ADVERTISEMENT

ಸ್ವಾಭಿಮಾನ ಮರೆತರೆ ಬದುಕಿಗೆ ಅಪಾಯ- ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಸಲಹೆ

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 12:15 IST
Last Updated 5 ಜನವರಿ 2022, 12:15 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಬುಧವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು ನವದಂಪತಿಗಳನ್ನು ಹರಸಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಬುಧವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು ನವದಂಪತಿಗಳನ್ನು ಹರಸಿದರು.   

ಚಿತ್ರದುರ್ಗ: ಸ್ವಾಭಿಮಾನ ದುಡಿಯಲು ಪ್ರೇರೇಪಿಸುತ್ತದೆ. ಬಡತನ ಬೇಡಲು ಹಚ್ಚುತ್ತದೆ. ಸ್ವಾಭಿಮಾನ ಕಳೆದುಕೊಳ್ಳಬಾರದು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಇಲ್ಲಿನ ಮುರುಘಾ ಮಠದಲ್ಲಿ ಬೃಹನ್ಮಠ ಮತ್ತು ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 32ನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಬಡತನ ನಿವಾರಣೆ ಸರ್ಕಾರಕ್ಕೆ ದೊಡ್ಡ ಸವಾಲು. ದುಡಿಮೆಯಿಂದ ಬದುಕಿಗೆ ಭದ್ರತೆ ಸಿಗುತ್ತದೆ. ದುಡಿಮೆಯ ಮೇಲೆ ಬದುಕನ್ನು ಕಟ್ಟಿಕೊಳ್ಳಬೇಕು. ಆಗ ಮಾತ್ರ ಸ್ವಾಭಿಮಾನದ ಬದುಕು ನಿರ್ಮಾಣವಾಗುತ್ತದೆ. ಹೃದಯದಲ್ಲಿ ಸದುದ್ದೇಶ ಇಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಹಾವೇರಿಯ ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ಮದುವೆಗೆ ಹಲವು ರೀತಿಯ ಖರ್ಚುಗಳು ಇರುತ್ತವೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಗೃಹಸ್ಥಾಶ್ರಮಕ್ಕೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಸತಿಪತಿಗಳಲ್ಲಿ ಪರಸ್ಪರ ಅವಿನಾಭಾವ ಸಂಬಂಧ ಇರುತ್ತದೆ. ಸಂಸಾರವೆಂಬ ಬಂಡಿ ಸುಗಮವಾಗಿ ಸಾಗಬೇಕು’ ಎಂದು ಹರಸಿದರು.

ಇದೇ ಸಂದರ್ಭದಲ್ಲಿ ನಾಲ್ಕು ಜೋಡಿಗಳ ವಿವಾಹ ನೆರವೇರಿತು. ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ನಿಪ್ಪಾಣಿ ಮುರುಘೇಂದ್ರ ಮಠದ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಹೊಸದುರ್ಗ ಪುರಸಭೆ ಅಧ್ಯಕ್ಷ ಎಂ.ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.