ಚಿಕ್ಕಜಾಜೂರು: ಗ್ರಾಮದಲ್ಲಿರುವ ಕೋಳಿ ವ್ಯಾಪಾರಿಗಳು, ಮಾಂಸಾಹಾರಿ ಹೋಟೆಲ್ ನಡೆಸುವವರು ಕೆರೆ, ಹಳ್ಳ, ಸೇತುವೆ ಬಳಿ ತ್ಯಾಜ್ಯ ಸುರಿಯುತ್ತಿರುವ ಕಾರಣ ನೀರು ಮಲಿನಗೊಳ್ಳುತ್ತಿದೆ. ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಗುಂಜಿಗನೂರು ರೈಲ್ವೆ ಗೇಟ್, ಅದರ ಸಮೀಪದ ಹಳ್ಳ, ಸೇತುವೆ ಹಾಗೂ ರಸ್ತೆ ಬದಿಯಲ್ಲಿ ತ್ಯಾಜ್ಯ ತಂದು ಎಸೆದು ಹೋಗುತ್ತಿದ್ದಾರೆ. ರಸ್ತೆ ಬದಿಯಲ್ಲಿ ಮುಂಜಾನೆ ಹಾಗೂ ಸಂಜೆ ಹೆಚ್ಚಿನ ಸಂಖ್ಯೆಯ ಬರುವ ವಾಯು ವಿಹಾರಿಗಳು ಹಾಗೂ ಗುಂಜಿಗನೂರು ಗೊಲ್ಲರಹಟ್ಟಿ, ಎಸ್.ಎಚ್. ಗೊಲ್ಲರ ಹಟ್ಟಿ, ಬಾಣಗೆರೆ ಮೊದಲಾದ ಗ್ರಾಮಗಳಿಂದ ಹಾಲು ಮಾರಲು ಬರುವವರ ಮೇಲೆ ನಾಯಿಗಳು ದಾಳಿ ಮಾಡುವುದರಿಂದ ತೀವ್ರ ಆತಂಕ ಸೃಷ್ಟಿಯಾಗಿದೆ.
ಹೊಳಲ್ಕೆರೆ ರಸ್ತೆ ಬದಿಯಲ್ಲೂ ಕೋಳಿ, ಕುರಿ ಮಾಂಸದ ಅಂಗಡಿಯವರು, ಮಾಂಸಹಾರಿ ಹೋಟೆಲ್‌ನವರು ತಮ್ಮ ಅಂಗಡಿ ಹಾಗೂ ಹೋಟೆಲ್‌ಗಳ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ರಸ್ತೆ ಬದಿ ಹಾಕಿ ಹೋಗುತ್ತಾರೆ. ಇಲ್ಲೂ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಮೇಲೆ ಎಗರಿ ಬರುತ್ತವೆ. ಈ ಕುರಿತು ಗ್ರಾಮ ಪಂಚಾಯಿತಿಯವರಿಗೆ ಹಲವು ಬಾರಿ ಮಾಹಿತಿ ನೀಡಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಬನಶಂಕರಿ ಬಡಾವಣೆ, ರೇವತಿ ಗಾರ್ಡನ್, ಗಿರಿಜಮ್ಮ ಬಡಾವಣೆಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಕೆರೆ ಸೇರುತ್ತಿರುವ ಮಾಂಸದ ತ್ಯಾಜ್ಯ: ಗ್ರಾಮದ ಮಾರುತಿನಗರ ಬಡಾವಣೆ ಬಳಿ ಇರುವ ಬಸವನಪಾದ ಕೆರೆ ತಟದಲ್ಲಿ ಕೋಳಿ ಅಂಗಡಿಯವರು ಮಾಂಸದ ತುಂಡುಗಳು ಹಾಗೂ ಕೋಳಿಯ ಪುಕ್ಕವನ್ನು ತಂದು ರಾಶಿ ಹಾಕಿ ಹೋಗುತ್ತಿದ್ದಾರೆ. ಇದರಿಂದಾಗಿ, ಮಾಂಸದಲ್ಲಿನ ಕೊಳಕು ತ್ಯಾಜ್ಯ ಕೆರೆ ನೀರು ಸೇರುತ್ತಿದೆ. ಇದರಿಂದಾಗಿ, ಕೆರೆ ದುರ್ನಾತದ ಜತೆಗೆ ಮಲಿನವಾಗುತ್ತಿದೆ.
‘ಕೆರೆಯ ನೀರನ್ನು ಕುಡಿಯಲು ಕುರಿ, ಮೇಕೆ, ಜಾನುವಾರುಗಳು ನಿತ್ಯ ಬರುತ್ತಿವೆ. ಇಂತಹ ಮಲಿನ ನೀರನ್ನು ಸೇವಿಸುವುದರಿಂದ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದೆ. ಗ್ರಾಮ ಪಂಚಾಯಿತಿ ಆಡಳಿತವು ಮಾಂಸದ ಅಂಗಡಿಯರು ತ್ಯಾಜ್ಯವನ್ನು ಬೇರೆ ಕಡೆ ಹಾಕುವಂತೆಯೂ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವಂತೆಯೂ ಸೂಚಿಸಬೇಕು’ ಎಂದು ಮಾರುತಿ ನಗರ ನಿವಾಸಿಗಳು ಆಗ್ರಹಿಸಿದ್ದಾರೆ.
‘ನಾಯಿಗಳು ಜನರ ಮೇಲೆ ದಾಳಿ ಮಾಡುತ್ತವೆ. ನಾವು ಹೆದರಿ ಓಡಿದರೆ ಕಚ್ಚುತ್ತವೆ. ಹಲವರು ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಂಜಮ್ಮ, ನಾಗರತ್ನಮ್ಮ, ನಿಂಗಪ್ಪ, ರಾಜಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.