ಚಿತ್ರದುರ್ಗ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಸ್ತಾನು ಕೊಠಡಿ ಖಾಲಿಯಾಗಿರುವುದು
ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ
ಚಿತ್ರದುರ್ಗ: ಸಕಾಲಕ್ಕೆ ಸರಬರಾಜಾಗದ ಆಹಾರ ಸಾಮಾಗ್ರಿ, ಇಳಿಕೆಗಿಂತ ಏರಿಕೆಯಾಗುವ ತರಕಾರಿ ಹಾಗೂ ಮೊಟ್ಟೆ, ಅಡುಗೆ ಎಣ್ಣೆ ಬೆಲೆ, ಶಿಥಿಲಗೊಂಡ ಅಡುಗೆ ಮನೆಗಳು, ದಾಸ್ತಾನು ಕೊಠಡಿ ಇದು ಮಧ್ಯಾಹ್ನದ ಬಿಸಿಯೂಟದ ಒಂದು ಮುಖವಾದರೆ, ‘ನಿಮ್ಮಲ್ಲಿ ಅಕ್ಕಿ ಇದ್ದರೆ ಸಾಲ ಕೊಡಿ ಮುಂದಿನ ತಿಂಗಳು ಕೊಡ್ತಿವಿ’.. ‘ನಾವೇ ರಾಗಿ ಹಿಟ್ಟು ತಂದು ಇವತ್ತು ಮುದ್ದೆ ಮಾಡಿಸಿದ್ದೇವೆ, ಗೋಧಿ ನುಚ್ಚು ಖಾಲಿ ಆಗಿತ್ತು ಅದಕ್ಕೆ ಉಪ್ಪಿಟ್ಟಿನ ರವೆ ತಂದೆ ಶನಿವಾರ ಉಪ್ಪಿಟ್ಟು ಮಾಡಿಸಿದ್ದೇವೆ...ನಾವು ಶಿಕ್ಷಕರೋ ಇಲ್ಲವೋ ಅಡುಗೆ ಭಟ್ರೊ..ಕಂಟ್ರ್ಯಾಕ್ಟರೋ ಒಂದು ಗೊತ್ತಾಗುತ್ತಿಲ್ಲ’ ಇದು ಮತ್ತೊಂದು ಮುಖ.
ಬಿಸಿಯೂಟಕ್ಕೆ ಅಕ್ಕಿ, ಬೇಳೆ, ಎಣ್ಣೆ ಬಹುಮುಖ್ಯ. ಆದರೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶಾಲೆಗಳಿಗೆ ಸರಬರಾಜಾಗಿದ್ದ ಆಹಾರ ಪದಾರ್ಥಗಳು ಆಗಸ್ಟ್ ಅಂತ್ಯಕ್ಕೆ ನಿಧಾನಗತಿಯಲ್ಲಿ ಶಾಲೆ ತಲುಪುತ್ತಿವೆ. ಸಕಾಲಕ್ಕೆ ವಿತರಣೆಯಾಗದ ಕಾರಣ ಆಗಸ್ಟ್‌ನಲ್ಲಿ ಶಾಲೆಗಳ ಶಿಕ್ಷಕರು ಬಿಸಿಯೂಟ ನಿಭಾಯಿಸಲು ಪರದಾಡಿದ್ದಾರೆ. ಆದರೆ, ಎಲ್ಲಿಯೂ ಹೇಳಿಕೊಳ್ಳದ ಸ್ಥಿತಿ ನಿರ್ಮಾಣವಾಗಿರುವ ಕಾರಣ ಶಿಕ್ಷಕರಿಗೆ ಮಧ್ಯಾಹ್ನದ ಬಿಸಿಯೂಟ ಬಿಸಿತುಪ್ಪವಾಗಿದೆ.
ದಾಖಲಾತಿಯಲ್ಲಿ 80ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಆದರೆ, ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಸಮಸ್ಯೆ ಬಿಗಡಾಯಿಸಿದೆ. ನಗರದ ಶಾಲೆಗಳಲ್ಲಿ ದಾಸ್ತಾನು ಕೊಠಡಿ ಖಾಲಿಯಾಗಿವೆ. ಎರಡು ದಿನದಿಂದ ಅಕ್ಕಿ, ಬೇಳೆ, ಎಣ್ಣೆ ವಿತರಣೆಯಾದ ಕಾರಣ ಅಲ್ಲಲ್ಲಿ ತುಂಬಿದ ಚೀಲಗಳು ಕಾಣಿಸುತ್ತಿವೆ.
