
ಚಳ್ಳಕೆರೆ: ಕಲಿಕೆಗೆ ಪೂರಕವಾದ ಮೂಲಸೌಲಭ್ಯ ಒದಗಿಸುವುದರಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಾಗಲಿದೆ ಎಂದು ನಿರೀಕ್ಷಿಸಿದ್ದೇನೆ. ವಾರಕ್ಕೊಮ್ಮೆ ಎಲ್ಲ ವಿದ್ಯಾರ್ಥಿಗಳ ಕಲಿಕಾ ಪಗ್ರತಿ ಪರಿಶೀಲಿಸಿ ಫಲಿತಾಂಶ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಶಾಸಕ ಟಿ.ರಘುಮೂರ್ತಿ ಉಪನ್ಯಾಸಕರಿಗೆ ಸಲಹೆ ನೀಡಿದರು.
ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಎನ್‍ಎಸ್‍ಎಸ್, ಕ್ರೀಡೆ, ರೋವರ್ಸ್, ರೆಡ್‍ಕ್ರಾಸ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಟಿಪ್ಪಣಿ ಪುಸ್ತಕಗಳ ಪರಿಶೀಲಿಸುವುದು ಹಾಗೂ ವಿಷಯವಾರು ಪ್ರಶ್ನೆಗಳನ್ನು ಕೇಳುತ್ತಾ ನಿಗಾ ಇಡುವುದರಿಂದ ವಿದ್ಯಾರ್ಥಿಗಳು ತಾನಾಗಿಯೇ ಕಲಿಯುತ್ತಾರೆ ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ನಿರ್ದೇಶಕ ತಿಮ್ಮಯ್ಯ ಮಾತನಾಡಿ, ಪರೀಕ್ಷಾ ಫಲಿಂತಾಂಶ ಹೆಚ್ಚಿಸುವ ಸಲುವಾಗಿ ಕಾಲೇಜು ಹಂತದಲ್ಲಿ ಕಿರುಪರೀಕ್ಷೆ, ಉಪನ್ಯಾಸಕರಿಗೆ ವಿಷಯವಾರು ತರಬೇತಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಚಟುವಟಿಕೆಗೆ ಆಡಿಟೋರಿಯಂ ನಿರ್ಮಿಸಿಕೊಡಬೇಕು ಎಂದು ಪ್ರಾಂಶುಪಾಲ ರಾಜು ಶಾಸಕರಲ್ಲಿ ಮನವಿ ಮಾಡಿದರು.
ಮೊಳಕಾಲ್ಮೂರು ಕಾಲೇಜಿನ ಪ್ರಾಂಶುಪಾಲ ಗೋವಿಂದಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಟಿ.ವೀರೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಸ್.ಲಕ್ಷ್ಮಣ್, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಜಿಲ್ಲಾ ಸಂಚಾಲಕಿ ಬಿ.ಶಾಂತಕುಮಾರಿ ಮಾತನಾಡಿದರು.
ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ ಜಾನಪದ ಕಲಾವಿದ ನನ್ನಿವಾಳ ಪೂಜಾರಿ ಹನುಮಂತಪ್ಪ ಅವರನ್ನು ಶಾಸಕ ಟಿ.ರಘುಮೂರ್ತಿ ಸನ್ಮಾನಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿದ್ದಾಪುರ ಮಂಜುನಾಥ್, ಗುರುನಾಥ ಗುಪ್ತ, ಚನಗಾನಹಳ್ಳಿ ರುದ್ರಮುನಿ, ನಗರಂಗೆರೆ ದ್ಯಾಮಣ್ಣ, ಉಪನ್ಯಾಸಕ ಶ್ರೀನಿವಾಸ್, ಜಬಿವುಲ್ಲಾ, ಬೆಳಗಟ್ಟ ನಾಗರಾಜ, ತಿಪ್ಪೇಸ್ವಾಮಿ, ಲೋಹಿತೇಶ್ವರಪ್ಪ ಇದ್ದರು.