
ಚಿತ್ರದುರ್ಗ: ಕನ್ನಡದ ಮೊದಲ ದೊರೆ ಕದಂಬ ವಂಶದ ಸ್ಥಾಪಕ ಮಯೂರ ವರ್ಮನು ಐತಿಹಾಸಿಕ ಚಂದ್ರವಳ್ಳಿಯ ಕಲ್ಲು ಬಂಡೆಯ ಮೇಲೆ ಕೆತ್ತಿಸಿದ್ದ ಶಿಲಾಶಾಸನಕ್ಕೆ (ಚಂದ್ರವಳ್ಳಿ ಶಾಸನ) ರಕ್ಷಣೆಯೇ ಇಲ್ಲವಾಗಿದ್ದು, ಬ್ರಾಹ್ಮಿ ಲಿಪಿ ಸವಕಳಿಯಾಗಿ ಕಣ್ಣೋಟಕ್ಕೆ ನಿಲುಕದಾಗಿವೆ.
ಪಲ್ಲವರಿಂದ ಅವಮಾನಿತನಾಗಿದ್ದ ಮಯೂರ ವರ್ಮ ಚಂದ್ರವಳ್ಳಿ ಅರಣ್ಯ ಸೇರಿ, ಸ್ಥಳೀಯ ಸೈನಿಕರ ಸಹಾಯ ಪಡೆದು ಪಲ್ಲವರನ್ನು ಸೋಲಿಸಿದ. ನಂತರ ಕನ್ನಡದ ಮೊದಲ ದೊರೆ ಎಂದು ಹೆಸರಾದ. ಕೆರೆ, ಕಟ್ಟೆ ಕಟ್ಟಿಸಿದ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಿದ. ಇಲ್ಲಿಯ ಸಾಧನೆ ಕದಂಬ ವಂಶ ಸ್ಥಾಪನೆಗೆ ನಾಂದಿಯಾಯಿತು ಎಂಬ ಮಾಹಿತಿ ಇತಿಹಾಸದ ಪುಟಗಳಲ್ಲಿದೆ.
ತ್ರೈಕೂಟ, ಆಭೀರ, ಪುನ್ನಾಟ, ಸೇಂದ್ರಕ, ಮೌಖರಿಯರನ್ನೂ ಸೋಲಿಸಿದ ದೊರೆ ಕದಂಬ ರಾಜ್ಯ ಸ್ಥಾಪಿಸಿದ. ಅದರ ಸವಿ ನೆನಪಿಗಾಗಿ ಚಂದ್ರವಳ್ಳಿಯಲ್ಲಿ ಕೆರೆ ಕಟ್ಟಿಸಿದ. ಸಮೀಪದ ಹೆಬ್ಬಂಡೆಯ ಮೇಲೆ ಶಾಸನವನ್ನೂ ಕೆತ್ತಿಸಿದ. ಇದೇ ಶಾಸನದಲ್ಲಿ ಉಲ್ಲೇಖಿತವಾದ ಕನ್ನಡದ ಮೊದಲ ಕೆರೆ ಎಂದೇ ಚಂದ್ರವಳ್ಳಿ ಕರೆ ಪ್ರಸಿದ್ಧಿ ಪಡೆಯಿತು ಎಂಬ ಮಾಹಿತಿ ದೊರೆಯುತ್ತದೆ.
ಚಂದ್ರವಳ್ಳಿ ಕೆರೆ ಈಗಲೂ ಅಗಾಧ ಸೌಂರ್ದಯ ಹೊತ್ತು ನಿಂತಿದೆ. ಆದರೆ, ಚಂದ್ರವಳ್ಳಿ ಶಾಸನ ರಕ್ಷಣೆ ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಂಡೆಗೆ ಹೊಂದಿಕೊಂಡಂತಿರುವ ಹುಲೇಗೊಂದಿ ಸಿದ್ದೇಶ್ವರ ದೇವಾಲಯಕ್ಕೆ ರಕ್ಷಣೆಯಿದೆ. ಆದರೆ ಶಾಸನಕ್ಕೆ ರಕ್ಷಣೆ ಇಲ್ಲದಾಗಿದೆ. ಕನಿಷ್ಠ ಚಾವಣಿಯನ್ನೂ ಹಾಕದ ಕಾರಣ ಮಳೆ, ಬಿಸಿಲಿಗೆ ಕಲ್ಲು ಸವಕಳಿಯಾಗಿದೆ.
‘ಕದಂಬರ ರಾಜಧಾನಿ ಬನವಾಸಿಯಲ್ಲೂ ಮಯೂರವರ್ಮನ ಶಾಸನ ಸಿಕ್ಕಿಲ್ಲ. ಆದರೆ ಚಂದ್ರವಳ್ಳಿಯಲ್ಲಿ ಶಾಸನ ಪತ್ತೆಯಾಗಿದ್ದು ಅವನ ಸಾಧನೆಯನ್ನು ತಿಳಿಸುತ್ತದೆ. ಇದು ಚಿತ್ರದುರ್ಗದ ಚಾರಿತ್ರೆಗೂ ಮಹತ್ವಪೂರ್ಣದ್ದಾಗಿದೆ. ಸ್ಥಳೀಯರು, ಪುರಾತತ್ವ ಇಲಾಖೆಗಳ ನಿರ್ಲಕ್ಷ್ಯದಿಂದ ಅಪರೂಪದ ಶಾಸನ ವಿನಾಶದ ಅಂಚು ತಲುಪಿದೆ’ ಎಂದು ಇತಿಹಾಸ ಸಂಶೋಧಕ ಎನ್.ಎಸ್. ಮಹಾಂತೇಶ್ ತಿಳಿಸಿದರು.
