ಚಿತ್ರದುರ್ಗ: ಕುಂಚಿಗನಾಳ್ ಕಣಿವೆ ಬಳಿ ನಿರ್ಮಿಸಿರುವ ಹೊಸ ಕಟ್ಟಡವನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡುವ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರಿನಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಉದ್ದೇಶಕ್ಕೆ ನಿರ್ಮಿಸಿದ್ದ ಕಟ್ಟಡಕ್ಕೆ ಚಿತ್ರದುರ್ಗ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯನ್ನು ಸ್ಥಳಾಂತರ ಮಾಡುವ ಚಟುವಟಿಕೆಗಳು ಬಿರುಸುಗೊಂಡಿವೆ. ಈ ಬಗ್ಗೆ ಈಗಾಗಲೇ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಯುವರಾಜ್ ಹಾಗೂ ಸಿಬ್ಬಂದಿ ಕಟ್ಟಡ ಪರಿಶೀಲನೆ ಮಾಡಿದ್ದು ಕಾಲೇಜು ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿ ವರದಿ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಕಟಾರಿಯ ಅವರು ಬೆಂಗಳೂರಿನ ವಿಕಾಸಸೌಧದಲ್ಲಿ ಚರ್ಚೆ ನಡೆಸಿದರು. ಕಟ್ಟಡ ಹಸ್ತಾಂತರಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೂಡಾ ಸಹಮತ ವ್ಯಕ್ತಪಡಿಸಿದ್ದು, ಮುಂದಿನ ಚಟುವಟಿಕೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಮಾನದಂಡಗಳಿಗೆ ಅನುಗುಣವಾಗಿ ಕಾಲೇಜು ಸ್ಥಳಾಂತರ ಮಾಡುವ ಸಂಬಂಧ ಎಲ್ಲಾ ರೀತಿಯ ಸಿದ್ಧತೆ ಆರಂಭಿಸಬೇಕು. ಅಂತಿಮ ನಿರ್ಣಯ ಕೈಗೊಂಡ ನಂತರ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ಅಂತಿಮ ಆದೇಶ ಹೊರಡಿಸುವಂತೆ ಮನವಿ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಇದಕ್ಕೆ ಒಪ್ಪಿಗೆ ಸೂಚಿಸಿದರು.
‘ಜಿಲ್ಲೆಯ ಜನರ ಒತ್ತಾಯದಂತೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಈಗಿರುವ ಜಾಗದಲ್ಲೇ ಉಳಿಸಿಕೊಳ್ಳಲಾಗುವುದು. ಕಚೇರಿ ಹಿಂಭಾಗದಲ್ಲಿ ಹಾಗೂ ಸುತ್ತಮುತ್ತ 10 ಎಕರೆ ಜಾಗ ದೊರೆಯುತ್ತದೆ. ಈಚೆಗೆ ನಾನು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಗರದ ಹೃದಯ ಭಾಗದಲ್ಲೇ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಾಣ ಸಾಧ್ಯವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಿರುವ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡ ಹೆಚ್ಚಾಗಿದೆ. ವೈದ್ಯಕೀಯ ಕಾಲೇಜು ಅಲ್ಲೇ ಆರಂಭಗೊಂಡರೆ ಇಡೀ ಆವರಣ ಗೊಂದಲದ ಗೂಡಾಗಲಿದೆ. ಹೀಗಾಗಿ ವೈದ್ಯಕೀಯ ಕಾಲೇಜು ಹಾಗೂ ಹಾಸ್ಟೆಲ್‌ಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುವುದು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಕಟ್ಟಡವನ್ನು ಜಿಲ್ಲಾ ಆಸ್ಪತ್ರೆಗೇ ಉಳಿಸಿಕೊಳ್ಳಲಾಗುವುದು’ ಎಂದರು.
‘ಹೊಸ ವೈದ್ಯಕೀಯ ಕಾಲೇಜಿಗೆ 20 ಎಕರೆ ವಿಸ್ತೀರ್ಣ ಸಾಕು. ಜೊತೆಗೆ ನಗರದಿಂದ 20 ಕಿ.ಮೀವರೆಗೂ ದೂರ ಇರಬಹುದು. ಆದರೆ ಕುಂಚಿಗನಾಳ್ ಕಣಿವೆ ನಗರದಿಂದ 5 ಕಿ.ಮೀ ಇದ್ದು, ವೈದ್ಯಕೀಯ ಕಾಲೇಜು ಸ್ಥಳಾಂತರ ಮಾಡಲು ಯಾವುದೇ ಅಡ್ಡಿ ಇಲ್ಲ. ಆದಷ್ಟು ಬೇಗ ಕಾಲೇಜು ಸ್ಥಳಾಂತರ ಮಾಡಲು ಎಲ್ಲಾ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದರು.
ವೈದ್ಯಕೀಯ ಇಲಾಖೆ ಅಧಿಕಾರಿಗಳ ಚರ್ಚೆ ಎಂಸಿಐ ಮಾನದಂಡಗಳ ಅಡಿ ಪರಿಶೀಲನೆ ಅಂತಿಮ ವರದಿಯ ನಂತರ ಮುಖ್ಯಮಂತ್ರಿ ಭೇಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.