ತಿಂಗಳ ಪ್ರಾರಂಭದಿಂದಲೇ ಸಮೀಪದ ಶಾಲೆ, ನ್ಯಾಯಬೆಲೆ ಅಂಗಡಿಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಅಕ್ಕಿ ತಂದಿದ್ದಾರೆ. ಉಳಿದಂತೆ ತರಕಾರಿ, ತೊಗರಿ ಬೇಳೆ, ಅಡುಗೆ ಎಣ್ಣೆಯ ದರ ಏರಿಕೆಯಿಂದಾಗಿ ಮಕ್ಕಳು ತಿಳಿಸಾರು, ಅನ್ನ ಊಟ ಮಾಡಿದ್ದಾರೆ. ಕೆಲ ಶಾಲೆಗಳಲ್ಲಿ ಗೋಧಿ ನುಚ್ಚು ಖಾಲಿಯಾದ ಪರಿಣಾಮ ಶಿಕ್ಷಕರೇ ಉಪ್ಪಿಟ್ಟಿನ ರವೆ ತಂದು ಶನಿವಾರದ ಉಪಹಾರ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ರಾಗಿ ಬೆಳೆದವರ ಮನೆಯಿಂದ ರಾಗಿ ತಂದು ಹಿಟ್ಟು ಮಾಡಿಸಿ ಮುದ್ದೆ ಮಾಡಿಸಿರುವುದು ನಡೆದಿದೆ.
ಇನ್ನೂ ತರಕಾರಿ ಬೆಲೆ ಗಗನಕ್ಕೇರಿರುವುದು ಸವಾಲಾಗಿದೆ. ಸರ್ಕಾರವು ತರಕಾರಿ ಖರೀದಿಗೆ ನೀಡುವ ಅನುದಾನವೂ ಕಡಿಮೆ ಇದೆ. ಈ ಕಾರಣ ಶಿಕ್ಷಕರು ತಮ್ಮ ಜೇಬಿನಿಂದ ಹೆಚ್ಚುವರಿಯಾಗಿ ಪಾವತಿಸುತ್ತಿದ್ದಾರೆ. 1 ರಿಂದ 5ನೇ ತರಗತಿಯ ಪ್ರತೀ ವಿದ್ಯಾರ್ಥಿಗೆ ತರಕಾರಿ ಖರೀದಿಸಲು ₹ 1.61 ಹಾಗೂ 6 ರಿಂದ 10ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ₹ 2.38 ಅನುದಾನ ನೀಡುತ್ತಿದೆ. ಈಗ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಕಡಿಮೆ ಆಗಿದ್ದು, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 20 ರಿಂದ 30 ಮಕ್ಕಳು, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 60 ರಿಂದ 70 ವಿದ್ಯಾರ್ಥಿಗಳು ಓದುತ್ತಿದ್ದಾರೆ.
‘20 ಮಕ್ಕಳಿರುವ ಶಾಲೆಗೆ ತರಕಾರಿ ಖರೀದಿಗೆ ಸರ್ಕಾರದಿಂದ ಅಂದಾಜು ₹ 50 ಅನುದಾನ ಬರುತ್ತದೆ. ಇಷ್ಟು ಕಡಿಮೆ ಮೊತ್ತದಲ್ಲಿ ಅರ್ಧ ಕೆ.ಜಿ. ಟೊಮ್ಯಾಟೊ ಖರೀದಿಸಲೂ ಆಗುವುದಿಲ್ಲ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಊಟ ಕೊಡಬೇಕು ಎಂದು ಹೇಳುವ ಸರ್ಕಾರ ಪೈಸೆ ಲೆಕ್ಕದಲ್ಲಿ ಅನುದಾನ ನೀಡಿದರೆ ಹೇಗೆ’ ಎಂದು ಶಿಕ್ಷಕರೊಬ್ಬರು ಪ್ರಶ್ನಿಸುತ್ತಾರೆ.
