ADVERTISEMENT

ಅಪೌಷ್ಟಿಕ ಮಕ್ಕಳ ಆರೈಕೆಗಾಗಿ ಚಿಕಿತ್ಸಾ ಕೇಂದ್ರ

ಅತಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಅನುಕೂಲ; ದಿನಕ್ಕೆ ₹ 650 ವ್ಯಯ

ಕೊಂಡ್ಲಹಳ್ಳಿ ಜಯಪ್ರಕಾಶ
Published 11 ಜನವರಿ 2023, 7:09 IST
Last Updated 11 ಜನವರಿ 2023, 7:09 IST
ಮೊಳಕಾಲ್ಮುರಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮಾರ್ಪಾಡಿತ ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರದಲ್ಲಿ ಮಗುವೊಂದಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರು
ಮೊಳಕಾಲ್ಮುರಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮಾರ್ಪಾಡಿತ ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರದಲ್ಲಿ ಮಗುವೊಂದಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರು   

ಮೊಳಕಾಲ್ಮುರು: ತೀವ್ರ ಅಪೌಷ್ಟಿಕತೆಗೆ ಒಳಗಾಗುವ ಮಕ್ಕಳ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ‘ಮಾರ್ಪಾಡಿತ ಅಪೌಷ್ಟಿಕ ಮಕ್ಕಳ ಚಿಕಿತ್ಸಾ ಕೇಂದ್ರ’ ಸ್ಥಾಪಿಸಲಾಗಿದೆ.

ಅಪೌಷ್ಟಿಕ ಮಕ್ಕಳ ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ಈ ಹಿಂದೆ ಇದ್ದ ಹಲವು ಸೌಲಭ್ಯಗಳನ್ನು ಸುಧಾರಿತ, ಮಾರ್ಪಾಡಿತ ವ್ಯವಸ್ಥೆ ಹೊಂದಿರುವ ಕೇಂದ್ರ ಇದಾಗಿದ್ದು, ಕಳೆದ ಜೂನ್‌ನಿಂದ ಕಾರ್ಯಾರಂಭ ಮಾಡಿದೆ.

‘ಜಿಲ್ಲೆಯಲ್ಲಿ ಮೊಳಕಾಲ್ಮುರು ಹಾಗೂ ಹೊಸದುರ್ಗ ತಾಲ್ಲೂಕು ಕೇಂದ್ರಗಳಲ್ಲಿನ ಆಸ್ಪತ್ರೆಗಳಲ್ಲಿ ಈ ಕೇಂದ್ರಗಳನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಸ್ಥಾಪಿಸಲಾಗಿದ್ದು, ಈ ಭಾಗದಲ್ಲಿ ಇರಬಹುದಾದ 1ರಿಂದ 5 ವರ್ಷದೊಳಗಿನ ಮಕ್ಕಳಲ್ಲಿನ ಅಪೌಷ್ಟಿಕತೆನಿವಾರಣೆಯೇ ಮುಖ್ಯ ಉದ್ದೇಶವಾಗಿದೆ. ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಕ್ಕಳನ್ನು ಗುರುತಿಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಮಧುಕುಮಾರ್ ಮಾಹಿತಿ ನೀಡಿದರು.

