ಚಿತ್ರದುರ್ಗ: ತಿಂಗಳಿಗೆ ಕನಿಷ್ಠ ₹36,000 ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕ ಸೋಮವಾರ ಪ್ರತಿಭಟನೆ ನಡೆಸಿತು.
ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನಕಾರರು ಜಮಾಯಿಸಿದರು. ಕೂಡಲೇ ಕನಿಷ್ಠ ವೇತನ ಜಾರಿಗೊಳಿಸಬೇಕು, ಬೀದರ್ ಮಾದರಿಯಲ್ಲಿ ಸಹಕಾರ ಸಂಘವನ್ನು ಚಿತ್ರದುರ್ಗದಲ್ಲಿ ಪ್ರಾರಂಭಿಸಬೇಕು. ಸೊಸೈಟಿ ಮೂಲಕ ವೇತನ ಪಾವತಿಸುವ ಮೂಲಕ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಇಲಾಖೆ ನಿಯಮದ ಪ್ರಕಾರ ವಾರದ ರಜೆ, ಇಎಸ್‌ಐ, ಪಿಎಫ್ ನೀಡಬೇಕು. ಬಿಸಿಎಂ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಹಿಂದಿನಂತೆ ರಾತ್ರಿ ಕಾವಲುಗಾರರನ್ನು ನೇಮಿಸಬೇಕು. ಸಿಬ್ಬಂದಿ ಕಡಿತದ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ಗೆ ಮನವಿ ಸಲ್ಲಿಸಿದರು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಹಿರಿಯ ಉಪಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಯಶವಂತ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಪುನೀತ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.