ADVERTISEMENT

‘ಅಂಕ ಇಲ್ಲದೆ ಬದುಕುವುದನ್ನು ಕಲಿಸಿ’

ಮರಿಮಲ್ಲಪ್ಪನವರ ಪ್ರೌಢಶಾಲೆ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:37 IST
Last Updated 13 ಡಿಸೆಂಬರ್ 2019, 8:37 IST
ಮೈಸೂರಿನಲ್ಲಿ ಗುರುವಾರ ನಡೆದ ಮರಿಮಲ್ಲಪ್ಪನವರ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ, ಎನ್‌ಸಿಸಿ ಕೆಡೆಟ್‌ಗಳಿಗೆ ಬಹುಮಾನ ವಿತರಿಸಲಾಯಿತು
ಮೈಸೂರಿನಲ್ಲಿ ಗುರುವಾರ ನಡೆದ ಮರಿಮಲ್ಲಪ್ಪನವರ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ, ಎನ್‌ಸಿಸಿ ಕೆಡೆಟ್‌ಗಳಿಗೆ ಬಹುಮಾನ ವಿತರಿಸಲಾಯಿತು   

ಮೈಸೂರು: ‘ಅಂಕ ಇಲ್ಲದೆ ಬದುಕುವುದನ್ನು ವಿದ್ಯಾರ್ಥಿ ಸಮೂಹಕ್ಕೆ ಕಲಿಸಿ’ ಎಂದು ಪೋಷಕರು–ಶಿಕ್ಷಕ ಬಳಗಕ್ಕೆ ‘ಪ್ರಜಾವಾಣಿ’ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್ಟ ಕಿವಿಮಾತು ಹೇಳಿದರು.

ನಗರದ ಕಲಾಮಂದಿರದಲ್ಲಿ ಗುರುವಾರ ನಡೆದ ಮರಿಮಲ್ಲಪ್ಪನವರ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಅಂಕಕ್ಕೆ ಹೆಚ್ಚು ಗಮನ ಕೊಡುವ ಅಗತ್ಯವಿಲ್ಲ. ಸಮಾಜದಲ್ಲಿ ಸತ್ಪ್ರಜೆಗಳಾಗಿ ಭವಿಷ್ಯ ಕಂಡುಕೊಳ್ಳುವತ್ತ ತಮ್ಮ ಚಿತ್ತ ಹರಿಸಬೇಕು’ ಎಂದು ಸಲಹೆ ನೀಡಿದರು.

‘ಬಡವರಿಗೂ ಒಳ್ಳೆಯ ಶಿಕ್ಷಣ ಸಿಗುವ ಸ್ಥಳ ಮೈಸೂರು. ಹಿಂದಿನಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಈ ನಗರದಲ್ಲಿ ಸಿಕ್ಕಿದೆ. ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಊಟ ಹಾಕುತ್ತಿದ್ದ ಪರಂಪರೆ ಈ ಊರಿಗಿದೆ. ಅದು ಇಂದಿಗೂ ಮುಂದುವರಿದಿದೆ’ ಎಂದು ಹೇಳಿದರು.

ADVERTISEMENT

‘ಸಂಗೀತ, ನೃತ್ಯ, ಕಲಾ ಚಟುವಟಿಕೆ ನಿರಂತರವಾಗಿ ನಡೆಯುತ್ತವೆ ಎಂಬ ಏಕೈಕ ಕಾರಣಕ್ಕೆ ಮೈಸೂರನ್ನು ಸಾಂಸ್ಕೃತಿಕ ರಾಜಧಾನಿ ಎನ್ನಲ್ಲ. ಎಸ್‌.ರಾಧಾಕೃಷ್ಣನ್‌, ಕುವೆಂಪು... ಇನ್ನಿತರ ಮಹನೀಯರು ಇಲ್ಲಿ ಬದುಕಿದ್ದರು ಎಂಬುದಕ್ಕೂ ಸಾಂಸ್ಕೃತಿಕ ರಾಜಧಾನಿ ಎನ್ನಲಾಗಿದೆ’ ಎಂದರು.

‘ಮೈಸೂರು ಎಂದೊಡನೆ ಅರಮನೆ, ಚಾಮುಂಡಿಬೆಟ್ಟ, ಮೃಗಾಲಯಕ್ಕೆ ಸೀಮಿತವಲ್ಲ. ಇಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳಿವೆ. ನೋಡಲೇಬೇಕಾದ ಹಲವು ತಾಣಗಳಿವೆ. ಪೋಷಕರು, ಶಿಕ್ಷಕರು ಮಕ್ಕಳಿಗೆ ಇವುಗಳ ಪರಿಚಯ ಮಾಡಿಕೊಡಬೇಕು’ ಎಂದು ಹಲವು ಸ್ಥಳಗಳ ಪಟ್ಟಿ ನೀಡಿದರು.

ವಿದ್ಯಾರ್ಥಿ ಸಂಘದ ಸನ್ಮಾನ ಸ್ವೀಕರಿಸಿದ ಪೊಲೀಸ್ ಅಧಿಕಾರಿ ಎಂ.ಆರ್.ಗೌತಮ್ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ನನಗೆ ತಡವಾಗಿ ಜಾಗೃತಿ ಮೂಡಿದ್ದರಿಂದ, ಪಿಎಸ್‌ಐ ಆಗಿ ಸರ್ಕಾರಿ ಕೆಲಸ ಆರಂಭಿಸಿದೆ. ನೀವು ಇಂತಹ ತಪ್ಪು ಮಾಡಿಕೊಳ್ಳಬೇಡಿ. ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಕೊಡಿ. ಉನ್ನತ ಹುದ್ದೆ ಅಲಂಕರಿಸಿ’ ಎಂದು ನೆರೆದಿದ್ದ ವಿದ್ಯಾರ್ಥಿ ಸಮೂಹಕ್ಕೆ ಸ್ಫೂರ್ತಿಯ ಮಾತುಗಳನ್ನಾಡಿದರು.

ಮೈಸೂರು ನಗರ ದಕ್ಷಿಣ ವಲಯ ಬಿಇಒ ಶಿವಕುಮಾರ್ ಮಾತನಾಡಿ ‘ನಿದ್ದೆ ಬಾರದ ದೊಡ್ಡ ಕನಸು ಕಾಣಿರಿ. ಇದನ್ನು ಸಾಕಾರಗೊಳಿಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಿ’ ಎಂದು ಹೇಳಿದರು.

ಮರಿಮಲ್ಲಪ್ಪನವರ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ ಮಾತನಾಡಿ ‘ಸಂಸ್ಥೆಯ ಐತಿಹ್ಯ ಸ್ಮರಿಸಿದರು. ಹಳೆಯ ವಿದ್ಯಾರ್ಥಿಗಳ ಸಾಧನೆ ಬಣ್ಣಿಸಿದರು. ವಿದ್ಯಾರ್ಥಿಗಳೇ ದೇಶದ ಶಕ್ತಿ’ ಎಂದರು.

ಕ್ರೀಡಾಪಟುಗಳಿಗೆ, ಎನ್‌ಸಿಸಿ ಕೆಡೆಟ್‌ಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್‌.ಮಮತಾ, ಶೈಕ್ಷಣಿಕ ಅಧಿಕಾರಿ ಎಸ್‌.ಎಂ.ಕಲ್ಕರಡಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.