‘ಬೀನ್ಸ್, ಕ್ಯಾರೆಟ್, ಬದನೆಕಾಯಿ, ಮೂಲಂಗಿ, ಕೋಸು, ಆಲೂಗೆಡ್ಡೆ ಸೇರಿ ಎಲ್ಲಾ ತರಕಾರಿಗಳ ದರ ಪ್ರತೀ ಕೆಜಿಗೆ ₹ 80 ದಾಟಿದೆ. ಸೊಪ್ಪುಗಳ ಬೆಲೆ ಒಂದು ಕಟ್ಟಿಗೆ ₹ 10 ಇದ್ದು, ಬಿಸಿಯೂಟ ಮಾಡಿಸುವುದೇ ಸವಾಲಾಗಿದೆ’ ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.
‘ಟೊಮ್ಯಾಟೊ ದರ ಏರಿಕೆಯಾದರೆ ಕೆಲವು ಶಾಲೆಗಳಲ್ಲಿ ಮಿತವಾಗಿ ಹುಣಸೇಹಣ್ಣು ಬಳಸುತ್ತಾರೆ. ಖಾರದ ಪುಡಿ, ಸಾಂಬಾರು ಪುಡಿಗೆಂದು ಒಬ್ಬ ವಿದ್ಯಾರ್ಥಿಗೆ 51 ಪೈಸೆ ನಿಗದಿ ಮಾಡಿದ್ದು, ಅದೂ ಕೂಡ ಸಾಕಾಗುವುದಿಲ್ಲ. ಮಕ್ಕಳಿದ್ದರೆ ನಾವು ಎನ್ನುವ ಕಾರಣಕ್ಕೆ ಸಂಬಳದ ಹಣವನ್ನು ಬಿಸಿಯೂಟಕ್ಕೆ ಬಳಕೆ ಮಾಡುತ್ತಿದ್ದೇವೆ. ಎಲ್ಲವನ್ನು ಲೆಕ್ಕ ಹಾಕುತ್ತಾ ಕುಳಿತರೆ ಬಿಸಿಯೂಟ ನಡೆಯುವುದಿಲ್ಲ. ಸಕಾಲಕ್ಕೆ ಅಕ್ಕಿ, ಬೇಳೆ, ಎಣ್ಣೆ ನೀಡಿದರೆ ಸಾಕು ಉಳಿದವನ್ನು ನಿಭಾಯಿಸುತ್ತೇವೆ’ ಎನ್ನುತ್ತಾರೆ ಶಿಕ್ಷಕರು.
ಚಿತ್ರದುರ್ಗದ ಮದಕರಿಪುರ ಲಂಬಾಣಿ ಹಟ್ಟಿ ಶಾಲೆಯಲ್ಲಿ ತರಗತಿಯೇ ಅಡುಗೆಮನೆ ಆಗಿರುವುದು
ಬಿಸಿಯೂಟಕ್ಕೂ ಬಿಸಿ ತಟ್ಟಿಸಿದ ಪಂಚ ಗ್ಯಾರಂಟಿ
ಧರ್ಮಪುರ: ಪಂಚ ಗ್ಯಾರಂಟಿಗಳ ಅನುಷ್ಠಾನದ ಆಶ್ವಾಸನೆಯನ್ನು ನೀಡಿ ಅಧಿಕಾರದ ಗದ್ದುಗೆ ಏರಿರುವ ಸರ್ಕಾರ ಅಭಿವೃದ್ಧಿಯನ್ನು ಮೂಟೆ ಕಟ್ಟಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಮಹತ್ವ ಕೊಟ್ಟಿರುವ ಪರಿಣಾಮ ಮಕ್ಕಳ ಬಿಸಿಯೂಟದ ಮಹತ್ವವನ್ನು ಮರೆತಂತಿದೆ ಎಂಬುದನ್ನು ಶಾಲೆಗಳ ಧಾನ್ಯದ ದಾಸ್ತಾನು ಕೊಠಡಿ ಸಾಕ್ಷೀಕರಿಸುತ್ತಿವೆ.
