ADVERTISEMENT

ಮಹಿಳೆಯ ಬಗೆಗಿನ ತಪ್ಪು ಗ್ರಹಿಕೆ ನಿರಾಕರಿಸಿದ ಶರಣರು; ಪಂಡಿತಾರಾಧ್ಯ ಶಿವಾಚಾರ್ಯ

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 3:08 IST
Last Updated 17 ಆಗಸ್ಟ್ 2021, 3:08 IST
‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರ ಹಾಗೂ ಸಾಣೇಹಳ್ಳಿಯ ಭರತ ನಾಟ್ಯ ಶಾಲೆಯ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.
‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರ ಹಾಗೂ ಸಾಣೇಹಳ್ಳಿಯ ಭರತ ನಾಟ್ಯ ಶಾಲೆಯ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.   

ಸಾಣೇಹಳ್ಳಿ (ಹೊಸದುರ್ಗ): ‘12ನೇ ಶತಮಾನದಲ್ಲಿ ಶರಣರು ಮಹಿಳೆಯರಿಗೆ ಕೊಟ್ಟಷ್ಟು ಸ್ವಾತಂತ್ರ್ಯ, ಗೌರವವನ್ನು ಪ್ರಪಂಚದ ಇನ್ನಾವ ಭಾಗದಲ್ಲೂ ಕೊಟ್ಟಿಲ್ಲ. ಪರಂಪರೆಯಿಂದ ಬಂದ ಅನೇಕ ತಪ್ಪು ಗ್ರಹಿಕೆಗಳನ್ನು ಶರಣರು ನಿರಾಕರಿಸಿದರು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ಮತ್ತೆ ಕಲ್ಯಾಣ ಅಂತರ್ಜಾಲ ಕಾರ್ಯಕ್ರಮದ 16ನೇ ದಿನವಾದ ಸೋಮವಾರ ಸಂಜೆ ನಡೆದ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶಿವಶರಣರು ವೇಶ್ಯಾ ವೃತ್ತಿಯನ್ನು ಗೌರವಿಸಿದವರಲ್ಲ. ಅಂಥವರನ್ನು ಮದುವೆ ಮಾಡಿಕೊಂಡು ‘ಪುಣ್ಯಸ್ತ್ರೀ’ ಎಂಬ ಹೊಸ ಹೆಸರು ಕೊಟ್ಟರು. ಹೀಗಾಗಿ ವೇಶ್ಯಾ ವೃತ್ತಿ ಮಾಡುತ್ತಿದ್ದ ಹಲವು ಸ್ತ್ರೀಯರು ಆದರ್ಶ ಜೀವನ ನಡೆಸಲು ಕಾರಣವಾಯಿತು. ಇಂಥ ಪರಿವರ್ತನೆ ಜಗತ್ತಿನಲ್ಲಿ ಎಲ್ಲೂ ಕಂಡು, ಕೇಳರಿಯದ ಸಂಗತಿ. ಸಂಕವ್ವೆಯ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ಮೊದಲು ಈಕೆ ವೇಶ್ಯಾವೃತ್ತಿ ಮಾಡುತ್ತಿದ್ದು, ನಂತರ ಆ ವೃತ್ತಿಗೆ ಮಂಗಳ ಹಾಡಿ ಶರಣೆಯಾಗಿ ಆದರ್ಶ ಜೀವನ ಸಾಗಿಸಿದಳು. ಆಕೆ ಅನೇಕ ವಚನಗಳನ್ನು ಬರೆದಿರಬಹುದಾದರೂ ಒಂದು ವಚನ ಮಾತ್ರ ಲಭ್ಯವಿದೆ. ಸಂಕವ್ವೆ ಸ್ವಾಭಿಮಾನಿ ಮಹಿಳೆ. ಈಕೆ ಲಿಂಗನಿಷ್ಠೆ, ಜಂಗಮ ಪ್ರೇಮ, ದಾಸೋಹ ಪ್ರಜ್ಞೆಯಿಂದಾಗಿ ಅಮರಳಾಗಿದ್ದಾಳೆ’ ಎಂದು ಬಣ್ಣಿಸಿದರು.

