ADVERTISEMENT

ಮೊಹರಂ: ತವರಿನ ಪ್ರೀತಿಯ ಪೀರಲ ಹಬ್ಬ

ಗುಡ್ಡದರಂಗವ್ವನಹಳ್ಳಿ ಗ್ರಾಮದಲ್ಲಿ ಭಾವೈಕ್ಯ ಮೂಡಿಸುವ ಆಚರಣೆ, ಭರ್ಜರಿ ಬಾಡೂಟ ಇಂದು

ಎಂ.ಎನ್.ಯೋಗೇಶ್‌
Published 6 ಜುಲೈ 2025, 6:11 IST
Last Updated 6 ಜುಲೈ 2025, 6:11 IST
ಗುಡ್ಡದರಂಗವ್ವನಹಳ್ಳಿ ಗ್ರಾಮದಲ್ಲಿ ಮೊಹರಂ ಅಂಗವಾಗಿ ಪೀರಲ ದೇವರ (ಹೊನ್ನೂರು ಸ್ವಾಮಿ) ಗುಡಿ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು
ಗುಡ್ಡದರಂಗವ್ವನಹಳ್ಳಿ ಗ್ರಾಮದಲ್ಲಿ ಮೊಹರಂ ಅಂಗವಾಗಿ ಪೀರಲ ದೇವರ (ಹೊನ್ನೂರು ಸ್ವಾಮಿ) ಗುಡಿ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು   

ಚಿತ್ರದುರ್ಗ: ನಗರದಿಂದ 7 ಕಿ.ಮೀ ದೂರದ ಗುಡ್ಡದರಂಗವ್ವನಹಳ್ಳಿ ಗ್ರಾಮದಲ್ಲಿ ನಡೆಯುವ ಮೊಹರಂ (ಪೀರಲ ಹಬ್ಬ) ಆಚರಣೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹಿಂದೂಗಳೇ ಆಚರಿಸುವ ಈ ಭಾವೈಕ್ಯ ಹಬ್ಬ ಹೆಣ್ಣುಮಕ್ಕಳ ಪಾಲಿಗೆ ತವರಿನ ಪ್ರೀತಿಯ ಹಬ್ಬವೂ ಆಗಿದೆ. ಎಲ್ಲೇ ಇದ್ದರೂ ಹೆಣ್ಣುಮಕ್ಕಳು ಪೀರಲ ಹಬ್ಬಕ್ಕೆ ಬಂದು ಪಂಜಾ ದೇವರ ದರ್ಶನ ಪಡೆಯುವುದು ಸಂಪ್ರದಾಯವಾಗಿದೆ.

ಗ್ರಾಮದಲ್ಲಿ ಕೇವಲ 10 ಮುಸ್ಲಿಂ ಕುಟುಂಬಗಳಿದ್ದು, ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ. ಮೊಹರಂ ಆಚರಣೆ ಬಂದರೆ ಗುಡ್ಡದರಂಗವ್ವನಹಳ್ಳಿಯಲ್ಲಿ ಧರ್ಮಭೇದವಿಲ್ಲ. ಬಹಳ ಹಿಂದಿನಿಂದಲೂ ಭಾವೈಕ್ಯ ಈ ಊರಿನ ಉಸಿರಾಗಿದೆ. ಹಿಂದೂ ಕುಟುಂಬ ಸದಸ್ಯರೇ ವೈಭವದಿಂದ ಮೊಹರಂ ಆಚರಣೆ ಮಾಡುತ್ತಾರೆ. 5,000 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಶ್ರದ್ಧಾ, ಭಕ್ತಿಯಿಂದ ಪೀರಲ ಹಬ್ಬ ಆಚರಣೆ ಮಾಡುತ್ತಾರೆ. ಮದುವೆಯಾಗಿ ಗಂಡನಮನೆಗೆ ಹೋದ ಹೆಣ್ಣು ಮಕ್ಕಳು ಪೀರಲ ಹಬ್ಬಕ್ಕೆ ತಪ್ಪದೇ ಹಾಜರಾಗುವುದು ಈ ಹಬ್ಬದ ವಿಶೇಷಗಳಲ್ಲಿ ಒಂದಾಗಿದೆ.

