ADVERTISEMENT

ಅನುಮಾನ, ಅಹಂಕಾರದಿಂದ ಬದುಕು ಹಾಳು

ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:29 IST
Last Updated 6 ಡಿಸೆಂಬರ್ 2022, 5:29 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಸೋಮವಾರ ನಡೆದ ಸಾಮೂಹಿಕ ವಿವಾಹದಲ್ಲಿ ಬಸವಪ್ರಭು ಸ್ವಾಮೀಜಿ ಅವರು ನವ ವಿವಾಹಿತರನ್ನು ಹರಸಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಸೋಮವಾರ ನಡೆದ ಸಾಮೂಹಿಕ ವಿವಾಹದಲ್ಲಿ ಬಸವಪ್ರಭು ಸ್ವಾಮೀಜಿ ಅವರು ನವ ವಿವಾಹಿತರನ್ನು ಹರಸಿದರು.   

ಚಿತ್ರದುರ್ಗ: ಸತಿ-ಪತಿಗಳ ಮನಸ್ಸು ಒಂದಾಗದಿದ್ದರೆ ಸಂಸಾರದಲ್ಲಿ ವಿರಸ ಮೂಡುತ್ತದೆ. ದಂಪತಿ ನಡುವೆ ಅನುಮಾನ ಬರಬಾರದು. ಪರಸ್ಪರ ನಂಬಿಕೆಯಿಂದ ಸುಂದರ ಜೀವನ ಸಾಗಿಸಬೇಕು ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.

ಮುರುಘಾ ಮಠ ಹಾಗೂ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ವತಿಯಿಂದ ಸೋಮವಾರ ನಡೆದ 32ನೇ ವರ್ಷದ 12ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ಅನುಮಾನ ಎಂಬುದು ದೊಡ್ಡರೋಗ. ಇದರಿಂದ ಎಷ್ಟೊ ಸಂಸಾರಗಳು ಹಾಳಾಗಿವೆ. ನಂಬಿಕೆ ಇದ್ದರೆ ಜೀವನ ಸುಸೂತ್ರವಾಗಿ ನಡೆಯುತ್ತದೆ. ಅನುಮಾನ ಮತ್ತು ಅಹಂಕಾರ ಬದುಕನ್ನು ತುಂಡರಿಸುತ್ತದೆ. ಅಹಂಕಾರದಿಂದ ಎಷ್ಟೊ ಜನರು ಅನಾಥಾಶ್ರಮ ಸೇರಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸತಿ– ಪತಿ ಸ್ನೇಹಿತರಂತೆ ಇರಬೇಕು. ಸುಳ್ಳು ಹೇಳುವುದನ್ನು ಕಡಿಮೆ ಮಾಡಬೇಕು. ನಂಬಿಕೆ ಎಂಬ ಸೂಜಿಯಿಂದ ಜೀವನವನ್ನು ಜೋಡಿಸಬೇಕು. ಬಸವಾದಿ ಶರಣರು ವೈಚಾರಿಕ ತತ್ವದ ಹಿನ್ನೆಲೆಯಲ್ಲಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ’ ಎಂದರು.

ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ‘ಗಂಡು-ಹೆಣ್ಣು ಮದುವೆಯಲ್ಲಿ ಒಂದಾಗುತ್ತಾರೆ. ಮನಸ್ಸುಗಳು ಒಂದಾಗಬೇಕು. ಒಬ್ಬರನ್ನೊಬ್ಬರು ಪರಸ್ಪರ ಅರ್ಥೈಸಿಕೊಳ್ಳಬೇಕು. ಮನುಷ್ಯ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕು. ಕಷ್ಟಗಳನ್ನು ಮನುಷ್ಯ ಸಹಿಸಿಕೊಂಡರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯ’ ಎಂದು ನುಡಿದರು.

ತುಮಕೂರು ಡಿ.ಕಲ್ಕೇರೆಯ ತಿಪ್ಪೇರುದ್ರ ಸ್ವಾಮೀಜಿ, ‘ಬಸವಾದಿ ಪ್ರಮಥರು ಶಾಂತಿಯಿಂದ ಕ್ರಾಂತಿ ಮಾಡಿದರು. ಆರೋಗ್ಯ ಪೂರ್ಣವಾದ ಸಮಾಜದ ರಚನೆಗೆ ನಾವು ಮುಂದಾಗಬೇಕು. ಸದಾ ಒಳಿತನ್ನು ಮಾಡುತ್ತ ಸಾಗಬೇಕು. ಸಂಸಾರದ ರಥವನ್ನು ಸುಗಮವಾಗಿ ಎಳೆಯಬೇಕು. ಬದುಕು ವಿಕಾರವಾಗದೆ ವಿಕಾಸವಾಗಬೇಕು’ ಎಂದು
ಹೇಳಿದರು.

ನಾಗಾರ್ಜುನ - ಎನ್.ರಂಜಿತ ಬಾಯಿ ಅಂತರ್ಜಾತಿ ಸೇರಿದಂತೆ ನಾಲ್ಕು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಗೋವಿಂದಪ್ಪ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ಶರಣೆ ಮುಕ್ತಾಯಕ್ಕ, ಸನತ್‍ಕುಮಾರ್, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.