ಹೊಳಲ್ಕೆರೆ: ಅ.8 ರಿಂದ ತಾಲ್ಲೂಕಿನ ಸರ್ಕಾರಿ ಶಾಲೆಗಳ 1ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಕಡಲೆ ಕಾಳು ಉಸಲಿ, ಎರಡು ದಿನ ಹೆಸರು ಕಾಳು ಉಸಲಿ, ಒಂದು ದಿನ ಶೇಂಗಾ ಉಸಲಿ, ಒಂದು ದಿನ ಕಿತ್ತಲೆ, ಮೋಸಂಬಿ, ಸಪೋಟಾ ಹಣ್ಣು ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಶಿಕ್ಷಕರ ಸದನದಲ್ಲಿ ಸೋಮವಾರ ಮಧ್ಯಾಹ್ನದ ಬಿಸಿಯೂಟ ತಯಾರಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಜ್ಯದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿ ಬಾಧಿತ 10 ತಾಲ್ಲೂಕುಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶ ಒದಗಿಸುವ ಆಹಾರ ನೀಡಲು ಯೋಜನೆ ರೂಪಿಸಲಾಗಿದೆ. ತಾಲ್ಲೂಕಿನ 227 ಶಾಲೆಗಳ 10,801 ವಿದ್ಯಾರ್ಥಿಗಳು ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ. ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್ ಜತೆಗೆ ವಿದ್ಯಾರ್ಥಿಗಳಿಗೆ ನಿತ್ಯ ತಲಾ 50 ಗ್ರಾಂ ಮೊಳಕೆ ಕಾಳು ಹಾಗೂ ಒಂದು ದಿನ 150 ಗ್ರಾಂ ಹಣ್ಣು ನೀಡಲಾಗುವುದು. ವಿದ್ಯಾರ್ಥಿಗಳಲ್ಲಿನ ಅಪೌಷ್ಠಿಕತೆ, ರಕ್ತಹೀನತೆ, ಜೀವಸತ್ವಗಳ ಕೊರತೆಯನ್ನು ನೀಗಿಸುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ ಹಾಜರಾತಿ ಹೆಚ್ಚಾಗಿ ಕಲಿಕೆಯೂ, ಪರಿಣಾಮಕಾರಿಯಾಗುತ್ತದೆ ಎಂದರು.
‘ತಾಲ್ಲೂಕಿನಲ್ಲಿ 372 ಅಡುಗೆ ಸಿಬ್ಬಂದಿ ಇದ್ದು, ಅಡುಗೆ ತಯಾರಿಕೆ, ಸ್ವಚ್ಛತೆ ಕುರಿತು ತರಬೇತಿ ನೀಡಲಾಗಿದೆ. ಅಡುಗೆಯವರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು. ಶುಚಿ, ರುಚಿಯಾಗಿ ಅಡುಗೆ ಮಾಡಿ ಬಡಿಸಬೇಕು. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಅಡುಗೆ ಪರಿಕರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಹಾರ ಧಾನ್ಯ ಹಾಗೂ ತರಕಾರಿಯನ್ನು ಚೆನ್ನಾಗಿ ತೊಳೆದ ನಂತದ ಅಡುಗೆ ಮಾಡಬೇಕು’ ಎಂದು ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಎ.ಪರಮೇಶ್ವರಪ್ಪ ಸಲಹೆ ನೀಡಿದರು.
ಟಿಪಿಒ ಷೇರ್ ಅಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.