ADVERTISEMENT

ವಾರದ ಸಂತೆಗೆ ಬೇಕು ಹೈಟೆಕ್‌ ಸ್ಪರ್ಶ

ಹೊಸದುರ್ಗ: ಅಂಗಡಿ ಬದಿಯಲ್ಲಿ ವ್ಯಾಪಾರ l ಬಿಸಿಲು ಮಳೆಗಿಲ್ಲ ರಕ್ಷಣೆ

ಶ್ವೇತಾ ಜಿ.
Published 11 ಏಪ್ರಿಲ್ 2022, 4:56 IST
Last Updated 11 ಏಪ್ರಿಲ್ 2022, 4:56 IST
ಶೃತಿ
ಶೃತಿ   

ಹೊಸದುರ್ಗ: ಪಟ್ಟಣದ ಖಾಸಗಿ ಬಸ್‌ ನಿಲ್ಲಾಣದ ಪಕ್ಕದ ಜಾಗದಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆ ಸುಸಜ್ಜಿತ ಮೈದಾನ, ಕುಡಿಯುವ ನೀರು ಸೇರಿ ಹಲವು ಸೌಲಭ್ಯಗಳ ಕೊರತೆ ಇದೆ.

ಸುತ್ತಮುತ್ತಲ 30-40 ಹಳ್ಳಿಗಳ ಜನರು ಈ ಸಂತೆಗೆ ಬರುತ್ತಾರೆ. ಎಲ್ಲಾ ಅಂಗಡಿಗಳಲ್ಲೂ ಜನ ತುಂಬಿರುತ್ತಾರೆ. ಖಾಸಗಿ ಬಸ್‌ ನಿಲ್ದಾಣದ ಪಕ್ಕದಲ್ಲೇ ವಾರದ ಸಂತೆ ನಡೆಯುವುದರಿಂದ ಪಟ್ಟಣದ ಸುತ್ತಮುತ್ತಲ ಜನರು ಸಂತೆಗೆ ಬಂದು ವಾರಕ್ಕೆ ಆಗುವಷ್ಟು ಸೊಪ್ಪು, ತರಕಾರಿ, ದಿನಸಿಗಳನ್ನು ಖರೀದಿಸುತ್ತಾರೆ. ರೈತರ ಉಳುಮೆಗೆ ಕೃಷಿ ಪರಿಕರಗಳು, ಮನೆಗೆ ಅಗತ್ಯವಿರುವ ದಿನಸಿ, ಒಣಮೀನು, ಬಿದಿರು ಪುಟ್ಟಿ ಸೇರಿ ಹಲವು ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಹೆಚ್ಚಿನ ವ್ಯಾಪಾರಿಗಳು ಬರುವುದರಿಂದ ಮೂಲಸೌಲಭ್ಯ ಕಲ್ಪಿಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ.

ರಸ್ತೆ ಬದಿಯಲ್ಲೇ ಮಾರಾಟ: ಸಂತೆ ಮೈದಾನಕ್ಕೆ ನಿರ್ದಿಷ್ಟ ಮೈದಾನವಿಲ್ಲದೇ ಇರುವುದರಿಂದ ರಸ್ತೆ ಬದಿಯಲ್ಲೇ ಅಂಗಡಿಗಳ ಮುಂದೆಯೇ ಸಿಕ್ಕಸಿಕ್ಕಲ್ಲಿ ವ್ಯಾಪಾರ ಶುರು ಮಾಡುತ್ತಾರೆ. ಇದರಿಂದಾಗಿ ಅಂಗಡಿಗಳಿಗೆ ಹೋಗುವವರಿಗೆ ತೊಂದರೆಯಾಗುತ್ತಿದೆ. ವ್ಯಾಪಾರಿಗಳಿಗೆ ಬಿಸಿಲು ಹಾಗೂ ಮಳೆ ಬಂದರೆ ಯಾವುದೇ ರಕ್ಷಣೆಯಿಲ್ಲ. ಖಾಸಗಿ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಬಳಸುತ್ತಿರುವ ಇವರಿಗೆ ಒಂದು ಪ್ರತ್ಯೇಕ ಶೌಚಾಲಯದ ಅಗತ್ಯವಿದೆ.

