ADVERTISEMENT

ಜಾಗತಿಕ ಮಟ್ಟದಲ್ಲಿ ಪಸರಿಸಿದ ದೇಶದ ಕೀರ್ತಿ

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅಭಿಮತ, ‘ಮೋದಿ @20’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 1:58 IST
Last Updated 20 ಸೆಪ್ಟೆಂಬರ್ 2022, 1:58 IST
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್‌.ಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಮೋದಿ@20’ ಕೃತಿಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬಿಡುಗಡೆ ಮಾಡಿದರು. ಡಾ.ಎಚ್‌.ಎಸ್‌.ಶಿವಯೋಗಿಸ್ವಾಮಿ, ಎ.ಮುರುಳಿ, ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಡಿ.ಕುಂಬಾರ್, ಡಾ.ಎಚ್.ವಿಶ್ವನಾಥ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಇದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್‌.ಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಮೋದಿ@20’ ಕೃತಿಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬಿಡುಗಡೆ ಮಾಡಿದರು. ಡಾ.ಎಚ್‌.ಎಸ್‌.ಶಿವಯೋಗಿಸ್ವಾಮಿ, ಎ.ಮುರುಳಿ, ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಡಿ.ಕುಂಬಾರ್, ಡಾ.ಎಚ್.ವಿಶ್ವನಾಥ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಇದ್ದಾರೆ.   

ಚಿತ್ರದುರ್ಗ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಉನ್ನತಕ್ಕೆ ಬೆಳೆದಿದೆ. ದೇಶ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಜಿ.ಆರ್‌.ಹಳ್ಳಿಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಧ್ಯೇಯಪಥ ಅಕಾಡೆಮಿ ಹಾಗೂ ಶಿಕ್ಷಕರ ಪ್ರಕೋಷ್ಠದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಮೋದಿ @20’ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಅವರು ಮುಖ್ಯಮಂತ್ರಿ, ಪ್ರಧಾನಿಯಾಗಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಗುಜರಾತ್‌ ಮುಖ್ಯಮಂತ್ರಿಯಾಗಿ 12 ವರ್ಷ ಹಾಗೂ ಪ್ರಧಾನಿಯಾಗಿ 8 ವರ್ಷಗಳಿಂದ ಸೇವೆಯಲ್ಲಿದ್ದಾರೆ. ಅವರ ಕುರಿತು 20 ಲೇಖಕರ ಲೇಖನಗಳನ್ನು ಒಳಗೊಂಡ ಕೃತಿಯನ್ನು ಹೊರತರಲಾಗಿದೆ. ಮೋದಿ ಅವರು ಮಾಡಿದ ಅಭಿವೃದ್ಧಿ ಕಾರ್ಯ, ಅವರ ದೂರದೃಷ್ಟಿ, ಯೋಜನೆಗಳ ಬಗ್ಗೆ ಕೃತಿಯಲ್ಲಿ ವಿವರಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಮೋದಿ ಅವರಿಗೆ ಅಮೆರಿಕ ವೀಸಾ ನಿರಾಕರಿಸಿತ್ತು. ಪ್ರಧಾನಿಯಾದ ಬಳಿಕ ಮೋದಿ ಹಾಗೂ ಭಾರತದ ಶಕ್ತಿ ವಿಶ್ವಕ್ಕೆ ಮನದಟ್ಟಾಯಿತು. ಪ್ರಧಾನಿ ಮೋದಿ ಅವರು ಭೇಟಿ ನೀಡಿದ ದೇಶದ ಅಧ್ಯಕ್ಷರು ಅಥವಾ ಪ್ರಧಾನಿಯೇ ಬಂದು ಸ್ವಾಗತಿಸುತ್ತಿದ್ದಾರೆ. ವಿಶ್ವದ ಶ್ರೇಷ್ಠ ನಾಯಕರಲ್ಲಿ ನರೇಂದ್ರ ಮೊದಿ ಅಗ್ರಗಣ್ಯರು. ಅವರನ್ನು ಪ್ರಧಾನಿಯಾಗಿ ಪಡೆದಿರುವುದಕ್ಕೆ ದೇಶ ಹೆಮ್ಮೆಪಡಬೇಕು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ವಿಚಾರಧಾರೆ ಬಗ್ಗೆ ಯುವ ಜನರು ತಿಳಿದುಕೊಳ್ಳಬೇಕು. ಯುವ ಸಮೂಹ ಹೆಚ್ಚು ಅಧ್ಯಯನದಲ್ಲಿ ತೊಡಗಬೇಕು. ಹೆಚ್ಚು ಜ್ಞಾನ ಸಂಪಾದನೆ ಮಾಡಿದರೆ ದೇಶಕ್ಕೆ ಅನುಕೂಲ. ಆರ್ಥಿಕ ನೀತಿ, ರಾಜಕೀಯ ಹಾಗೂ ಮಹನೀಯರ ಕುರಿತು ಅರಿವು ಹೆಚ್ಚಿಸಿಕೊಳ್ಳಬೇಕು’ ಎಂದು ನುಡಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಡಾ.ಎಚ್‌.ಎಸ್‌. ಶಿವಯೋಗಿಸ್ವಾಮಿ, ‘ರಷ್ಯ–ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಎರಡೂ ದೇಶದ ಜನರ ಜೊತೆ ಮಾತನಾಡಿದವರು ನರೇಂದ್ರ ಮೋದಿ. ಉಕ್ರೇನ್‌ನಲ್ಲಿದ್ದ ಸಾವಿರಾರು ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಅಮೆರಿಕದ ಮಿಂಟ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ’ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ ಶ್ರೀಧರ್ ಬಾರ್ಕಿ ಪುಸ್ತಕದ ಕುರಿತು ಮಾತನಾಡಿದರು. ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ವಿಶ್ವನಾಥ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಶಿಕ್ಷಕರ ಪ್ರಕೋಷ್ಠದ ಕೆ.ಎಂ.ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.