
ಮೊಳಕಾಲ್ಮುರು: ತಾಯಿ ಮತ್ತು ನವಜಾತ ಶಿಶು ಮರಣ ತಪ್ಪಿಸಲು ಆರೋಗ್ಯ ಇಲಾಖೆ ಸೂಚಿಸುವ ಮಾರ್ಗದರ್ಶಿಗಳನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮುದಾಯ ಕೇಂದ್ರದ ವೈದ್ಯೆ ಭೂಮಿಕಾ ಹೇಳಿದರು.
ತಾಲ್ಲೂಕಿನ ಬಿ.ಜಿ. ಕೆರೆಯಲ್ಲಿ ಶನಿವಾರ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ತಾಯಿ ಮತ್ತು ಮಗು ಮರಣ ಪ್ರಮಾಣ ತಡೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಸಮುದಾಯ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ಇಂತಹ ಘಟನೆಗಳನ್ನು ತಪ್ಪಿಸಲು ಸಾಧ್ಯವಿದೆ. ಗರ್ಭಿಣಿಯರ ಜೊತೆ ಸಿಬ್ಬಂದಿ ಕಾಲ ಕಾಲಕ್ಕೆ ಸಮಾಲೋಚನೆ ಮಾಡುವ ಮೂಲಕ ಆರೋಗ್ಯದ ಮಾಹಿತಿ ಸಂಗ್ರಹಿ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಬೇಕು ಎಂದರು.
ಆರೋಗ್ಯವಂತ ಮಗುವನ್ನು ಹೊಂದಲು ಗರ್ಭಿಣಿ ಸ್ತ್ರೀಗೆ ಒಟ್ಟು ಒಂದು ಸಾವಿರ ದಿನಗಳ ಅಗತ್ಯವಿದೆ. ಇದರಲ್ಲಿ ಹೆರಿಗೆಯಾದ ನಂತರದ ಪೋಷಣಾ ಅವಧಿಯೂ ಸೇರಿದೆ. ಕಾಂಗರೂ ಮದರ್ ಕೇರ್ ಮಾದರಿಯಲ್ಲಿ ಮಗು ಆರೈಕೆ ಮಾಡುವ ಮೂಲಕ ಮಗುವಿನ ತೂಕ ಕುಸಿತವಾಗದಂತೆ ಆರೈಕೆ ಮಾಡಬಹುದಾಗಿದೆ. ಈ ಚಿಕಿತ್ಸೆ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಸದುಪಯೋಗ ಮಾಡಿಕೊಳ್ಳಬಹುದು ಎಂದು ಟ್ರಷ್ಟ್‌ನ ಹಿರಿಯ ವ್ಯವಸ್ಥಾಪಕಿ ಡಾ. ಆಯೇಷಾ ತಿಳಿಸಿದರು.
ತಾಲ್ಲೂಕು ಘಟಕದ ಆಶಾ ಮೆಂಟರ್ ರಾಧಾ, ಹಿರಿಯ ಆರೋಗ್ಯ ಮೇಲ್ವಿಚಾರಕಿ ಮಾರುತಮ್ಮ, ತಾಲ್ಲೂಕು ಘಟಕದ ಸಂಯೋಜಕ ಮೇಘ, ತರಬೇತುದಾರರಾದ ಗುರುಪ್ರಸಾದ್, ಚಿಕ್ಕಣ್ಣ, ಗೋವಿಂದರಾಜ್, ತಾಲ್ಲೂಕು ನರ್ಸ್ ಮೆಂಟರ್ ಉಮಾಪತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.