ಮಾರ್ಚ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲಿ ಬಿಸಿಯೂಟದ ಸಾಮಾಗ್ರಿಗಳ ಪೂರೈಕೆ ಕೊನೆಯಾಗಿತ್ತು. ಬಳಿಕ ಜೂನ್ ತಿಂಗಳ ಅಂತ್ಯಕ್ಕೆ ಸಾಮಾಗ್ರಿಗಳನ್ನು ನೀಡಲಾಯಿತು. ಆದರೆ ಆಗಸ್ಟ್ ಅಂತ್ಯದವರೆಗೂ ಪುನಃ ಆಹಾರ ಸಾಮಾಗ್ರಿ ಸರಬರಾಜಾಗದ ಕಾರಣ ಸಮಸ್ಯೆ ತೀವ್ರವಾಗಿದೆ. ಶಾಲೆಗಳಿಗೆ ಸಕಾಲಕ್ಕೆ ಅಕ್ಕಿ ಬೆಳೆ ಗೋಧಿ ಪೂರೈಕೆ ಇಲ್ಲದ ಕಾರಣ ಮುಖ್ಯ ಶಿಕ್ಷಕರು ಬೇರೆಡೆಯಿಂದ ವಸ್ತುಗಳನ್ನು ತರಿಸಿಕೊಂಡು ಬಿಸಿಯೂಟ ನಡೆಸಿದ್ದಾರೆ. ಆದರೆ ತಿಂಗಳಾಂತ್ಯದಲ್ಲಿ ಅಕ್ಷರ ಸಹ ಶಿಕ್ಷಕರು ಪರದಾಡಿದ್ದಾರೆ.
ಪ್ರತಿ ತಿಂಗಳು ಬಿಸಿಯೂಟದ ಆಹಾರ ಸಾಮಗ್ರಿಗಳು ಶಾಲೆಗಳಿಗೆ ಪೂರೈಕೆಯಾಗುತ್ತಿತ್ತು. ಆದರೆ ಜೂನ್ ತಿಂಗಳಿನಲ್ಲಿ ಪೂರೈಕೆಯಾದ ಆಹಾರ ಪದಾರ್ಥಗಳ ಪೂರೈಕೆ ಇನ್ನೂ ಆಗಿಲ್ಲ ಎನ್ನುತ್ತಾರೆ ಹೋಬಳಿಯ ಶಿಕ್ಷಕರು. ವಾಸ್ತವದಲ್ಲಿ ಶಾಲೆಗಳಿಗೆ ಆಹಾರ ಪದಾರ್ಥಗಳ ಕೊರತೆ ಎದುರಾಗಿದೆ. ಆದರೆ ಇದನ್ನು ಒಪ್ಪದ ಅಧಿಕಾರಿಗಳು ಕೆಲವು ಶಾಲೆಯವರು ದಾಸ್ತಾನು ಸಂಗ್ರಹದಲ್ಲಿ ಹುಳು ಬೀಳಬಹುದೆಂದು ಯೋಚಿಸಿ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಈಗ ಎರಡು ತಿಂಗಳಲ್ಲಿ ಬಿಸಿಯೂಟದ ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿದೆ ಎನ್ನುತ್ತಿದ್ದಾರೆ.
ಧರ್ಮಪುರದ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಬಯಲಿನಲ್ಲೇ ಮಧ್ಯಾಹ್ನದ ಬಿಸಿಯೂಟ ಬಡಿಸುತ್ತಿರುವುದು
ಶಾಲೆಗಳಲ್ಲಿ ಹೈರಾಣಾದ ಮುಖ್ಯಶಿಕ್ಷಕರು
ನಾಯಕನಹಟ್ಟಿ: ಹೋಬಳಿಯ ಹಲವು ಸರ್ಕಾರಿ ಶಾಲೆಗಳಿಗೆ ಕಳೆದ ಎರಡು ತಿಂಗಳಿನಿಂದ ಸಮರ್ಪಕವಾಗಿ ಬಿಸಿಯೂಟದ ಸಾಮಾಗ್ರಿಗಳು ಪೂರೈಕೆಯಾಗದಿರುವುದರಿಂದ ಮುಖ್ಯಶಿಕ್ಷಕರು ಬಿಸಿಯೂಟದ ಸಾಮಾಗ್ರಿಗಳನ್ನು ಒದಗಿಸಲು ಪರದಾಡುವಂತಾಗಿದೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಿ ಶಾಲೆಗೆ ಬರುವ ವಿದ್ಯಾರ್ಥಿಗಳ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸರ್ಕಾರ ಜಾರಿಗೆ ತಂದಿರುವ ಅಕ್ಷರ ದಾಸೋಹ ಕಾರ್ಯಕ್ರಮವು ನಾಯಕನಹಟ್ಟಿ ಹೋಬಳಿಯಲ್ಲಿ ಹಲವು ಲೋಪದೋಷಗಳಿಂದ ಕೂಡಿದೆ.