ADVERTISEMENT

ಬೇಸಿಗೆ ಕಾಲದಲ್ಲಿ ತರಕಾರಿ ಮತ್ತು ಹೂವುಗಳನ್ನು ರಕ್ಷಣೆಗೆ ಯಾವುದೇ ಹೊದಿಕೆ ಇಲ್ಲದ ಕಾರಣ ಸಂಜೆಯಾಗುವಷ್ಟರಲ್ಲಿ ತರಕಾರಿ ಒಣಗಿ ಹೂ ಬಾಡುತ್ತವೆ. ಇನ್ನೂ ಕುಡಿಯುವ ನೀರಿಗೆ ಹಾಹಾಕಾರವಿರುತ್ತದೆ. ವ್ಯಾಪಾರಿಗಳು ತರುವ 1ರಿಂದ 2 ಲೀಟರ್‌ ನೀರು ಮಧ್ಯಾಹ್ನದೊಳಗೆ ಖಾಲಿಯಾಗುತ್ತದೆ. ನಂತರ ನೀರಿಗಾಗಿ ಅಲೆದಾಡಬೇಕು. ಇಲ್ಲವೇ ಜ್ಯೂಸ್‌ ಕುಡಿದು ದಾಹ ತಣಿಸಿಕೊಳ್ಳಬೇಕು.

ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದರೆ ಕುಳಿತು ಮಾರಾಟ ಮಾಡಲಾಗದ ಪರಿಸ್ಥಿತಿ ಬರುತ್ತದೆ. ಪ್ರತ್ಯೇಕ ಅಂಗಡಿ ಇರುವವರು ವ್ಯಾಪಾರ ಮಾಡಬಹುದು. ರಸ್ತೆ ಬದಿ ಕುಳಿತು ವ್ಯಾಪಾರ ಮಾಡುವವರ ಕಷ್ಟ ಹೇಳತೀರದು. ಸ್ವಯಂ ರಕ್ಷಣೆ ಜೊತೆ ಮಾರಾಟ ಮಾಡುವ ವಸ್ತುಗಳ ರಕ್ಷಣೆಗೂ ಮುಂದಾಗಬೇಕು.

‘ಸಂತೆಯಲ್ಲಿ ಮೂಲ ಸೌಲಭ್ಯಗಳು ಇಲ್ಲದೇ ಇರುವುದರಿಂದ ವ್ಯಾಪಾರಿಗಳು ಸಂತೆಯಲ್ಲಿ ಕುಳಿತು ಮಾರುತ್ತಿಲ್ಲ. ಹಳ್ಳಿಹಳ್ಳಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ ಸ್ವತಃ ರೈತರೇ ಮಾರಾಟಕ್ಕೆ ಮುಂದಾಗಿದ್ದಾರೆ. ಪಟ್ಟಣದ ಗುರುಒಪ್ಪತ್ತಸ್ವಾಮಿ ಮಠದ ಪಕ್ಕದಲ್ಲಿ ನಿತ್ಯ ಸಂತೆ ನಡೆಯುತ್ತದೆ. ಅಲ್ಲಿ ಆಗುವಷ್ಟು ವ್ಯಾಪಾರ ವಾರದ ಸಂತೆಯಲ್ಲಿ ಆಗುತ್ತಿಲ್ಲ. ನಷ್ಟ ಅನುಭವಿಸಿದ ವ್ಯಾಪಾರಿಗಳು ಬೇರೆ ಕಡೆ ದುಡಿಮೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಿ ಕರಿಬಸಪ್ಪ.

‘ಖಾಸಗಿ ಬಸ್‌ ನಿಲ್ದಾಣದ ಪಕ್ಕದಲ್ಲೇ ಸಂತೆ ನಡೆಯುವುದರಿಂದ ಹೆಚ್ಚು ಜನ ಬರುತ್ತಿದ್ದರು. ಕೊರೊನಾ ಕಾರಣದಿಂದ ಹೆಚ್ಚಿನ ಜನರು ನಷ್ಟ ಅನುಭವಿಸಿದ್ದಾರೆ. ಮೊದಲಿನಂತೆ ಜನರು ಖರೀದಿಗೆ ಆಸಕ್ತಿ ತೋರಿಸುತ್ತಿಲ್ಲ. ಯಾಲಕಪ್ಪನಹಟ್ಟಿ, ಶಿವನೇಕಟ್ಟೆ, ಕಂಠಾಪುರ, ಮತ್ತೋಡು, ದೇವಪುರ ಸೇರಿ ಹಲವು ಹಳ್ಳಿಗಳಿಂದ ಜನ ಬರುತ್ತಿದ್ದರು. ವಾರದ ಸಂತೆ ಹಬ್ಬದ ಸಂತೆಯಂತೆ ಇರುತ್ತಿತ್ತು. ಈಗ ಅದರ ವರ್ಚಸ್ಸು ಕಡಿಮೆಯಾಗಿದೆ. ಸಂತೆಗಾಗಿಯೇ ಬರುವವರೂ ಕಡಿಮೆಯಾಗಿದ್ದಾರೆ. ಒಂದು ಮೈದಾನ ನಿರ್ಮಿಸಿ, ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯ ನಿರ್ಮಿಸಿದರೆ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ವ್ಯಾಪಾರಿ ಶೃತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.