ADVERTISEMENT

ಚಿತ್ರದುರ್ಗ | ನಮ್ಮೊಳಗಿನ ವಿಚಾರ ತಿಳಿಯಲು ಪ್ರಯತ್ನಿಸಿ: ಬಸವಕುಮಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:10 IST
Last Updated 6 ಜನವರಿ 2026, 7:10 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ವಧು–ವರರು
ಚಿತ್ರದುರ್ಗದ ಮುರುಘಾ ಮಠದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ವಧು–ವರರು   

ಚಿತ್ರದುರ್ಗ: ‘ಜಗತ್ತಿನ ಪ್ರತಿ ವಿದ್ಯಮಾನವನ್ನು ನಾವಿಂದು ಕೆಲವೇ ಕ್ಷಣಗಳಲ್ಲಿ ತಿಳಿದುಕೊಳ್ಳುತ್ತೇವೆ. ಆದರೆ, ನಮ್ಮೊಳಗಿನ ವಿಚಾರಗಳನ್ನು ತಿಳಿದು ಅರ್ಥೈಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಅನಿಸಿಕೆ ವ್ಯಕ್ತಪಡಿಸಿದರು.

ನಗರದ ಮುರುಘಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ 36ನೇ ವರ್ಷದ ಒಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಹೊರಜಗತ್ತಿನ ಜ್ಞಾನ ತಿಳಿಯುವುದು ಇಂದು ಅತಿಸುಲಭ. ಆದರೆ ನಮ್ಮ, ನಮ್ಮವರ ಮನಸ್ಸಿನ ಅಂತರಾಳದ ವಿಚಾರ ತಿಳಿಯುವಲ್ಲಿ ಸೋಲುತ್ತಿದ್ದೇವೆ’ ಎಂದರು.

‘ಇಂದಿನ ವ್ಯವಸ್ಥೆಯಲ್ಲಿ ಯಾವುದು ಹೆಚ್ಚು ಪ್ರಚಾರ ಪಡೆಯುತ್ತದೆಯೋ ಜನರು ಅದರ ಹಿಂದೆ ಹೋಗುತ್ತಿದ್ದಾರೆ. ಅದ್ದೂರಿಗೆ ಹಾತೊರೆಯುತ್ತ ಸರಳತೆಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ದೇಶ ಕಟ್ಟುವಲ್ಲಿ ಸರಳತೆ ಬಹುಮುಖ್ಯ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಶ್ರೀಮಠದಲ್ಲಿ ಐದು ಜೋಡಿಗಳ ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಒಂದು ಆದರ್ಶವೆಂದು ಭಾವಿಸಬೇಕು. ಶ್ರೀಮಠವು ಬಡವರ, ದೀನರ ಮಠವಾಗಿದೆ. ಅತ್ಯಂತ ಕಡಿಮೆ ವಸ್ತುಗಳಲ್ಲಿ ಜೀವನ ಸಾಗಿಸುವುದೇ ಸರಳ ಜೀವನವಾಗಿದೆ’ ಎಂದರು.

‘ಸರಳವಾಗಿ ಬದುಕುವುದು ಸಹಜತೆಯಿಂದ ಜೀವಿಸುವುದೇ ಬಸವತತ್ವದ ಮೂಲ ಆಶಯವಾಗಿದೆ. 12ನೇ ಶತಮಾನ ಜಾತಿಯ ಗೋಡೆಗಳನ್ನು ಒಡೆಯುವಂಥ ಪ್ರಯತ್ನದಲ್ಲಿ ಅಂತರ್ಜಾತಿ ವಿವಾಹಗಳಿಗೆ ನಾಂದಿಯಾಡಿತು. ಅದೇ ರೀತಿ ಮಠದಲ್ಲಿ ಅಂತರ್ಧರ್ಮೀಯ, ಅಂತರ್ಜಾತಿಯ ವಿವಾಹಗಳು ಜರುಗುತ್ತಿರುವುದು ವಿಶೇಷವಾಗಿದೆ’ ಎಂದು ತಿಳಿಸಿದರು.

‘ಶ್ರೀಮಠವು ದಶಕಗಳಿಂದಲೂ ಅತ್ಯಂತ ಸರಳವಾಗಿ ಅರ್ಥಪೂರ್ಣವಾಗಿ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮದುವೆಯ ವೆಚ್ಚದ ಹೊರೆಯನ್ನು ತಗ್ಗಿಸುವುದು ಮತ್ತು ಜಾತಿ– ಮತಗಳ ಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸುವುದು ಇಂದಿನ ಅತ್ಯಂತ ಅವಶ್ಯಕತೆಗಳಲ್ಲಿ ಒಂದಾಗಿದೆ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

‘ಸಂಸಾರವೆಂಬುದು ಒಂದು ಎತ್ತಿನ ಬಂಡಿ ಇದ್ದ ಹಾಗೆ. ಎತ್ತಿನ ಬಂಡಿಗೆ ಕಡೇಗೀಲು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದು ಸಂಸಾರವೆಂಬ ಬಂಡಿಗೆ ಸತಿ– ಪತಿಗಳೆಂಬ ಎರಡು ಗಾಲಿಗಳಲ್ಲಿನ ಹೊಂದಾಣಿಕೆ. ಸತಿಪತಿಗಳ ನಡುವಿನ ಜಗಳ ಪರಸ್ಪರರ ನಡುವಿನ ಪ್ರೀತಿಯ ಜಗಳವಾಗಬೇಕು. ಮನಸ್ತಾಪದ ಜಗಳ ಆಗಬಾರದು’ ಎಂದರು.

5 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ಅಮೃತ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಮ್ಮದ್‌ ಖಾಸೀಂ ಅವರನ್ನು ಸನ್ಮಾನಿಸಲಾಯಿತು. ಬಸವ ಸಮಿತಿ ಅಧ್ಯಕ್ಷ ಮದ್ದೇರು ರಾಜಣ್ಣ, ಶಿಕ್ಷಕ ಗಿರೀಶಾಚಾರ್ಯ ಇದ್ದರು.

ಎಂತಹ ಪರಿಸ್ಥಿತಿ ಎದುರಾದರೂ ಪರಸ್ಪರ ನಂಬಿಕೆ ವಿಶ್ವಾಸ ಹೊಂದಾಣಿಕೆ ಮೂಲಕ ಜೀವನ ಸಾಗಿಸಬೇಕು. ಆಗ ಮಾತ್ರ ಬದುಕು ಸ್ವರ್ಗವಾಗುತ್ತದೆ.
ಬಸವಪ್ರಭು ಸ್ವಾಮೀಜಿ ವಿರಕ್ತ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.