ADVERTISEMENT

ಮಂಜು: ಮಾವು, ಅಡಿಕೆ ಬೆಳೆಗಾರರ ಆತಂಕ

ಚಿಕ್ಕಜಾಜೂರು: ಬೆಳೆಗಳಿಗೆ ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 5:09 IST
Last Updated 17 ಜನವರಿ 2023, 5:09 IST
ಚಿಕ್ಕಜಾಜೂರಿನ ಅಡಿಕೆ ತೋಟದಲ್ಲಿ ಸೋಮವಾರ ದಟ್ಟ ಮಂಜು ಆವರಿಸಿತ್ತು
ಚಿಕ್ಕಜಾಜೂರಿನ ಅಡಿಕೆ ತೋಟದಲ್ಲಿ ಸೋಮವಾರ ದಟ್ಟ ಮಂಜು ಆವರಿಸಿತ್ತು   

ಚಿಕ್ಕಜಾಜೂರು: ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಎರಡು ಮೂರು ದಿನಗಳಿಂದ ದಟ್ಟ ಮಂಜು ಬೀಳುತ್ತಿದ್ದು, ತೆಂಗು, ಅಡಿಕೆ, ಮಾವಿಗೆ ರೋಗ ತಗಲುವ ಆತಂಕ ಎದುರಾಗಿದೆ.

ಈಗಾಗಲೇ ಮಾವಿನ ಮರಗಳಲ್ಲಿ ಸೊಂಪಾಗಿ ಬಿಟ್ಟಿರುವ ಹೂವು ಮತ್ತು ಸಣ್ಣ ಈಚುಗಳಿಗೆ ಹಾನಿಯಾಗುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಸೋಮವಾರ ಗ್ರಾಮಗಳಲ್ಲಿ ದಟ್ಟ ಮಂಜು ಮುಸುಕಿತ್ತು. 15–20 ಅಡಿ ಅಂತರದಲ್ಲಿನ ದೃಶ್ಯ ಅಸ್ಪಷ್ಟವಾಗಿ ಕಾಣುತ್ತಿತ್ತು.

ADVERTISEMENT

ಹಲವು ಸಮಯದವರೆಗೆ ಮಂಜು ಬಿದ್ದರೆ, ತೆಂಗು ಹಾಗೂ ಅಡಿಕೆ ಮರಗಳಲ್ಲಿ ಬಿಟ್ಟ ಹೊಂಬಾಳೆ, ಈಚುಗಳು ಉದುರಿ ಇಳುವರಿ ಕುಂಠಿತವಾಗುತ್ತದೆ. ಇಬ್ಬನಿಯ ನೀರು ಗಿಡದಲ್ಲಿ ತುಂಬಾ ಸಮಯ ಇರುವುದರಿಂದ ಅಡಿಕೆ ಮತ್ತು ತೆಂಗಿನ ಈಚುಗಳು ಉದುರುತ್ತಿವೆ. ಇದರಿಂದ ಇಳುವರಿ ಕುಸಿತವಾಗಲಿದೆ ಎಂದು ರೈತರಾದ ಲೋಕೇಶ್‌, ಬಸವರಾಜಪ್ಪ, ಉಮಾಪತಿ, ನಾಗರಾಜ್‌, ನಟರಾಜ್‌, ದಿವಾಕರ್‌, ಶಂಕರ್‌, ಶಿವಕುಮಾರ್‌ ಹೇಳಿದರು.

‘ಎರಡು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಮಾವಿನ ಮರದಲ್ಲಿ ಹೂವು ಬಿಟ್ಟಿರಲಿಲ್ಲ. ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆಗಳು ಉತ್ತಮವಾಗಿ ಬಂದಿದ್ದರಿಂದ ಚೆನ್ನಾಗಿ ಹೂವು ಬಿಟ್ಟಿವೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದೆವು. ಈಗ ಇಬ್ಬನಿ ಬಿದ್ದಿದ್ದರಿಂದ, ಬೂದಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಮಾವು ಬೆಳೆಗಾರರಾದ ವೀರೇಶ್‌, ಮುಕಂದಪ್ಪ, ಹನುಮಂತಪ್ಪ, ಅನಂತಯ್ಯ, ಸಿದ್ಧಪ್ಪ, ಶ್ರೀನಿವಾಸ್‌, ಮಲ್ಲಿಕಾರ್ಜುನಾಚಾರಿ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.