ADVERTISEMENT

‘ಈ ಹಿಂದೆ ಮಗುವಿನ ಚಿಕಿತ್ಸೆಗಾಗಿ ಮಾತ್ರ ಅವಕಾಶವಿತ್ತು. ಈಗ ಹೆಚ್ಚು ಪರಿಣಾಮಕಾರಿ ಆಗಿಸಲು ಮಗುವಿನ ಜತೆಯಲ್ಲಿ ಬರುವ ತಾಯಿ ಅಥವಾ ಪೋಷಕರೊಬ್ಬರಿಗೆ ದಿನಗೂಲಿ ಸಹ ನೀಡಲಾಗುತ್ತಿದೆ. ದಾಖಲಾಗುವ ಪ್ರತಿ ಮಗುವಿಗೆ ಕನಿಷ್ಠ 14 ದಿನಗಳಿಂದ ವೈದ್ಯರ ಸಲಹೆಯನುಸಾರ ಗರಿಷ್ಠ ದಿನಗಳ ಕಾಲ ಚಿಕಿತ್ಸೆ ನೀಡಲಾಗುವುದು. ದಾಖಲಾಗುವ ಪ್ರತಿ ಮಗುವಿಗೆ ಸರ್ಕಾರ ದಿನಕ್ಕೆ ₹ 650 ವ್ಯಯಿಸುತ್ತಿದೆ. ಇದರಲ್ಲಿ ಔಷಧಿಯಾಗಿ ₹ 125, ಮೊಟ್ಟೆ, ಹಾಲು, ಪೌಷ್ಟಿಕ ಆಹಾರಕ್ಕೆ ₹ 125, ತಾಯಿ ಅಥವಾ ಪೋಷಕರೊಬ್ಬರ ಊಟಕ್ಕೆ ₹ 125, ತಾಯಿ ಅಥವಾ ಪೋಷಕರ ದಿನಗೂಲಿಯಾಗಿ ₹ 275 ನಿಗದಿ ಮಾಡಲಾಗಿದೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಮಗುವಿಗೆ ಆಟಿಕೆ ಸಾಮಗ್ರಿಗಳು, ಆರೈಕೆಗಾಗಿ ತರಬೇತಿ ಪಡೆದಿರುವ ಶುಶ್ರೂಷಕಿಯರು, ಮಕ್ಕಳ ವೈದ್ಯರು, 24X7 ಚಿಕಿತ್ಸೆ ಲಭ್ಯವಿರುತ್ತದೆ. ಜನ್ಮತಃ ಅಪೌಷ್ಟಿಕತೆ ಸಮಸ್ಯೆ, ಆರೈಕೆ ಸಮಸ್ಯೆಯಿಂದ ಅಪೌಷ್ಟಿಕತೆಗೆ ಒಳಗಾಗುವ ಮಕ್ಕಳ ಜತೆಗೆ ಅತಿಸಾರ ಭೇದಿ, ತೀವ್ರ ತರಹದ ಜ್ವರದಿಂದಾಗಿ ನಿತ್ರಾಣವಾಗುವ ಮಗುವನ್ನು ಸಹ ಕೇಂದ್ರಕ್ಕೆ ದಾಖಲು ಮಾಡಬಹುದಾಗಿದೆ’ ಎಂದು ಡಾ.ಮಧುಕುಮಾರ್ ತಿಳಿಸಿದರು.

***

ತಾಲ್ಲೂಕಿನಲ್ಲಿ 13 ಮಕ್ಕಳಿಗೆ ಚಿಕಿತ್ಸೆ

ತಾಲ್ಲೂಕಿನಲ್ಲಿ ರಾಂಪುರ, ನಾಗಸಮುದ್ರ, ಬಾಂಡ್ರಾವಿ, ಹುಚ್ಚಂಗಿದುರ್ಗ ಗ್ರಾಮಗಳಲ್ಲಿ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಕಂಡುಬಂದಿದ್ದಾರೆ. 27 ಮಕ್ಕಳನ್ನು ಗುರುತಿಸಿದ್ದು, 13 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಬಗ್ಗೆ ಹೆಚ್ಚು ಪ್ರಚಾರವಾಗಬೇಕಿದ್ದು, ಪಿಡಿಒಗಳು ಇದಕ್ಕೆ ಸಹಕರಿಸಬೇಕಿದೆ. ಅಗತ್ಯವಿರುವ ಮಕ್ಕಳನ್ನು ಗುರುತಿಸಲು, ಕೇಂದ್ರಕ್ಕೆ ದಾಖಲಿಸಲು ಸಮುದಾಯ, ಅಧಿಕಾರಿಗಳು ಕೈಜೋಡಿಸಬೇಕು ಎಂದು ಮಧುಕುಮಾರ್ ಮನವಿ ಮಾಡಿದರು.

***

ತಾಲ್ಲೂಕಿನಲ್ಲಿ ಕೂಲಿ ಕಾರ್ಮಿಕರು ಹೆಚ್ಚಿದ್ದು, ಅವರ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಚಿಕಿತ್ಸೆಗಾಗಿ ಮಾರ್ಪಾಡಿತ ಕೇಂದ್ರ ಹೆಚ್ಚು ಸಹಕಾರಿಯಾಗಿದೆ. ಇದರ ಸದ್ಬಳಕೆಗೆ ಸಾರ್ವಜನಿಕರು ಮುಂದಾಗಬೇಕಿದೆ.

ಡಾ.ಮಧುಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ

ತಾಲ್ಲೂಕಿನಲ್ಲಿ ದಿನೇದಿನೇ ಮಕ್ಕಳಲ್ಲಿನ ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಅಹಾರ ನೀಡಲಾಗುತ್ತಿದೆ. ಜತೆಗೆ ನಿಗದಿತವಾಗಿ ಪರೀಕ್ಷೆ ಮಾಡಲಾಗುತ್ತಿದೆ.

-ಸವಿತಾ, ಸಿಡಿಪಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.