
ಚಿತ್ರದುರ್ಗ: ‘ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಆದರೆ ದೇಶ ವಿಭಜನೆಗೆ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ ಕಾರಣ. ಇದರ ಬಗ್ಗೆ ತಿಳಿದು ಪಕ್ಷದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಸರಿಯಾದ ಉತ್ತರ ನೀಡಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ತಿಳಿಸಿದರು.
ಇಲ್ಲಿನ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್, ಜನಸಂಘ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಅವರು ಬ್ರಿಟಿಷರ ಜೊತೆ ಸೇರಿಕೊಂಡಿದ್ದರು. ಆದರೆ ಈಗ ನಮಗೆ ದೇಶಭಕ್ತಿಯನ್ನು ಹೇಳಿಕೊಡುತ್ತಾರೆ’ ಎಂದು ಕಿಡಿಕಾರಿದರು.
‘ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದಾಗ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಉದ್ದೇಶದಿಂದ ಮಹಾನ್ ನಾಯಕರು ಸೇರಿ ಕಾಂಗ್ರೆಸ್ ಹುಟ್ಟು ಹಾಕಿದರು. ಈ ಮೂಲಕ ದೇಶವನ್ನು ಸಂಕೋಲೆಯಿಂದ ಹೊರತಂದರು. ದೇಶದಲ್ಲಿ ಬದಲಾವಣೆ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಗಾಂಧಿ ಹೆಸರು ಅಳಿಸಲು ಬಿಡಬಾರದು. ನಾವೆಲ್ಲರು ಒಟ್ಟಾಗಿ ಹೋರಾಟ ಮಾಡಬೇಕು’ ಎಂದರು.
‘ನಾವೆಲ್ಲರೂ ಕಾಂಗ್ರೆಸ್ ಅನ್ನೋದು ಹೆಮ್ಮೆಯ ವಿಚಾರ. ಜೈ ಜವಾನ್ ಜೈ ಕಿಸಾನ್ ಅಂತ ಹೇಳಿದ ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಸಾಮಾಜಿಕ ಕ್ರಾಂತಿಯ ರೂವಾರಿಗಳಾಗಿದ್ದಾರೆ. ಗರೀಬಿ ಹಠಾವೋ, 20 ಅಂಶದ ಕಾರ್ಯಕ್ರಮ ರೂಪಿಸುವ ಜತೆಗೆ ಆಹಾರದಲ್ಲಿ ಸ್ವಾವಲಂಬನೆ ತಂದರು’ ಎಂದು ತಿಳಿಸಿದರು.
‘ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ, ಸಹಬಾಳ್ವೆ ಕಲ್ಪಿಸಲಾಗಿದೆ. ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಹಲವು ಕೂಡುಗೆ ನೀಡಿದೆ. ಶಿಕ್ಷಣಕ್ಕಾಗಿ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ’ ಎಂದರು.
‘ಅಂದು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಕಾಂಗ್ರೆಸ್ ಇಂದು ಬಿಜೆಪಿಯ ವಿರುದ್ಧ ಹೋರಾಟ ನಡೆಸಬೇಕಿದೆ. ಬಿಜೆಪಿ ಧರ್ಮ, ಜಾತಿ ಜಾತಿಗಳ ಮಧ್ಯೆ ಕಿತ್ತಾಟವನ್ನು ತಂದಿಟ್ಟು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದರೆ ಬಿಜೆಪಿ ಪ್ರಜಾಪ್ರಭುತ್ವದ ಅಳಿವಿಗೆ ಹೆಜ್ಜೆ ಇಟ್ಟಿದೆ’ ಎಂದು ಕೆಪಿಸಿಸಿ ವಕ್ತಾರ ಬಾಲರಾಜ್ ಯಾದವ್ ದೂರಿದರು.
ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿಗೌಡ, ಮುಖಂಡರಾದ ಸಾಧಿಕ್, ಮಧುಗೌಡ, ಮಂಜುನಾಥ್ ಇದ್ದರು.
ಬಿಜೆಪಿ ನಾಯಕರು ಧರ್ಮ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವುದರ ಮೂಲಕ ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಎಲ್ಲಾ ಸಮುದಾಯದ ಹಿತಾಸಕ್ತಿ ಕಾಯುತ್ತಿದೆ.–ಆರ್.ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಗ್ಯಾರಂಟಿ ಯೋಜನಾ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.