ADVERTISEMENT

‘ಗ್ಯಾರಂಟಿ’ ಘೋಷಣೆ ದೇಶದಲ್ಲೇ ಕ್ರಾಂತಿಕಾರಿ ಹೆಜ್ಜೆ: ಸಚಿವ ಡಿ. ಸುಧಾಕರ್

ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 13:04 IST
Last Updated 3 ಜೂನ್ 2023, 13:04 IST
ಸಚಿವರಾದ ಬಳಿಕ ಮೊದಲ ಬಾರಿಗೆ ಹಿರಿಯೂರಿಗೆ ಆಗಮಿಸಿದ ಡಿ. ಸುಧಾಕರ್ ಅವರನ್ನು ಪಕ್ಷದ ಮುಖಂಡರು ಶನಿವಾರ ಅಭಿನಂದಿಸಿದರು
ಸಚಿವರಾದ ಬಳಿಕ ಮೊದಲ ಬಾರಿಗೆ ಹಿರಿಯೂರಿಗೆ ಆಗಮಿಸಿದ ಡಿ. ಸುಧಾಕರ್ ಅವರನ್ನು ಪಕ್ಷದ ಮುಖಂಡರು ಶನಿವಾರ ಅಭಿನಂದಿಸಿದರು   

ಹಿರಿಯೂರು: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ದೇಶದಲ್ಲೇ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಹೇಳಿದರು. 

ಸಚಿವರಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಶನಿವಾರ ಆಗಮಿಸಿದ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಅದ್ದೂರಿಯಾಗಿ ಬರಮಾಡಿಕೊಂಡರು. ನಂತರ ತೇರುಮಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಹಿಂದಿನ ಬಿಜೆಪಿ ಸರ್ಕಾವು ಮಿತಿಮೀರಿ ಸಾಲಮಾಡಿ ರಾಜ್ಯವನ್ನು ದಿವಾಳಿ ಮಾಡಿತೇ ಹೊರತು ಜನತೆಗೆ ಏನೂ ಕೊಡಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಸುಮಾರು 60 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿ, ಅನ್ನಭಾಗ್ಯ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೊಡುವ ಮೂಲಕ ಹೇಳಿದ ಮಾತಿನಂತೆ ನಡೆದುಕೊಂಡಿದೆ. ಇಂತಹ ಜನಪರ ಯೋಜನೆಗಳನ್ನು ಕೊಟ್ಟರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಅವರು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿ ಬಿಜೆಪಿ ಇತ್ತು. ಆದರೆ ನಮ್ಮ ಪಕ್ಷ ನುಡಿದಂತೆ ನಡೆದುಕೊಳ್ಳುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದು, ಬಿಜೆಪಿಗರನ್ನು ಮುಟ್ಟಿನೋಡಿಕೊಳ್ಳುವಂತೆ ಮಾಡಿದೆ. ನಮ್ಮ ಬದ್ಧತೆಯನ್ನು ಇಡೀ ರಾಜ್ಯದ ಜನತೆ ಮೆಚ್ಚಿಕೊಂಡಿದೆ. ವಿರೋಧ ಪಕ್ಷಗಳ ಮುಖಂಡರು ಮೊಸರಿನಲ್ಲಿ ಕಲ್ಲು ಹುಡುಕುವ ಬದಲು, ಹೆಮ್ಮೆಪಡಲಿ ಎಂದು ಸುಧಾಕರ್ ಹೇಳಿದರು. 

ADVERTISEMENT

‘2018ರಲ್ಲಿ ಹುಳಿಯಾರು ರಸ್ತೆ ಅಗಲೀಕರಣಕ್ಕೆ ₹34 ಕೋಟಿ ಅನುದಾನ ಮಂಜೂರು ಮಾಡಿಸಿದ್ದೆ. ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ಅಗಲೀಕರಣಕ್ಕೆ ಸಹಕರಿಸುವಂತೆ ಒಪ್ಪಿಸಿದ್ದೆ. ಆದರೆ ನಂತರ ಬಂದವರು ರಸ್ತೆ ಅಗಲೀಕರಣ ಮಾಡದೆ ಹಾಲಿ ಇರುವ ರಸ್ತೆಗೆ ಇನ್ನೊಂದಿಷ್ಟು ಡಾಂಬರು ಹಾಕಲು ಮುಂದಾಗಿದ್ದರು. ಹುಳಿಯಾರು ರಸ್ತೆಯಲ್ಲಿನ ಕಟ್ಟಡಗಳ ಮಾಲೀಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು‘ ಎಂದು ಸಚಿವರು ಸ್ಪಷ್ಟಪಡಿಸಿದರು. 

ಭದ್ರಾ ಮೇಲ್ದಂಡೆ ಕಾಮಗಾರಿಗೆ ವೇಗ: ಆಮೆಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿಗೆ ವೇಗ ನೀಡಲು ಜಿಲ್ಲೆಯ ಎಲ್ಲ ಶಾಸಕರ ಜೊತೆ ಚರ್ಚಿಸಿ, ಕಾಮಗಾರಿ ಸ್ಥಗಿತಗೊಂಡಿರುವ ಸ್ಥಳದ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಡಿ. ಸುಧಾಕರ್ ಹೇಳಿದರು. 

ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದ ಸುಧಾಕರ್, ಅಕ್ರಮ ದಂಧೆಗಳಿಗೆ, ಕಾನೂನು ಸುವ್ಯವಸ್ಥೆ ಹಾಳುಗೆಡವುದಕ್ಕೆ ಅವಕಾಶ ಕೊಡುವುದಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ, ರೈತರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ವಿಶೇಷ ಯೋಜನೆಗಳನ್ನು ತಾಲ್ಲೂಕಿಗೆ ತರುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು. 

‘ಮುಖ್ಯಮಂತ್ರಿಗಳು ನನಗೆ ಒಳ್ಳೆಯ ಖಾತೆಯನ್ನೇ ಕೊಟ್ಟಿದ್ದಾರೆ. ಇದೇ ಖಾತೆಯಲ್ಲಿ ನಾಡಿನ ಜನರಿಗೆ ಸಾಧ್ಯವಾಗುವ ಎಲ್ಲ ರೀತಿಯ ಸೇವೆ ಸಲ್ಲಿಸುತ್ತೇನೆ’ ಎಂದರು. 

ಅಮೃತೇಶ್ವರ ಸ್ವಾಮಿ, ಖಾದಿ ರಮೇಶ್, ಈರಲಿಂಗೇ ಗೌಡ, ಕಂದಿಕೆರೆ ಸುರೇಶ್ ಬಾಬು, ಶಶಿಕಲಾ ಸುರೇಶ್ ಬಾಬು, ಜೆ.ಆರ್. ಅಜಯ್ ಕುಮಾರ್, ಗೀತಾ ನಾಗಕುಮಾರ್, ಟಿ. ಚಂದ್ರಶೇಖರ್, ಸುರೇಖಾಮಣಿ, ಗುರುಪ್ರಸಾದ್, ಡಾ. ಸುಜಾತ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು.

ಸಚಿವ ಸ್ಥಾನ ಸ್ವೀಕರಿಸಿದ ನಂತರ ಶನಿವಾರ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ತೇರುಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.