ಗ್ರಾಮದಲ್ಲಿರುವ ಪೀರಲ ದೇವರ (ಹೊನ್ನೂರು ಸ್ವಾಮಿ) ಗುಡಿಯಲ್ಲಿ 9 ಪಂಜಾ ದೇವರನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮೊಹರಂ ವಾರ ಆರಂಭವಾಗುತ್ತಿದ್ದಂತೆ ದೇವಾಲಯದಲ್ಲಿ ವಿಶೇಷ ಪೂಜೆ, ಪುನಸ್ಕಾರ ಆರಂಭಗೊಳ್ಳುತ್ತವೆ. ಹಿಂದೂ, ಮುಸ್ಲಿಂ ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಈ ವರ್ಷದ ಹಬ್ಬದ ಅಂಗವಾಗಿ ಕಳೆದೆರಡು ದಿನಗಳಿಂದ ಗ್ರಾಮದಲ್ಲಿ ಜಾತ್ರೆಯ ವಾತಾವರಣ ನೆಲೆಸಿದೆ. ಮದುವೆಯಾದ ಹೆಣ್ಣುಮಕ್ಕಳು ಈಗಾಗಲೇ ಗ್ರಾಮಕ್ಕೆ ಬಂದಿದ್ದಾರೆ. ಭಾನುವಾರ (ಜುಲೈ 6) ನಸುಕಿನಲ್ಲಿ ನಡೆದ ಕೆಂಡೋತ್ಸವ (ಅಲಾಯಿ) ಸಂಭ್ರಮ ಸೃಷ್ಟಿಸಿದೆ.

ADVERTISEMENT

ಹೊನ್ನೂರಸ್ವಾಮಿ ದೇವಾಲಯದಲ್ಲಿ ಪಂಜಾ ಪ್ರತಿಷ್ಠಾಪಿಸಿ ಒಡವೆ, ವಸ್ತ್ರಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಮುಸ್ಲಿಮರು ಕೂಡ ಪಾಲ್ಗೊಂಡು ದೇವರಿಗೆ ಸಕ್ಕರೆ, ಮಂಡಕ್ಕಿ, ಕಲ್ಲುಸಕ್ಕರೆ, ಒಣದ್ರಾಕ್ಷಿ ಅರ್ಪಿಸಿ ಓದಿಕೆ (ನಮಾಜ್‌) ನೆರವೇರಿಸಿದ್ದಾರೆ. ಗ್ರಾಮದ ಜನ ಮೊಹರಂ ದಿನ ಉಪವಾಸ ಇದ್ದು ರಾತ್ರಿಯಿಡೀ ವಿವಿಧ ಆಚರಣೆಯಲ್ಲಿ ತೊಡಗುತ್ತಾರೆ.

ಯುವಕರು ವಿವಿಧ ರೀತಿಯ ವೇಷ ಧರಿಸಿ ಮೆರವಣಿಗೆ ನಡೆಸುತ್ತಾರೆ. ಮುಖವಾಡ, ವಿವಿಧ ರೀತಿಯ ಪಟಗಳನ್ನು ತೊಟ್ಟು, ಮೈಗೆ ಬಣ್ಣ ಹಚ್ಚಿಕೊಂಡು ಕುಣಿತ ಹಾಕುತ್ತಾರೆ. ಊರಿನಾದ್ಯಂತ ಬ್ಯಾಂಡ್‌ಸೆಟ್‌ನೊಂದಿಗೆ ಮೆರವಣಿಗೆ ಮಾಡಿ ಆನಂದಿಸುತ್ತಾರೆ. ವಿವಿಧ ರೀತಿಯ ತಮಾಷೆಗಳೊಂದಿಗೆ ಕುಣಿಯುತ್ತಾ, ಕುಣಿಸುತ್ತಾ ಆನಂದ ಅನುಭವಿಸುತ್ತಾರೆ. ಅಳ್ಳೊಳ್ಳಿ ಬುಕ್ಕಾ, ಕರಡಿ, ಹುಲಿ ವೇಷ ಹಾಗೂ ಸ್ತ್ರೀ ವೇಷ ಹಾಕಿ ಮಕ್ಕಳನ್ನು ಬೆದರಿಸುವುದು ವಿಶೇಷ ಆಚರಣೆಯಾಗಿದೆ.