ADVERTISEMENT

‘ಜಗತ್ತಿನಲ್ಲಿ ನಡೆದ ಬಹುತೇಕ ಚಳವಳಿಗಳು ಪುರುಷ ಕೇಂದ್ರಿತವಾದವು. 12ನೇ ಶತಮಾನದಲ್ಲಿ ನಡೆದ ಚಳವಳಿ ಮಹಿಳೆಯರನ್ನೂ ಒಳಗೊಂಡಿತ್ತು ಎನ್ನುವುದು ವಿಶೇಷ. ಈ ಚಳವಳಿ ಮಹಿಳೆಗೆ ನೀಡಿದ ಸ್ವಾತಂತ್ರ್ಯ, ಸಮಾನತೆ ಅನುಪಮವಾದುದು. ಈ ಕಾರಣಕ್ಕೆ ಪುರುಷರನ್ನು ಮೀರಿಸುವಷ್ಟು ಎತ್ತರಕ್ಕೆ ಮಹಿಳೆಯರು ಬೆಳೆದರು. ಶರಣರ ಕಾಲ ರಾಜಪ್ರಭುತ್ವದ ಕಾಲ. ಆದರೆ, ಇಂದಿನ ಪ್ರಜಾಪ್ರಭುತ್ವದಲ್ಲೂ ಮಹಿಳೆಯ ಶೋಷಣೆ ಕಡಿಮೆಯಾಗಿಲ್ಲ. ದೇವರ ಸೇವೆಯ ಹೆಸರಿನಲ್ಲಿ ಬೆತ್ತಲೆ ಸೇವೆ, ಮುತ್ತು ಕಟ್ಟುವ ಕ್ರಿಯೆಗಳು ವೇಶ್ಯಾ ವೃತ್ತಿಯನ್ನು ಪೋಷಿಸುತ್ತ ಬರುತ್ತಿವೆ. ಇದು ಸ್ತ್ರೀಯರಿಗೆ ಬಗೆಯುವ ದ್ರೋಹವೇ ಸರಿ’ ಎಂದು ಬೇಸರ ವ್ಯಕ್ತಪಡಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ ಸೂಳೆ ಸಂಕವ್ವೆ ವಿಷಯ ಕುರಿತು ಬೆಂಗಳೂರು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಮಾತನಾಡಿ, ‘ಒಂದೇ ವಚನದಿಂದಲೇ ಸಂಕವ್ವೆ ಪ್ರಸಿದ್ಧ ವಚನಕಾರ್ತಿಯಾಗಿದ್ದಾಳೆ. ಈಕೆಯ ವಚನಾಂಕಿತ ನಿರ್ಲಜ್ಜೇಶ್ವರ. ಈಕೆಯದು ಸೂಳೆ ಕಾಯಕ. ಈ ವೃತ್ತಿ ಬುದ್ಧನ ಕಾಲದ ಆಮ್ರಪಾಲಿಯ ಪ್ರಸಂಗದಿಂದ ಹಿಡಿದು ಈಗ ಕೂಡ ಬೇರೆ ವಿನ್ಯಾಸದಲ್ಲಿದೆ. ಹೆಣ್ಣನ್ನು ಎಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದೇವೆ ಎನ್ನುವುದರ ಪ್ರತೀಕವಾಗಿದೆ. ಸಮಾಜದ ಸೇವೆಯಲ್ಲಿ ಇವರದ್ದೂ ಒಂದು ಪಾತ್ರವಿದೆ. ಇದಕ್ಕೆ ಉದಾಹರಣೆಯಾಗಿ ದಾವಣಗೆರೆ ಜಿಲ್ಲೆಯಲ್ಲಿ ಸೂಳೆಯೊಬ್ಬಳು ಕಟ್ಟಿಸಿದ ಸೂಳೆಕೆರೆ ಇದೆ’ ಎಂದು ವಿವರಿಸಿದರು.

ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯ ನೇತ್ರಾ ಪ್ರಕಾಶ್ ಸ್ವಾಗತಿಸಿದರು. ಶಿವಸಂಚಾರದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಮತ್ತು ತಬಲಾ ಸಾಥಿ ಶರಣ್ ತಂಡ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತನಾಟ್ಯ ಶಾಲೆಯ ಡಿ.ಎಸ್‌. ಸುಪ್ರಭೆ ಹಾಗೂ ಡಿ.ಜೆ. ಮುಕ್ತ ವಚನ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.