ADVERTISEMENT

ಗೌರಸಮುದ್ರ: ವೈಭವದ ಮಾರಮ್ಮದೇವಿ ದೊಡ್ಡ ಪರಿಷೆ

ನಿರೀಕ್ಷೆಗೂ ಮೀರಿ ಬಂದ ಭಕ್ತರು, ದೇವಿಗೆ ಹರಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 5:15 IST
Last Updated 27 ಆಗಸ್ಟ್ 2025, 5:15 IST
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಗೌರಸಮುದ್ರ ತುಂಬಲಿನಲ್ಲಿ ಮಂಗಳವಾರ ಮಾರಮ್ಮದೇವಿ ಜಾತ್ರೆಯು ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಗೌರಸಮುದ್ರ ತುಂಬಲಿನಲ್ಲಿ ಮಂಗಳವಾರ ಮಾರಮ್ಮದೇವಿ ಜಾತ್ರೆಯು ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು   

ಮೊಳಕಾಲ್ಮುರು: ಬುಡಕಟ್ಟು ಜನಾಂಗಗಳ ಆರಾಧ್ಯದೈವ ಗೌಸಂದ್ರ ಮಾರಮ್ಮ ದೊಡ್ಡ ಜಾತ್ರೆಯು ಮಂಗಳವಾರ ಇಲ್ಲಿನ ಗೌರಸಮುದ್ರದ ತುಂಬಲಿನಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. 

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗ್ರಾಮದೇವತೆ ಖ್ಯಾತಿಯ ಈ ಮಾರಮ್ಮ ಜಾತ್ರೆಯು ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಅಪ್ಪಟ ಗ್ರಾಮೀಣ ಸೊಗಡಿನಿಂದ ಕೂಡಿದೆ. ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳ ಪೈಕಿ 2ನೇ ಅತಿದೊಡ್ಡ ಜಾತ್ರೆ ಇದಾಗಿದೆ. ಪ್ರತಿವರ್ಷ ಶ್ರಾವಣಮಾಸ ಆರಂಭದ ಪ್ರಥಮ ಮಂಗಳವಾರ ದೊಡ್ಡ ಜಾತ್ರೆ ನಡೆಸುವುದು ವಾಡಿಕೆ. 15 ದಿನಗಳ ಹಿಂದೆ ಜಾತ್ರೆಗೆ ಸರಗ ಚೆಲ್ಲುವ ಮೂಲಕ ಚಾಲನೆ ನೀಡಲಾಗಿತ್ತು.

ಭಾನುವಾರದಿಂದ ಪ್ರಮುಖ ಘಟ್ಟಗಳು ಆರಂಭವಾದವು. ಮಂಗಳವಾರ ಬೆಳಗಿನ ಜಾವದಿಂದಲೇ ತುಂಬಲಿಗೆ ಭಕ್ತರ ಆಗಮನ ಆರಂಭವಾಗಿತ್ತು. ಸಂಜೆವರೆಗೂ ಭಕ್ತರು ದರ್ಶನ ಪಡೆದರು. ಭಕ್ತರು ಬೇವಿನಸೀರೆ ಹರಕೆ, ಬಾಯಿಗೆ ಬೀಗ ಹರಕೆ, ಧವಸ-ಧಾನ್ಯಗಳ ಅರ್ಪಣೆ, ತೋಟದಲ್ಲಿ ಬೆಳೆದಿದ್ದ ಈರುಳ್ಳಿ, ಶೇಂಗಾ ಅರ್ಪಿಸಿ ಹರಕೆ ಸಲ್ಲಿಸಿದರು. 

ADVERTISEMENT

ಗ್ರಾಮದಲ್ಲಿರುವ ದೇವಸ್ಥಾನದಿಂದ ಬೆಳಿಗ್ಗೆ 10 ಗಂಟೆಗೆ ದೇವಿಯ ಉತ್ಸವಮೂರ್ತಿ ಮೆರವಣಿಗೆ ಆರಂಭವಾಯಿತು. ಬುಡಕಟ್ಟು ವಾದ್ಯಗಳೊಂದಿಗೆ 3 ಕಿ.ಮೀ. ದೂರದಲ್ಲಿರುವ ತುಂಬಲು ಪ್ರದೇಶಕ್ಕೆ ಉತ್ಸವ ಮೂರ್ತಿ, ಆಭರಣ, ವಸ್ತ್ರಗಳನ್ನು ತರಲಾಯಿತು.  

ದಾರಿಯುದ್ದಕ್ಕೂ ಭಕ್ತರು ಜಯಘೋಷ ಕೂಗಿ ಭಕ್ತಿ ಸಮರ್ಪಿಸಿದರು. ಧವಸ, ಧಾನ್ಯ, ಮೆಣಸು ತೂರಿದರು. ಕೆಲವರು ಕೋಳಿಗಳನ್ನು ಸಹ ತೂರಿದರು. ತೂರಿದ ಮೆಣಸನ್ನು ಭಕ್ತರು ಆರಿಸಿಕೊಂಡು ಮನೆಗೆ ತೆಗೆದುಕೊಂಡು ಹೋದರು. ಮೆಣಸು ತೆಗೆದುಕೊಂಡು ಹೋದಲ್ಲಿ ಚರ್ಮವ್ಯಾಧಿ, ರೋಗರುಜಿನ ದೂರವಾಗುತ್ತವೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. 

