
ಚಿತ್ರದುರ್ಗ: ‘ದೇಶ ಮತ್ತು ರಾಜ್ಯದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಯುವಶಕ್ತಿಗೆ ಆಸರೆಯಾಗುತ್ತಿದೆ’ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
‘ಪರ್ವತ ಏರಬೇಕಾದರೆ ಮೊದಲ ಹೆಜ್ಜೆ ಅಗತ್ಯ. ಹಾಗೆಯೇ ಉದ್ಯೋಗದ ವಿಷಯದಲ್ಲೂ ಯುವಕರು ಹಿಂಜರಿಯದೆ ಮೊದಲು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು’ ಎಂದರು.
‘ಮೇಳದಲ್ಲಿ ಉದ್ಯೋಗ ಸಿಕ್ಕ ಆರಂಭದಲ್ಲಿ ಸಂಬಳ ಕಡಿಮೆ ಇರಬಹುದು ಅಥವಾ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರಬಹುದು. ಆದರೆ, ಯುವಕರು ಹೊಂದಿಕೊಳ್ಳಬೇಕು. ಖಾಸಗಿ ಕಂಪನಿಗಳಲ್ಲಿ ಶಿಸ್ತು ಮತ್ತು ಪರಿಶ್ರಮ ಬಹಳ ಮುಖ್ಯ. ಅಲ್ಲಿ ಸರ್ಕಾರಿ ಕೆಲಸದಂತೆ ಸೋಮಾರಿತನಕ್ಕೆ ಅವಕಾಶವಿರುವುದಿಲ್ಲ’ ಎಂದು ಎಚ್ಚರಿಸಿದರು.
‘ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ. ಮುಂದಿನ ಹೊಣೆಗಾರಿಕೆ ಯುವಪೀಳಿಗೆಯದ್ದು, ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳುವ ಸಮಯ ಬಂದಿದೆ’ ಎಂದು ತಿಳಿಸಿದರು.
‘ಶಾಸಕನಾಗಿ 2015–16ರಲ್ಲಿ ಚಳ್ಳಕೆರೆ ನಗರದಲ್ಲಿ ನಾವು ನಡೆಸಿದ ಉದ್ಯೋಗ ಮೇಳದಲ್ಲಿ ಸುಮಾರು 150 ಕಂಪನಿಗಳು ಭಾಗವಹಿಸಿದ್ದವು ಮತ್ತು 13,000 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದರು. 8,000 ದಿಂದ 9,000 ಜನರಿಗೆ ಉದ್ಯೋಗ ಲಭಿಸಿತ್ತು’ ಎಂದು ಸ್ಮರಿಸಿದರು.
‘ಉದ್ಯೋಗ ಮೇಳ ಆರಂಭವಾದ ಕೆಲವೇ ಗಂಟೆಗಳಲ್ಲಿ 575 ಅಭ್ಯರ್ಥಿಗಳ ಸಂದರ್ಶನ ಪೂರ್ಣಗೊಂಡಿದ್ದು, ಈ ಪೈಕಿ 145 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಗಿದೆ. ಇದರ ಹೊರತಾಗಿ ಇನ್ನೂ 180 ಅಭ್ಯರ್ಥಿಗಳನ್ನು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ’ ಎಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆಕಾಶ್ ತಿಳಿಸಿದರು.
‘ಮೇಳದಲ್ಲಿ 32 ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಿದ್ದು, ಅವರಲ್ಲಿ 6 ಜನರಿಗೆ ಉದ್ಯೋಗ ಖಚಿತವಾಗಿದೆ. ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಪ್ರತಿಯೊಬ್ಬರಿಗೂ ಅವರ ವಿದ್ಯಾರ್ಹತೆಗೆ ತಕ್ಕಂತೆ ಅವಕಾಶಗಳಿವೆ. ಕನಿಷ್ಠ 10 ಕಂಪನಿಗಳಲ್ಲಾದರೂ ಸಂದರ್ಶನ ಎದುರಿಸಲು ಪ್ರಯತ್ನಿಸಿ’ ಎಂದು ತಿಳಿಸಿದರು.
‘ಯಾರ ಮನೆ ಬಾಗಿಲಿಗೂ ಉದ್ಯೋಗ ನೇರವಾಗಿ ಬರುವುದಿಲ್ಲ. ಸರ್ಕಾರವು ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಯುವಜನತೆಗೆ ಅವರ ಪ್ರತಿಭೆಗೆ ತಕ್ಕ ಉದ್ಯೋಗವನ್ನು ಹುಡುಕಿಕೊಳ್ಳಲು ವೇದಿಕೆ ಕಲ್ಪಿಸಿದೆ. ಕೇವಲ ಪದವಿ ಪಡೆದರೆ ಸಾಲದು, ಯುವಕರು ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಉಪನಿರ್ದೇಶಕ ಮಂಜುನಾಥ್, ಉದ್ಯೋಗಾಧಿಕಾರಿ ರವೀಂದ್ರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ ಇದ್ದರು.
ಯುವನಿಧಿ ಯೋಜನೆ ಕೇವಲ ತಾತ್ಕಾಲಿಕ ವ್ಯವಸ್ಥೆಯಷ್ಟೇ. ಯುವಕರು ಇದರ ಮೇಲೆಯೇ ಅವಲಂಬಿತರಾಗದೆ ಇಂತಹ ಉದ್ಯೋಗ ಮೇಳದ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು.ಟಿ.ರಘುಮೂರ್ತಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.