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಪ್ರತಿ ಸರ್ಕಾರಿ ಶಾಲೆಗೆ ಅಕ್ಕಿ ಬೇಳೆ ಗೋಧಿ ಎಣ್ಣೆ ವಿತರಿಸುತ್ತದೆ. ಪ್ರತಿಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಒಂದನೇ ತರಗತಿಯಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ100ಗ್ರಾಂ ಅಕ್ಕಿ 100ಗ್ರಾಂ ಗೋಧಿ 20ಗ್ರಾಂ.ಬೇಳೆ 5ಗ್ರಾಂ ಎಣ್ಣೆ ಹಾಗೇ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ150ಗ್ರಾಂ ಅಕ್ಕಿ 150ಗ್ರಾಂ ಗೋಧಿ 50ಗ್ರಾಂ ಬೇಳೆ 20ಗ್ರಾಂ ಎಣ್ಣೆಯನ್ನು ಶಾಲೆ ನಡೆಯುವ ದಿನಗಳಿಗೆ ಅನುಗುಣವಾಗಿ ಲೆಕ್ಕಹಾಕಿ ವಿತರಿಸುವ ಪರಿಪಾಠವಿದೆ.
ಕಳೆದ ವರ್ಷ ಅಕ್ಷರ ದಾಸೋಹಕ್ಕೆ ಬೇಕಾದ ಎಲ್ಲಾ ಪದಾರ್ಥಗಳು ತಿಂಗಳ ಮೊದಲೇ ಸರಬರಾಜು ಆಗುತ್ತಿತ್ತು. ಆದರೆ ಈಗ ಬಹುತೇಕ ಶಾಲೆಗಳಲ್ಲಿ ಅಕ್ಕಿ ಗೋಧಿ ಕೆಲವೆಡೆ ಬೇಳೆ ಬಿಟ್ಟರೆ ಬೇರೆ ಆಹಾರ ಸಮಾಗ್ರಿಗಳು ಸರಬರಾಜಾಗಿಲ್ಲ. ತರಕಾರಿ ಮತ್ತು ದಿನಸಿ ಬೆಲೆ ಏರಿಕೆಯಾಗಿರುವುದರಿಂದ ಮುಖ್ಯ ಶಿಕ್ಷಕರು ದುಡ್ಡು ಕೊಟ್ಟರೂ ಅಡುಗೆ ಸಿಬ್ಬಂದಿ ತರಲು ಒಪ್ಪುತ್ತಿಲ್ಲ. ಹೀಗಾಗಿ ಮುಖ್ಯ ಶಿಕ್ಷಕರೇ ಬ್ಯಾಗ್ ಹಿಡಿದು ದಿನಸಿ ತರಕಾರಿ ತಂದು ಅಡುಗೆ ಬೇಯಿಸಿ ಮಕ್ಕಳಿಗೆ ಬಿಸಿಯೂಟ ಕೊಡಬೇಕಾದ ಅನಿವಾರ್ಯತೆ ಇದೆ.
ಕಳೆದ ಎರಡು ವರ್ಷಗಳಿಂದ ಎರಡು ತಿಂಗಳಿಗೊಮ್ಮೆ ಇಲ್ಲವಾದರೆ ಆಹಾರ ಸಾಮಗ್ರಿಗಳ ದಾಸ್ತಾನು ಇದ್ದಾಗ ಮಾತ್ರ ಶಾಲೆಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಅನಿಯಮಿತವಾಗಿ ವಿತರಿಸು ಆಹಾರ ಧಾನ್ಯಗಳು ಖಾಲಿಯಾದಾಗ ಮುಖ್ಯಶಿಕ್ಷಕರು ತಮ್ಮ ಪಕ್ಕದ ಶಾಲೆಯಲ್ಲೋ ಅಥವಾ ದೊಡ್ಡ ಶಾಲೆಯಲ್ಲೋ ಆಹಾರ ಸಾಮಗ್ರಿಗಳನ್ನು ಪಡೆದು ತಂದು ಇಲ್ಲವಾದರೆ ತಾವೇ ಸ್ವಂತ ಖರ್ಚಿನಲ್ಲಿ ಖರೀದಿಸಿ ಅಡುಗೆ ತಯಾರಿಸಲು ನೀಡುವ ಪರಿಸ್ಥಿತಿ ಎದುರಾಗಿದೆ.
