ADVERTISEMENT

‘ಕೈ’ಕೋಟೆಯಲ್ಲಿ ‘ಕಮಲ’ ಅರಳುವ ಉಮೇದು

ಚಿತ್ರದುರ್ಗ– ದಾವಣಗೆರೆ: ಕಾಂಗ್ರೆಸ್‌–ಬಿಜೆಪಿ ನಡುವೆ ಸಮಬಲದ ಪೈಪೋಟಿ

ಜಿ.ಬಿ.ನಾಗರಾಜ್
Published 5 ಡಿಸೆಂಬರ್ 2021, 22:42 IST
Last Updated 5 ಡಿಸೆಂಬರ್ 2021, 22:42 IST
ಕೆ.ಎಸ್‌.ನವೀನ್‌
ಕೆ.ಎಸ್‌.ನವೀನ್‌   

ಚಿತ್ರದುರ್ಗ: ಕಲ್ಲಿನಕೋಟೆಯಲ್ಲಿ ‘ಕಮಲ’ ಅರಳಿಸಿದ ಉಮೇದಿನಲ್ಲಿರುವ ಬಿಜೆಪಿ, ವಿಧಾನಪರಿಷತ್‌ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸುವ ವಿಶ್ವಾಸದಿಂದ ಮುನ್ನುಗ್ಗುತ್ತಿದೆ. ಪ್ರಬಲ ಪ್ರತಿರೋಧ ತೋರುತ್ತಲೇ ಸಶಕ್ತವಾಗುವ ಆಶಾಭಾವದೊಂದಿಗೆ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್‌ ಸೆಣಸಾಡುತ್ತಿದೆ. ಕಾಂಗ್ರೆಸ್‌–ಬಿಜೆಪಿ ಸಮಬಲದ ಪೈಪೋಟಿಗೆ ಪಕ್ಷೇತರ ಅಭ್ಯರ್ಥಿ ಸಾಕ್ಷಿಯಾಗಿದ್ದಾರೆ.

ಚಿತ್ರದುರ್ಗ ಹಾಗೂ ದಾವಣಗೆರೆ (ದಾವಣಗೆರೆ, ಜಗಳೂರು, ಹರಿಹರ ತಾಲ್ಲೂಕು) ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ ಎರಡೂ ಜಿಲ್ಲೆಗಳಲ್ಲಿ ಕದನ ಕುತೂಹಲ ಮೂಡಿಸಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌ ಅವರು ‘ಕಮಲ’ ಪಡೆಯಿಂದ ಅಖಾಡಕ್ಕೆ ಇಳಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿ.ಸೋಮಶೇಖರ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರರಾಗಿ ಹನುಮಂತಪ್ಪ ಕಣದಲ್ಲಿದ್ದಾರೆ. ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಕಾಂಗ್ರೆಸ್‌ನ ಜಿ.ರಘು ಆಚಾರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಎರಡು ಬಾರಿ ಸೋಲು ಕಂಡಿದ್ದ ಕೆ.ಎಸ್‌.ನವೀನ್‌ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ಬಿಜೆಪಿ, ಅನುಕಂಪದ ದಾಳ ಉರುಳಿಸಿದೆ. ಎಂಟು ಶಾಸಕರು, ಇಬ್ಬರು ಸಂಸದರು ಇವರ ಬೆನ್ನಿಗಿರುವುದರಿಂದ ದೃಢ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅಭ್ಯರ್ಥಿಯೊಂದಿಗೆ ಕೆಲ ಶಾಸಕರು ಹೊಂದಿದ್ದ ಭಿನ್ನಾಭಿಪ್ರಾಯಗಳನ್ನು ಬಿಜೆಪಿ ವರಿಷ್ಠರು ನಿವಾರಿಸಿದಂತೆ ಕಾಣುತ್ತಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ ಪಕ್ಷದ ಪ್ರತಿಷ್ಠೆ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

ADVERTISEMENT

ಗ್ರಾಮ ಪಂಚಾಯಿತಿಯಿಂದ ಬೆಳೆದು ಬಂದಿರುವ ಬಿ.ಸೋಮಶೇಖರ ‘ಹೊರಗಿನ ಅಭ್ಯರ್ಥಿ’ ಎಂಬ ಆರೋಪ ಎದುರಿಸುತ್ತಿದ್ದಾರೆ. ಮೂವರು ಶಾಸಕರು ಹಾಗೂ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ನಾಯಕರು ಜೊತೆಗಿದ್ದಾರೆ. ಮಾಜಿ ಸಚಿವ ಎಚ್.ಆಂಜನೇಯ ಸಾರಥ್ಯದ ಕಾಂಗ್ರೆಸ್‌ ಪಡೆಯು ಬಿಜೆಪಿಯ ‘ಆಡಳಿತ ವೈಫಲ್ಯ’ವನ್ನು ಮತದಾರರಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರ ಮೊಟಕುಗೊಳಿಸಲು ಬಿಜೆಪಿ ಹುನ್ನಾರ ನಡೆಸಿದೆ ಎಂಬ ಅಸ್ತ್ರ ಪ್ರಯೋಗಿಸಿದೆ.

ಹಲವು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜೆಡಿಎಸ್‌ ತಟಸ್ಥವಾಗಿದೆ. ಹಿರಿಯೂರು, ಚಿತ್ರದುರ್ಗ ಮತ್ತು ಹರಿಹರ ತಾಲ್ಲೂಕುಗಳಲ್ಲಿ ಪ್ರಭಾವ ಇಟ್ಟುಕೊಂಡಿರುವ ಜೆಡಿಎಸ್‌ ತಳೆಯುವ ನಿಲುವು ಅಭ್ಯರ್ಥಿ ಗೆಲುವು ನಿರ್ಧರಿಸುವ ಸಾಧ್ಯತೆ ಇದೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿರುವ ಜೆಡಿಎಸ್‌ ಸದಸ್ಯರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಮತದಾನದ ಹಕ್ಕು ಹೊಂದಿರುವ ಸ್ಥಳೀಯ ಸಂಸ್ಥೆಗಳ ಸದಸ್ಯರು ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷ ನಿಷ್ಠೆ ಪ್ರದರ್ಶಿಸಿದ್ದು ಕಡಿಮೆ ಎಂಬುದು ಕ್ಷೇತ್ರದ ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.