ADVERTISEMENT

ಹೊಸದುರ್ಗ | ಮೊಬೈಲ್ ಬಳಕೆ ಹಿತ ಮಿತವಾಗಿರಲಿ: ಪ್ರಭಾ ಮಲ್ಲಿಕಾರ್ಜುನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:02 IST
Last Updated 7 ನವೆಂಬರ್ 2025, 6:02 IST
ಸಾಣೇಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು
ಸಾಣೇಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು   

ಹೊಸದುರ್ಗ: ಇಂದಿನ ದಿನಮಾನಗಳಲ್ಲಿ ಮೊಬೈಲ್ ದಿನನಿತ್ಯದ ಸಂಗಾತಿಯಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಏಕಾಗ್ರತೆ ಕೊರತೆ, ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಮಕ್ಕಳು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕೊಡಿ. ಸಮಾಜಮುಖಿ ಕನಸ್ಸನ್ನು ಅವರಿಗೆ ಬಿತ್ತಬೇಕು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ ಕಿವಿಮಾತು ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಂತರಂಗದ ಶುದ್ಧಿ ಮಾಡಿಕೊಳ್ಳಲು ಹಾಗೂ ಮನಸ್ಸಿನ ಕನ್ನಡಿ ನೋಡಿಕೊಳ್ಳಲು ನಾಟಕಗಳು ಸಹಕಾರಿಯಾಗುತ್ತವೆ. ಶಿವಸಂಚಾರ ತಂಡ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನಾಟಕ ಪ್ರದರ್ಶನ ಮಾಡಿದೆ. ಜಗತ್ತಿನಿಂದ ಬಯಸುವ ಬದಲಾವಣೆ ಮೊದಲು ನಮ್ಮಲ್ಲಿ ಆಗಬೇಕು. ನಡೆ, ನುಡಿ, ಆಚಾರ, ವಿಚಾರಗಳಲ್ಲಿ ಸಮಾನತೆಯ ಮೂಲಕ ಆಂತರಿಕ ಸೌಂದರ್ಯ ಶುದ್ಧವಾಗಿರಬೇಕು. ಉತ್ತಮ ನಾಯಕನಾಗುವ ಜೊತೆಗೆ ಉತ್ತಮ ಹಿಂಬಾಲಕರೂ ಆಗಬೇಕು ಎಂದು ಹೇಳಿದರು.

ಬಸವಣ್ಣ ಅವರನ್ನು ಇಡೀ ಭಾರತದ ಸಾಂಸ್ಕೃತಿಕ ನಾಯಕ ಎಂದು ಕೇಂದ್ರ ಸರ್ಕಾರ ಘೋಷಿಸುವಂತ ಕಾರ್ಯ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮನವಿ ಮಾಡಬೇಕು. ಹಾಗಾದರೆ ಮುಂದಿನ ನಾಟಕೋತ್ಸವದಲ್ಲಿ ಎಂಎಲ್‌ಸಿ ಕೆ.ಎಸ್. ನವೀನ್ ಅವರಿಗೆ ನಾಟಕೋತ್ಸವದಲ್ಲಿ ಅಭಿನಂದನೆ ಸಲ್ಲಿಸಲಾಗುವುದು. ಧರ್ಮ ಸುಗಮವಾಗಿ ನಡೆಯಲು ಸಂಸ್ಕೃತಿ, ಸದಾಚಾರ, ಸನ್ಮಾರ್ಗ ಬಹುಮುಖ್ಯ. ಬಸವಣ್ಣನವರ ಅನುಯಾಯಿಗಳು 800 ರಿಂದ 900 ವರ್ಷ ಕಳೆದರೂ ಅವರ ಅನುಯಾಯಿಗಳು ಸಂಸ್ಕೃತಿ ಬಿಟ್ಟುಕೊಟ್ಟಿಲ್ಲ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.

ADVERTISEMENT

ಮಾನವರು ಕೋಪ ಮದ ಮತ್ಸರ ಬೆಳೆಸಿಕೊಂಡರೆ ದುರ್ಬಲರಾಗುತ್ತಾರೆ. ಪ್ರೀತಿ, ಸಹಕಾರ, ಅನುಭೂತಿ. ಆತ್ಮಸ್ಥೈರ್ಯವಿದ್ದರೆ ಸಬಲರಾಗುತ್ತಾರೆ. ಆತ್ಮಾವಲೋಕನ ಇರಬೇಕು. ಶರಣರು ವಚನಗಳಂತೆ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. 12ನೇ ಶತಮಾನದಲ್ಲಿ ವ್ಯಕ್ತಿಯ ಆದರ್ಶಕ್ಕೆ ಗೌರವವಿತ್ತು. ಎಲ್ಲಾ ಧರ್ಮಗಳು ಸತ್ಯವನ್ನೇ ಹೇಳುತ್ತವೆ. ಎಲ್ಲಾ ಧರ್ಮಗಳ ಮೂಲ ಧಯೆ ಎಂಬುದಾಗಿದೆ. ಪ್ರಸ್ತುತ ಪ್ರಮಾಣಿಕತೆ, ಭಾಷೆ ಇವು ಕೇವಲ ಬರವಣಿಗೆಯ ಸರಕಾಗಿದೆ ಎಂದು ಪಂಡಿತರಾಧ್ಯ ಶಿವಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ವಚನ ಟಿ.ವಿ ನಿರ್ದೇಶಕ ಸಿದ್ದು ಯಾಪಲಪರವಿ, ಧರ್ಮ, ಸಂಸ್ಕೃತಿ, ಸಂಸ್ಕಾರ ಕುರಿತು ಮಾತನಾಡುತ್ತಾ, ಫಲವತ್ತಾದ ಮರಕ್ಕೆ ಹೆಚ್ಚು ಕಲ್ಲು ಒಡೆಯುತ್ತಾರೆ. ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಅವರಿಗೆ ಟೀಕೆ ಬಂದಾಗ ಹಿಂಜರಿಯಬೇಡಿ. ಅವರೊಂದು ಫಲವತ್ತಾದ ಮರವಿದ್ದಂತೆ.  ಸತ್ಯ ಪ್ರತಿಪಾದಕರಾಗಬೇಕೇ ಹೊರತು, ದುರ್ಬಲರಾಗಿರಬಾರದು ಎಂದು ಹೇಳಿದರು.

ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೇಖರಗೌಡ ಮಾಲಿ ಪಾಟೀಲ ಅವರನ್ನು ಅಭಿನಂದಿಸಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಧನಂಜಯ ಸರ್ಜಿ, ತರಿಕೆರೆ ಮಾಜಿ ಶಾಸಕ ಡಿ.ಎಸ್. ಸುರೇಶ್, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಎಚ್.ಎಸ್ ಶಿವಕುಮಾರ್, ಬೆಂಗಳೂರಿನ ನಾಟಕ ಅಕಾಡೆಮಿ ರಿಜಿಸ್ಟಾರ್ ನೀಲಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಮಿ ಎಂ. ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಸಾಣೇಹಳ್ಳಿ ಗ್ರಾಮಸ್ಥರು ಹಾಗೂ ಮಠದ ಭಕ್ತರಿದ್ದರು.

ಸಾಣೇಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ ಕಾರ್ಯಕ್ರಮದಲ್ಲಿ ಪಂಡಿತರಾಧ್ಯ ಶಿವಚಾರ್ಯ ಸ್ವಾಮೀಜಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.