ನಾಯಕನಹಟ್ಟಿ ಹೋಬಳಿಯ ಹಲವು ಸರ್ಕಾರಿ ಗಡಿಭಾಗ ಹಾಗೂ ಕಪಿಲೆ ಶಾಲೆಗಳಿಗೆ ಜುಲೈ ಮೊದಲ ವಾರದಲ್ಲಿ ಆಹಾರ ಸಮಾಗ್ರಿಗಳನ್ನು ವಿತರಿಸಲಾಗಿದೆ. ಆದರಲ್ಲೂ ಎಣ್ಣೆ ಇದ್ದರೆ ಬೇಳೆಯಿಲ್ಲ ಬೇಳೆಯಿದ್ದರೆ ಗೋಧಿ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿ ಅಸಮರ್ಪಕವಾಗಿ ಪೂರೈಸಲಾಗಿದೆ. ಇದರಿಂದ ಅವಧಿಗೂ ಮುನ್ನವೇ ದಿನಸಿ ಖಾಲಿಯಾಗಿ ಮುಖ್ಯಶಿಕ್ಷಕರು ಪರದಾಟ ನಡೆಸಿದ್ದಾರೆ.
ಎದುರಾಗಿದೆ ಅಡುಗೆ ಮನೆ ಸಮಸ್ಯೆ
ಹೊಸದುರ್ಗ: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಡುಗೆ ಕೋಣೆ ಸಮಸ್ಯೆ ತಾಲ್ಲೂಕಿನಲ್ಲಿ ಎದುರಾಗಿದೆ. ಕೆಲವು ಕಡೆಗಳಲ್ಲಿ ಕಿರಿದಾದ ಜಾಗಗಳಿದ್ದು ಬಿಸಿಯೂಟ ತಯಾರಿಕೆಗೆ ಸ್ಥಳಾವಕಾಶವೇ ಇಲ್ಲದಂತಾಗಿದೆ. ಒಂದೊಂದು ಶಾಲೆಗಳಲ್ಲಿ ವಿಸ್ತಾರದ ಅಡುಗೆಮನೆಗಳಿವೆ. ಆದರೆ ಇನ್ನೂ ಹಲವು ಕಡೆ ಕಿರಿದಾದ ಜಾಗವಿದೆ. ಸಾಮಾಗ್ರಿ ಅಡುಗೆ ಪರಿಕರಗಳನ್ನು ಸಹ ಇಡಲು ಸ್ಥಳವಿಲ್ಲ. ಬಾಗಿಲಿನಲ್ಲಿ ನಿಂತು ಅಡುಗೆ ಮಾಡುವಂತಹ ದುಸ್ಥಿತಿ ಉಂಟಾಗಿದೆ. ಪಟ್ಟಣದ ಅಶೋಕ ರಂಗಮಂದಿರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮನೆ ಇದ್ದು ಇಲ್ಲದಂತಾಗಿರುವ ಕಾರಣ ರಂಗಮಂದಿರದಲ್ಲಿ ನಿತ್ಯದ ಅಡುಗೆ ಸಿದ್ಧಗೊಳಿಸಲಾಗುತ್ತಿದೆ. ಇನ್ನೂ ಅಡುಗೆ ಪರಿಕರಗಳನ್ನು ಇಡಲು ಸಹ ಸೂಕ್ತ ಸ್ಥಳಾವಕಾಶ ಇಲ್ಲದಂತಾಗಿದೆ. ‘ಅಡುಗೆ ಮನೆಗಳು ಶಿಥಿಲ ಸ್ಥಿತಿಯಲ್ಲಿವೆ. ಮಳೆ ಜೋರಾದರೆ ಸೋರುತ್ತವೆ. ಸಿಲಿಂಡರ್ ಸೇರಿದಂತೆ ಇತರೆ ವಸ್ತುಗಳನ್ನು ಇಡಲು ಸ್ಥಳಾವಕಾಶವಿಲ್ಲ. ಸುಸಜ್ಜಿತ ಕೊಠಡಿ ನಿರ್ಮಿಸಿದರೆ ಅನುಕೂಲವಾಗಲಿದೆ’ ಎನ್ನುತ್ತಾರೆ ಬಿಸಿಯೂಟ ತಯಾರಕರು.
