ್ಬರ ಹಾಕಿದ್ದೆವು. ಜತೆಗೆ ಮಾಗಿ ಹೊಡೆಸಿದರೆ ಮುಗಿಯಿತುಕಲ್ಲಪ್ಪ ರೈತ ಹಿರೇ ಎಮ್ಮಿಗನೂರು
ಮಾವು ಹೂ ಕಾಯಿ ಕಟ್ಟುವಾಗ ರಸ ಹೀರುವ ಜಿಗಿ ಹುಳು ಬಾಧೆ ಕಾಣಿಸಿಕೊಳ್ಳುತ್ತದೆ. ರಕ್ಷಣೆಗಾಗಿ ಕೀಟನಾಶಕ ಸಿಂಪಡಿಸಬೇಕುಕುಮಾರ ನಾಯ್ಕ ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ
ಈ ಬಾರಿ ಮಾವಿನ ಉತ್ತಮ ಇಳುವರಿ ನಿರೀಕ್ಷಿಸಲಾಗಿದ್ದರೂ ರೈತರಿಗಿಂತ ಮಧ್ಯವರ್ತಿಗಳು ಹೆಚ್ಚು ಲಾಭ ಮಾಡಿಕೊಳ್ಳುವ ಅಪಾಯ ಇದೆ. ಮಾವಿನ ಕಟಾವು ಮಾಡಿ ಮಾರಾಟ ಮಾಡುವುದು ಕಷ್ಟ ಎಂದು ಹೆಚ್ಚಿನ ರೈತರು ವ್ಯಾಪಾರಿಗಳಿಗೆ ತೋಟವನ್ನೇ ಗುತ್ತಿಗೆ ಕೊಡುತ್ತಾರೆ. ವ್ಯಾಪಾರಿಗಳು ರೈತರಿಂದ ಕಡಿಮೆ ಬೆಲೆಗೆ ತೋಟ ಗುತ್ತಿಗೆ ಪಡೆಯುತ್ತಾರೆ. ತೋಟ ಕಾಯುವುದು ಔಷಧ ಸಿಂಪಡಿಸುವುದು ಕಟಾವಿನ ಬಗ್ಗೆ ತಿಳಿವಳಿಕೆ ಇಲ್ಲದೆ ರೈತರು ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಇದರಿಂದಾಗಿ ರೈತನಿಗಿಂತ ಮಧ್ಯವರ್ತಿಗಳಿಗೇ ಹೆಚ್ಚಿನ ಲಾಭವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.