ಉರುಮೆ, ತಮಟೆ ಸದ್ದಿನ ಆರ್ಭಟದೊಂದಿಗೆ ತುಂಬಲು ಪ್ರವೇಶಿಸಿದ ದೇವಿಯನ್ನು ಪ್ರದಕ್ಷಿಣೆ ಹಾಕಿಸಿದ ನಂತರ ಕಟ್ಟೆ ಮೇಲೆ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಧಾರ್ಮಿಕ ಆಚರಣೆಗಳು ನಡೆದವು. ಕಟ್ಟೆ ಮುಂಭಾಗದಲ್ಲಿರುವ ಕಲ್ಲಿನ ಗರುಡಕಂಬವನ್ನು ಭಕ್ತರು ಹತ್ತಿ ಎಣ್ಣೆ ದೀಪ ಹಚ್ಚಿದರು. ರೈತರು ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಜಾನುವಾರುಗಳನ್ನು ಕಟ್ಟೆ ಪ್ರದಕ್ಷಿಣಿ ಹಾಕಿಸಿದರು. 

ತುಂಬಲಿನಲ್ಲಿ ಜನರು ಸಂಜೆ ನಂತರ ಇರುವಂತಿಲ್ಲ ಎಂಬ ಐತಿಹ್ಯವಿದೆ. ಈ ಕಾರಣಕ್ಕಾಗಿ ಭಕ್ತರು ದರ್ಶನ ಪಡೆದು ತಕ್ಷಣ ವಾಪಸ್‌ ಆಗುತ್ತಾರೆ. ಹೀಗಾಗಿ ‘ಮಧ್ಯಾಹ್ನ ಮಾರಿ ಜಾತ್ರೆ’ ಎಂದೂ ಕರೆಯಲಾಗುತ್ತದೆ. ಕಳೆದ 2 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಭಕ್ತರು ಭಾಗವಹಿಸಿದ್ದರು. 

ಕನ್ನಡ, ತೆಲುಗು ಭಾಷಾ ಜುಗಲ್‌ಬಂಧಿ ಗಮನ ಸೆಳೆಯಿತು. ಪ್ರಾಣಿಬಲಿ ತಡೆಯಲು ಜಿಲ್ಲಾಡಳಿತ ಎಲ್ಲಾ ಸಂಪರ್ಕ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿತ್ತು. ಪರಿಣಾಮಕಾರಿಯಾಗಿ ದೇವಸ್ಥಾನದ ಬಳಿ ಪ್ರಾಣಿಬಲಿ ಕಂಡುಬರಲಿಲ್ಲ. 

ಸಂಜೆ 6 ಗಂಟೆ ಸುಮಾರಿಗೆ ತುಂಬಲಿನಿಂದ ದೇವಿ ಮೆರವಣಿಗೆ ಆರಂಭವಾಯಿತು. ರಾತ್ರಿ ಗೌರಸಮುದ್ರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಬುಧವಾರ ದೇವಸ್ಥಾನದ ಮುಂಭಾಗದಲ್ಲಿ ಸಿಡಿ ಉತ್ಸವ ನಡೆಯಲಿದೆ. 

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ರಾಜ್ಯ ದ್ರಾಕ್ಷಾರಸ ಮತ್ತು ವೈನ್‌ ಬೋರ್ಡ್‌ ಅಧ್ಯಕ್ಷ ಬಿ. ಯೋಗೇಶ್‌ಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜತ್‌ ಕುಮಾರ್‌ ಬಂಡಾರು, ಹೆಚ್ಚುವರಿ ಎಸ್‌ಪಿ ಶಿವಕುಮಾರ್‌, ನಿವೃತ್ತ ಕೆಎಎಸ್‌ ಅಧಿಕಾರಿ ಎನ್. ರಘುಮೂರ್ತಿ, ತಹಶೀಲ್ದಾರ್‌ ರೆಹಾನ್‌ ಪಾಷಾ ಭಾಗವಹಿಸಿದ್ದರು.

ಮಾರಮ್ಮದೇವಿ ಉತ್ಸವ ಮೂರ್ತಿ ತುಂಬಲಿಗೆ ಆಗಮಿಸಿದ ಕ್ಷಣ

ಟ್ರಾಫಿಕ್‌ ಕಿರಿಕಿರಿ:

ಜಾತ್ರೆ ಸಂಪರ್ಕ ರಸ್ತೆಗಳಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಟ್ರಾಫಿಕ್‌ ಕಿರಿಕಿರಿ ಕಂಡುಬಂತು. ದೇವಿ ಬರುವಾಗ ಜನಜಂಗುಳಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ದ್ವಿಪಥ ಸಂಚಾರ ವ್ಯವಸ್ಥೆ ಇರಲಿಲ್ಲ. ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಎಲ್ಲೆಡೆ ಅಳವಡಿಕೆ ಮಾಡಲಾಗಿತ್ತು. ಕಳೆದ ಬಾರಿಗಿಂತ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.