ಬಿಸಿಯೂಟಕ್ಕೆ ಎಲ್ಲಿಯೂ ಆಹಾರ ಸಾಮಾಗ್ರಿ ಕೊರತೆ ಎದುರಾಗಿಲ್ಲ. ಎರಡ್ಮೂರು ದಿನದಿಂದ ಎಲ್ಲ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ಸಾಮಾಗ್ರಿ ಕಡಿಮೆ ಬಂದ ಶಾಲೆಗಳು ಗಮನಕ್ಕೆ ತಂದ ಕೂಡಲೇ ತಲುಪಿಸಲಾಗುತ್ತಿದೆ.ಎನ್.ಅಶ್ವಥ್ ನಾರಾಯಣ್, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ
ಈ ಮೊದಲು ಪ್ರತಿ ತಿಂಗಳು ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿತ್ತು. ಈಗ ಟೆಂಡರ್ ಪ್ರಕ್ರಿಯೆ ಮೂರು ತಿಂಗಳಿಗೊಮ್ಮೆ ನಡೆಯುವುದರಿಂದ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ.ಸಿ.ಮಹೇಶ್ವರರೆಡ್ಡಿ, ಸಹಾಯಕ ನಿರ್ದೇಶಕ, ತಾಲ್ಲೂಕು ಅಕ್ಷರ ದಾಸೋಹ
ಗಡಿಭಾಗ ಹಾಗೂ ಕಪಿಲೆ ಶಾಲೆಗಳ ಮಕ್ಕಳಿಗೆ ಬಿಸಿಯೂಟ ವರದಾನವಾಗಿದೆ. ಆದರೆ ಅಸಮರ್ಪಕವಾದ ಆಹಾರ ಸಾಮಾಗ್ರಿಗಳ ಪೂರೈಕೆಯಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ಇಲಾಖೆ ಎಚ್ಚತ್ತುಕೊಳ್ಳಬೇಕು.ಬಿ.ಕಾಟಯ್ಯ, ಗ್ರಾಮಸ್ಥ, ಮಲ್ಲೂರಹಳ್ಳಿ
ಬಿಸಿಯೂಟಕ್ಕೆ ಸರಬರಾಜಾಗುವ ಸಾಮಾಗ್ರಿಗಳು ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಮಕ್ಕಳಿಂದ ಕೇಳಿ ಬರುತ್ತಿದೆ. ಹಾಗಾಗಿ ಬಿಸಿಯೂಟಕ್ಕೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸಕಾಲದಲ್ಲಿ ವಿತರಿಸಲು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು.ಬಿ.ಟಿ.ಪ್ರಕಾಶ್, ಅಧ್ಯಕ್ಷ, ರಾಷ್ಟ್ರೀಯ ಕಿಸಾನ್ ಸಂಘ ಹೋಬಳಿ ಘಟಕ
ಮಧ್ಯಾಹ್ನದ ಬಿಸಿಯೂಟಕ್ಕೆ ಗುಣಮಟ್ಟದ ಆಹಾರ ಪದಾರ್ಥ ನೀಡಬೇಕು. ಕೆಲವೊಮ್ಮೆ ಬೆಳೆ ಕಳಪೆಯಾಗಿರುವುದು ಗಮನಕ್ಕೆ ಬಂದಿದೆ. ಜತೆಗೆ ಮೊಟ್ಟೆ ಬೇಯಿಸಿ ಸಿಪ್ಪೆ ಬಿಡಿಸಲು 30 ಪೈಸೆ ನೀಡುವುದನ್ನು ಆದೇಶಗೊಳಿಸಬೇಕು.ಎನ್.ನಿಂಗಮ್ಮ, ಅಧ್ಯಕ್ಷೆ, ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕ
ಪೂರಕ ಮಾಹಿತಿ: ವಿ.ವೀರಣ್ಣ ಧರ್ಮಪುರ, ವಿ.ಧನಂಜಯ, ಎಚ್.ಡಿ. ಸಂತೋಷ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.