ಬೆಲ್ಲದ ತುಲಾಭಾರ: ಬೆಲ್ಲದ ತುಲಾಭಾರ ಸೇವೆ ಪೀರಲ ಹಬ್ಬದ ಪ್ರಮುಖ ಆಚರಣೆಯಾಗಿದೆ. ದೇವರಿಗೆ ಹರಕೆ ಕಟ್ಟಿಕೊಂಡಿದ್ದ ಭಕ್ತರು ತಮ್ಮ ದೇಹದ ತೂಕದಷ್ಟು ಬೆಲ್ಲ, ಸಕ್ಕರೆ ಅರ್ಪಿಸುತ್ತಾರೆ. ನೂರಾರು ಕ್ವಿಂಟಲ್‌ ಬೆಲ್ಲ, ಸಕ್ಕರೆ ಸಂಗ್ರಹವಾಗುವುದು ಪ್ರಮುಖ ಆಕರ್ಷಣೆಯಾಗಿದೆ. ಹಬ್ಬದ ನಿಮಿತ್ತ ನಡೆಯುವ ‘ಕಂದೂರು ಸೇವೆ’ಯೂ ಪ್ರಮುಖವಾಗಿದ್ದು, ಗ್ರಾಮದ ಹೆಣ್ಣುಮಕ್ಕಳು ಮನೆಮನೆಯಿಂದ ಪೂರ್ಣಕುಂಭ ಹೊತ್ತು ತಂದು ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಾರೆ. ಹಬ್ಬದ ಹಿಂದಿನ ದಿನವೇ ಕುಂಭಕ್ಕೆ ನೀರು ತುಂಬಿ ಮಾರನೇ ದಿನ ಕುಂಭದ ಮೆರವಣಿಗೆ ನಡೆಯುತ್ತದೆ.

‘ಹಲವು ತಲೆಮಾರುಗಳಿಂದ ಹಿಂದೂಗಳೇ ಸೇರಿ ಮೊಹರಂ ಹಬ್ಬ ಆಚರಿಸುತ್ತಿದ್ದೇವೆ. ಕೆಂಡೋತ್ಸವ ನಡೆಯುವ ದಿನ ಸಿಹಿ ಪದಾರ್ಥ ಅಡುಗೆ ಮಾಡುತ್ತೇವೆ. ಮಾರನೇ ದಿನ ಎಲ್ಲರ ಮನೆಯಲ್ಲೂ ಬಾಡೂಟ ನಡೆಯುತ್ತದೆ. ಅವರ ಶಕ್ತಿಯನುಸಾರ ಮರಿಗಳನ್ನು ಕಡಿದು ನೆಂಟರನ್ನು ಆಹ್ವಾನಿಸಿ ಬಾಡೂಟ ಬಡಿಸುತ್ತೇವೆ’ ಎಂದು ಗ್ರಾಮದ ಚಂದ್ರಶೇಖರ ರೆಡ್ಡಿ ತಿಳಿಸಿದರು.

ಹುಂಡಿ ಹರಾಜು

ವಿಶೇಷ ಮೊಹರಂ ಅಂಗವಾಗಿ ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ಹರಾಜು ಹಾಕಲಾಗುತ್ತದೆ. ಹರಾಜು ಮೂಲಕ ಹುಂಡಿ ಪಡೆದವರು ಮುಂದಿನ ವರ್ಷದ ಮೊಹರಂ ಆಚರಣೆ ವೇಳೆಗೆ ಬಡ್ಡಿ ಸಮೇತ ವಾಪಸ್‌ ಕಟ್ಟುತ್ತಾರೆ. ಇದೇ ಹಣದಲ್ಲಿ ಹಬ್ಬ ಆಚರಣೆ ಮಾಡಲಾಗುತ್ತದೆ. ‘ಹುಂಡಿ ಹರಾಜು ಪಡೆಯಲು ಸಾಕಷ್ಟು ಸ್ಪರ್ಧೆ ಇರುತ್ತದೆ. ಹುಂಡಿಯಲ್ಲಿ ಎಷ್ಟೇ ಹಣವಿದ್ದರೂ ಹರಾಜು ಕೂಗಿದ ಮೊತ್ತಕ್ಕೆ ಬಡ್ಡಿ ಸೇರಿಸಿ ವಾಪಸ್‌ ಕಟ್ಟುತ್ತಾರೆ’ ಎಂದು ಗ್ರಾಮದ ದುರ್ಗೇಶ್‌ ಹೇಳಿದರು.

ಹಿಂದೂ ಮುಸ್ಲಿಮರು ಒಗ್ಗಟ್ಟಿನಿಂದ ದೇವರ ದರ್ಶನಕ್ಕೆ ತೆರಳುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.