ಹಲ್ಮಿಡಿ ಶಾಸನಕ್ಕಿಂತಲೂ (ಕ್ರಿ.ಶ. 450) ಹಳೆಯದು ಎನ್ನಲಾದ ಚಂದ್ರವಳ್ಳಿ ಶಾಸನ ಕ್ರಿ.ಶ 350ರಲ್ಲಿ ರಚನೆಗೊಂಡಿದೆ. ಪ್ರಾಕೃತ ಭಾಷೆಯಲ್ಲಿರುವ ಶಾಸನ ಹಲವು ಶತಮಾನಗಳವರೆಗೆ ಪತ್ತೆಯೇ ಆಗಿರಲಿಲ್ಲ. ಪುರಾತತ್ವ ಇಲಾಖೆ ನಿರ್ದೇಶಕರಾಗಿದ್ದ ಎಂ.ಎಚ್.ಕೃಷ್ಣ ಚಂದ್ರವಳ್ಳಿ ಪ್ರದೇಶದಲ್ಲಿ ಪುರಾತತ್ವ ಅನ್ವೇಷಣೆ ನಡೆಸುವಾಗ ಈ ಶಾಸನ ಪತ್ತೆಯಾಯಿತು. ಅದನ್ನು ಅವರು ಮೈಸೂರು ಪುರಾತತ್ವ ವರದಿ– 1929ರಲ್ಲಿ ಪ್ರಕಟಿಸಿದರು.
‘ಶಾಸನ ಪತ್ತೆಯಾಗಿ 96 ವರ್ಷವಾದರೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ), ರಾಜ್ಯ ಸರ್ಕಾರದ ಪುರಾತತ್ವ ಇಲಾಖೆಗಳು ಸಂರಕ್ಷಿಸಿಲ್ಲ. ಕನ್ನಡ ಇತಿಹಾಸಕ್ಕೆ ಗರಿಮೆ ತಂದುಕೊಟ್ಟ ಚಂದ್ರವಳ್ಳಿ ಶಾಸನವನ್ನು ಈಗಲಾದರೂ ಸಂರಕ್ಷಿಸಬೇಕು’ ಎಂದು ಸಂಶೋಧಕ ಮಹೇಶ್ ಕುಂಚಿಗನಾಳ್ ಒತ್ತಾಯಿಸುತ್ತಾರೆ.
‘ಚಂದ್ರವಳ್ಳಿ ಶಾಸನವನ್ನು ಸಂರಕ್ಷಿತ ಪ್ರದೇಶ ಎಂದು ಎಎಸ್‌ಐ ಘೋಷಿಸಿದೆ. ಅವರೇ ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ರಾಜ್ಯ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ಹೇಳಿದರು.
ಶಾಸನದ ಸಾರಾಂಶ ಹೀಗಿದೆ...
ತ್ರೈಕೂಟ ಅಭೀರ ಪಲ್ಲವ ಪಾರಿಯಾತ್ರಿಕ ಸಕಸ್ಥಾನ ಸೈನ್ದಕ ಪುಣಾಟ ಮೋಕರಿಗಳನ್ನು ಸೋಲಿಸಿದ ಕದಂಬರ ಮಯೂರ ವರ್ಮನಿಂದ ತಟಾಕ ನಿರ್ಮಿತ... ಮೂರು ಸಾಲಿನ ಈ ಶಾಸನದಲ್ಲಿ ಈಗ ಅಕ್ಷರಗಳು ಕಾಣದಾಗಿವೆ. ಎಂ.ಎಚ್.ಕೃಷ್ಣ ಶಾಸನ ಪತ್ತೆ ಹಚ್ಚಿದಾಗ ಅಕ್ಷರಗಳು ಗುರುತಿಸುವಂತಿದ್ದವು. ಆದರೆ ಈಗ 2 ಮತ್ತು 3ನೇ ಸಾಲಿನ ನಡುವೆ ಸೂರ್ಯ ಚಂದ್ರ ಸಂಕೇತ ಒಂದು ಗೆರೆ ಮಾತ್ರ ಉಳಿದಿವೆ. ಹುಲೇಗೊಂದಿ ಸಿದ್ದೇಶ್ವರನ ‘ದರುಶನಕ್ಕೆ’ ದಾರಿ ತೋರಿಸುವ ಮಾರ್ಗಸೂಚಿಯನ್ನಾಗಿ ಶಾಸನ ಬಂಡೆಯನ್ನು ಬಳಸಿಕೊಂಡಿದ್ದರೂ ಕೇಳುವವರೇ ಇಲ್ಲವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.